ADVERTISEMENT

ಶ್ವಾನ ನಗರಿಯಾಗುತ್ತಿದೆ ‘ಸ್ವಚ್ಛ ನಗರಿ’!

ನಾಯಿ ಕಾಟ; ಜನರ ಗೋಳಾಟ

ಕೆ.ಎಸ್.ಗಿರೀಶ್
Published 26 ಮೇ 2019, 19:23 IST
Last Updated 26 ಮೇ 2019, 19:23 IST
.
.   

ಮೈಸೂರು:ತುಂಗಾ ತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನಹಳ್ಳಿಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿನ ಜನಗಳಿಗತಿಗೋಳಾಟ
ಇಲಿಗಳು ಬಡಿದವು ನಾಯಿಗಳ ಇಲಿಗಳು ಕಡಿದವು ಬೆಕ್ಕುಗಳಕೆಲವನು ಕೊಂದವು ಕೆಲವನು ತಿಂದವು ಕೆಲವನು ಬೆದರಿಸಿ ಹಿಂಬಾಲಿಸಿದವು...

ಎಂಬ ಕುವೆಂಪು ಅವರ ‘ಬೊಮ್ಮನಹಳ್ಳಿ ಕಿಂದರಿಜೋಗಿ’ ಪದ್ಯವು ನಗರದ ಬೀದಿನಾಯಿಗಳನ್ನು ನೋಡಿದರೆ ನೆನಪಾಗುತ್ತದೆ.

ಕುವೆಂಪು ಅವರು ಹೇಳುವಂತೆ ಬೊಮ್ಮನಹಳ್ಳಿಗಳಲ್ಲಿ ಇಲಿಗಳು ಯಾವ ಯಾವ ಬಗೆಗಳಲ್ಲಿ ಕಾಟ ಕೊಡುತ್ತಿದ್ದವೋ ಅಷ್ಟೇ ಕಾಟವನ್ನು ಬೀದಿನಾಯಿಗಳು ನಾಗರಿಕರಿಗೆ ಕೊಡುತ್ತಿವೆ. ಇಡೀ ನಗರ ನಾಯಿಮಯವಾಗುತ್ತಿದೆ.

ADVERTISEMENT

ಬೀದಿಬೀದಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ನಾಯಿಗಳ ಸೈನ್ಯವೇ ಇದೆ. ವರ್ಷದಿಂದ ವರ್ಷಕ್ಕೆ ಇವುಗಳು ಪಾರ್ಥೇನಿಯಂ ತರಹ ಹೆಚ್ಚುತ್ತಿದೆ. ರಸ್ತೆಗಳಲ್ಲಿ ನಿತ್ಯ ನಡೆದಾಡುವುದು ದುಸ್ತರ ಎನಿಸುವಂತಾಗಿದೆ.

ವಿಶೇಷವಾಗಿ ರಾತ್ರಿ ವೇಳೆ ನಡೆದಾಡುವವರು, ದ್ವಿಚಕ್ರ ವಾಹನ ಸವಾರರು ಇವುಗಳಿಂದ ಹೈರಾಣಾಗಿದ್ದಾರೆ. ಅಂಗಡಿಗಳಲ್ಲಿ ಕೆಲಸ ಮಾಡುವವರು, ವ್ಯಾಪಾರ ಮುಗಿಸಿ ಮನೆಗೆ ತೆರಳುವ ವ್ಯಾಪಾರಸ್ಥರು, ಕಾರ್ಖಾನೆಗಳಲ್ಲಿ ಮಧ್ಯಾಹ್ನದ ಪಾಳಿಯ ಕೆಲಸ ಮುಗಿಸಿ ರಾತ್ರಿ ಮನೆಗೆ ಹೊರಡುವ ಕಾರ್ಮಿಕರು ಜೀವ ಕೈಯಲ್ಲಿಡಿದು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬೆಳಗಿನ ವಾಯುವಿಹಾರಿಗಳು, ರಾತ್ರಿ ವೇಳೆ ಊಟ ಮಾಡಿದ ನಂತರ ‘ವಾಕ್’ ಮಾಡುವವರು, ಬೇರೆ ಊರುಗಳಿಂದ ರಾತ್ರಿ ವೇಳೆ ತಮ್ಮ ಮನೆಯ ಸಮೀಪ ಇರುವ ಬಸ್‌ ಸ್ಟಾಪ್‌ಗಳಲ್ಲಿ ಇಳಿದು ಬ್ಯಾಗ್ ಹಿಡಿದು ಮನೆಗೆ ಹೋಗುವವರು ಬೆನ್ನಟ್ಟಿ ಬರುವ ನಾಯಿಗಳಿಂದ ಬಸವಳಿದಿದ್ದಾರೆ.

ಎಲ್ಲೆಲ್ಲಿ ನಾಯಿ ಇದೆ ಎಂದು ಕೇಳುವ ಬದಲು ಎಲ್ಲೆಲ್ಲಿ ಇಲ್ಲ ಎಂದು ಕೇಳುವ ಸ್ಥಿತಿ ನಗರದಲ್ಲಿದೆ. ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಗರಿ, ‘ನಾಯಿಗಳ ನಗರಿ’ ಎಂದು ಕರೆಸಿಕೊಳ್ಳುವ ದಿನ ದೂರ ಇಲ್ಲ ಎಂಬಂತಾಗಿದೆ.

ಮಾಂಸದಂಗಡಿಗಳ ಆಸುಪಾಸಿನಲ್ಲಿ ತೋಳಗಳ ಹಾಗೆ ಕೊಬ್ಬಿರುವ ನಾಯಿಗಳನ್ನು ನೋಡಿದರೆ ಸಾಕು ಅವು ಮೈಮೇಲೆ ಬೀಳುತ್ತವೆ. ಚೂಪಾದ ಹಲ್ಲುಗಳು, ದವಡೆಗಳು, ಅವುಗಳ ಬೊಗಳುವ ಶಬ್ದ, ಬೆನ್ನಟ್ಟುವ ಶಕ್ತಿ ಇವೆಲ್ಲವೂ ತೋಳಗಳಿಗೆ ಸರಿಸಮ ಎನಿಸುವಂತಿವೆ.

ನಾಯಿ ಕಡಿತಕ್ಕೆ ಒಳಗಾದವರು ಅನೇಕರಿದ್ದಾರೆ. ಆದರೆ, ಇವರೆಲ್ಲರೂ ಬಡ ಕಾರ್ಮಿಕರು, ಕೂಲಿಕಾರರು, ರಾತ್ರಿ ವೇಳೆ ಸಣ್ಣದೊಂದು ಮೊಪೆಡ್‌ನಲ್ಲಿ ಮನೆಗೆ ತೆರಳುವ ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಮಾಡುವವರೇ ಆಗಿದ್ದಾರೆ. ಇವರು ನಾಯಿ ಕಡಿತಕ್ಕೆ ಚುಚ್ಚುಮದ್ದು ತೆಗೆದುಕೊಳ್ಳುವಷ್ಟರಲ್ಲೇ ಹೈರಾಣಾಗಿರುತ್ತಾರೆ. ನಾಯಿ ಕಡಿತವನ್ನು ಅಧಿಕಾರಿಗಳ ಗಮನಕ್ಕೆ ತರುವುದೇ ಇಲ್ಲ. ಇದರಿಂದ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ.

ಜನರೇ ಹುಚ್ಚು ನಾಯಿಯನ್ನು ಕೊಂದರು!: ಜನವರಿ 4ರಂದು ಮೈಸೂರು ತಾಲ್ಲೂಕಿನ ಪಿಲ್ಲಳ್ಳಿ, ವರಕೊಡು, ಮೂಡಲಹುಂಡಿ ಗ್ರಾಮಗಳ ಜನರು ಆತಂಕಗೊಂಡಿದ್ದರು. ಇಲೆಲ್ಲ ಚಿರತೆಗಳ ಕಾಟ ಸಾಮಾನ್ಯ. ಆದರೆ, ಇವರು ಆತಂಕಗೊಂಡಿದ್ದು ಚಿರತೆಗಳಿಗಲ್ಲ. ಬದಲಿಗೆ, ನಾಯಿಯೊಂದಕ್ಕೆ!

ಹುಚ್ಚುನಾಯಿಯೊಂದು ಈ 3 ಗ್ರಾಮಗಳಿಗೆ ನುಗ್ಗಿ ಒಂದೇ ದಿನ 10 ಮಂದಿಯನ್ನು ಮನಬಂದಂತೆ ಕಚ್ಚಿತು. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಪೇಪರ್ ಮಿಲ್ ಬಳಿ ವ್ಯಕ್ತಿಯೊಬ್ಬರನ್ನು ಅಟ್ಟಾಡಿಸುತ್ತಿದ್ದಾಗ ಸುತ್ತುವರೆದು ನಾಯಿಯನ್ನು ಕೊಂದು ಹಾಕಿದರು.

ಕಚ್ಚಿದ ನಾಯಿಯನ್ನು ಹುಡುಕಿ ಹೊಡೆದರು!: ಕಳೆದ ವರ್ಷ ಡಿ. 6ರಂದು ಇಲ್ಲಿನ ಲೋಕನಾಯಕ ನಗರದಲ್ಲಿ ನಾಯಿಯೊಂದರ ಮೇಲೆ ಇಬ್ಬರು ಯುವಕರು ರಾಡ್‌ಗಳಿಂದ ಹಲ್ಲೆ ನಡೆಸಿದ್ದರು. ಈ ಸಂಬಂಧ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿಗಳ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಹೆಬ್ಬಾಳ ಪೊಲೀಸರು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ‘ಕಳೆದ ವಾರ ನಾಯಿ ಕಚ್ಚಿತ್ತು. ಇದರಿಂದ ಚಿಕಿತ್ಸೆ ಪಡೆಯಲು ಅಧಿಕ ಹಣ ವೆಚ್ಚವಾಯಿತು. ಹೀಗಾಗಿ, ಹುಡುಕಿ ಹಲ್ಲೆ ನಡೆಸುವ ಮೂಲಕ ಸೇಡು ತೀರಿಸಿಕೊಂಡೆವು’ ಎಂದು ಆರೋಪಿಗಳು ಹೇಳಿದ್ದರು.

ಚಿರತೆಗಳಿಗೆ ಆಹ್ವಾನ ನೀಡುವ ನಾಯಿಗಳು!: ಕಾಡಿನಲ್ಲಿರುವ ಚಿರತೆಗಳನ್ನು ನಗರದೊಳಗೆ ನಾಯಿಗಳು ಕೈ ಬೀಸಿ ಕರೆಯುತ್ತಿವೆ. ಚಿರತೆ ನಗರದೊಳಗೆ ಬರುವುದಕ್ಕೂ, ನಾಯಿಗಳಿಗೂ ನೇರ ಸಂಬಂಧ ಇದೆ. ಈ ಅಂಶದೆಡೆಗೆ ಯಾರೊಬ್ಬರೂ ಯೋಚಿ ಸದಿರುವುದು ನಿಜಕ್ಕೂ ಸೋಜಿಗದ ಸಂಗತಿ.

ಚಿರತೆಗಳಿಗೆ ನಾಯಿ ಮಾಂಸ ಅಚ್ಚುಮೆಚ್ಚು. ನಾಯಿಗಳನ್ನು ತಿನ್ನಲೆಂದು ನಗರಗಳತ್ತ ದಾಂಗುಡಿ ಇಡುತ್ತವೆ. ನಾಯಿಗಳು ಇಲ್ಲದಿದ್ದರೆ ಚಿರತೆಗಳು ನಗರಕ್ಕೆ ಬರುವುದೇ ಇಲ್ಲ.

ಚಾಮುಂಡಿ ಬೆಟ್ಟದಲ್ಲಿ ಕನಿಷ್ಠ ಎಂದರೂ 4ರಿಂದ 5 ಚಿರತೆಗಳು ಇವೆ. ಇಲ್ಲಿನ ಅರಣ್ಯದಲ್ಲಿ ಅವು ತಮ್ಮ ಪಾಡಿಗೆ ತಾವು ವಾಸ ವಾಗಿವೆ. ಆದರೆ, ನಗರದ ಹೊರ ವಲಯ ದಲ್ಲಿರುವ ನಾಯಿಗಳನ್ನು ಹಿಡಿಯಲು ಚಿರತೆಗಳು ಬರುತ್ತವೆ. ಇವುಗಳ ಬೆನ್ನತ್ತಿ ಬರುವ ಚಿರತೆ
ಗಳು ಗೌರಿಶಂಕರನಗರ, ಪರಸಯ್ಯನಹುಂಡಿ, ಕಳವಾಡಿ, ಇಲವಾಲ, ಹೆಬ್ಬಾಳ ಸೇರಿ ದಂತೆ ನಗರದ ಹೊರವಲಯದ ಬಡಾವಣೆಗಳಿಗೆ ಲಗ್ಗೆ ಇಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.