ADVERTISEMENT

ಸಂಶೋಧನೆಗೆ ಹೆಚ್ಚಿನ ಅನುದಾನ ಅಗತ್ಯವಿದೆ: ಡಾ.ಸಿ.ಎನ್.ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 11:31 IST
Last Updated 8 ಸೆಪ್ಟೆಂಬರ್ 2022, 11:31 IST
ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್‌ ಅಂಡ್ ಜಿನೋಮಿಕ್ಸ್‌ ಅಧ್ಯಯನ ವಿಭಾಗದಿಂದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರ ಆಯೋಜಿಸಿದ್ದ ಜೀವ ವೈದ್ಯಕೀಯ ವಿಜ್ಞಾನಗಳ ಭಾರತೀಯ ಅಕಾಡೆಮಿಯ ದಕ್ಷಿಣ ವಲಯದ ಮೊದಲ ಸಮ್ಮೇಳನ ಮತ್ತು ಸಂಶೋಧನೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಡಾ.ಹರಿ ಎಸ್.ಶರ್ಮಾ, ಡಾ.ಸಿ.ಎನ್.ಮಂಜುನಾಥ್‌ ಹಾಗೂ ಪ್ರೊ.ಜಿ.ಹೇಮಂತ್‌ಕುಮಾರ್‌ ಉದ್ಘಾಟಿಸಿದರು. ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಎಸ್.ಎಸ್.ಮಾಲಿನಿ ಇದ್ದಾರೆ/ ಪ್ರಜಾವಾಣಿ ಚಿತ್ರ
ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್‌ ಅಂಡ್ ಜಿನೋಮಿಕ್ಸ್‌ ಅಧ್ಯಯನ ವಿಭಾಗದಿಂದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರ ಆಯೋಜಿಸಿದ್ದ ಜೀವ ವೈದ್ಯಕೀಯ ವಿಜ್ಞಾನಗಳ ಭಾರತೀಯ ಅಕಾಡೆಮಿಯ ದಕ್ಷಿಣ ವಲಯದ ಮೊದಲ ಸಮ್ಮೇಳನ ಮತ್ತು ಸಂಶೋಧನೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಡಾ.ಹರಿ ಎಸ್.ಶರ್ಮಾ, ಡಾ.ಸಿ.ಎನ್.ಮಂಜುನಾಥ್‌ ಹಾಗೂ ಪ್ರೊ.ಜಿ.ಹೇಮಂತ್‌ಕುಮಾರ್‌ ಉದ್ಘಾಟಿಸಿದರು. ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಎಸ್.ಎಸ್.ಮಾಲಿನಿ ಇದ್ದಾರೆ/ ಪ್ರಜಾವಾಣಿ ಚಿತ್ರ   

ಮೈಸೂರು: ‘ಜೀವನ ಮಟ್ಟ ಸುಧಾರಿಸುವಲ್ಲಿ ಸಂಶೋಧನೆಯ ಪಾತ್ರ ಮಹತ್ವದ್ದಾಗಿದ್ದು, ಈ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಒದಗಿಸಬೇಕು’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್‌ ಒತ್ತಾಯಿಸಿದರು.

ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್‌ ಅಂಡ್ ಜಿನೋಮಿಕ್ಸ್‌ ಅಧ್ಯಯನ ವಿಭಾಗದಿಂದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರ ಆಯೋಜಿಸಿದ್ದ ಜೀವವೈದ್ಯಕೀಯ ವಿಜ್ಞಾನಗಳ ಭಾರತೀಯ ಅಕಾಡೆಮಿ (ಐಎಬಿಎಸ್‌ಸಿಒಎನ್‌) ದಕ್ಷಿಣ ವಲಯದ ಮೊದಲ ಸಮ್ಮೇಳನ ಮತ್ತು ಸಂಶೋಧನೆ (ಟ್ರಾನ್ಸ್‌ನೇಷನಲ್‌ ರಿಸರ್ಚ್‌) ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

‘ಹಿಂದಕ್ಕೆ ಹೋಲಿಸಿದರೆ, ಸಂಶೋಧನೆಗೆ ಈಗ ಕೊಡುತ್ತಿರುವ ಅನುದಾನವು ಬಹಳ ಕಡಿಮೆ ಪ್ರಮಾಣದಲ್ಲಿದೆ’ ಎಂದು ತಿಳಿಸಿದರು.

ADVERTISEMENT

ಮಾನವ ನಿರ್ಮಿತ ವಿಕೋಪಗಳು:‘ಹವಾಮಾನ ವೈಪರೀತ್ಯ, ನೀರಿನ ತತ್ವಾರ, ಆರ್ಥಿಕ ಕೊರತೆ, ಪರದೆಯ ಚಟ (ಸ್ಕ್ರೀನ್ ಅಡಿಕ್ಸನ್) ಹಾಗೂ ಒಂಟಿತನದ ಕಾಯಿಲೆ ದೊಡ್ಡ ಪ್ರಮಾಣದಲ್ಲಿ ಕಾಡುತ್ತಿದೆ. ಕೋವಿಡ್‌ನಂತಹ ಕಾಯಿಲೆಗಳ ‌ಸುನಾಮಿಯೇ ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತಿದೆ. ಇವೆಲ್ಲವೂ ಮಾನವ ನಿರ್ಮಿತ ‌ವಿಕೋಪಗಳಾಗಿದ್ದು, ಬಹಳ ಕಾಡುತ್ತಿವೆ’ ಎಂದು ತಿಳಿಸಿದರು.

‘ಜೆನೆಟಿಕ್ (ಅನುವಂಶಿಕ) ಅಧ್ಯಯನವಿಲ್ಲದೆ ಯಾವ ಕ್ರಾಂತಿಯೂ ಆಗುವುದಿಲ್ಲ. ಕೆಲವಕ್ಕೆ ಹಿಂದೆ ಚಿಕಿತ್ಸೆಯೇ ಇರಲಿಲ್ಲ. ಈಗ ಇದೆ. ಜೀವನಶೈಲಿ ಹಾಗೂ ಹವಾಮಾನ ವೈಪರೀತ್ಯದ ಕಾರಣಕ್ಕೆ ಹಲವು ಕಾಯಿಲೆಗಳು ಬರುತ್ತಿವೆ. ಕೋವಿಡ್, ಮಂಕಿಪಾಕ್ಸ್‌ನಂತಹ ಕಾಯಿಲೆಗಳು ಮಾನವನಿರ್ಮಿತ ವಿಕೋಪಗಳೇ’ ಎಂದು ಪ್ರತಿಪಾದಿಸಿದರು.

‘ಹಿಂದೆ ಲಸಿಕೆ ಸಿದ್ಧಪಡಿಸಲು 10ರಿಂದ 20 ವರ್ಷಗಳೇ ಬೇಕಾಗುತ್ತಿದ್ದವು. ಕೋವಿಡ್ ತಡೆಗೆ ಲಸಿಕೆಯು ವರ್ಷದೊಳಗೆ ಬರುತ್ತದೆ ಎಂದು ಯಾರೂ ನಂಬಿರಲಿಲ್ಲ. ಇದು, ಜೆನೆಟಿಕ್ ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನದ ಸುಧಾರಣೆಯಿಂದ ಸಾಧ್ಯವಾಯಿತು. ಇಲ್ಲದಿದ್ದರೆ ಮತ್ತಷ್ಟು ಲಕ್ಷಾಂತರ ‌ಮಂದಿ ಸಾಯುತ್ತಿದ್ದರು’ ಎಂದರು.

ಬದಲಾವಣೆ ಆಗಬೇಕು:‘ಪ್ರಸ್ತುತ ಜೀವ‌ನಶೈಲಿ ಮತ್ತು ಆಹಾರ ಸಂಸ್ಕೃತಿ ಬದಲಾಗುತ್ತಿದ್ದು ಎಲ್ಲರೂ ಒತ್ತಡದಲ್ಲಿ ಸಿಲುಕಿದ್ದೇವೆ. ಚಿಣ್ಣರ ಮೇಲೂ ಇಂದು ಬಹಳಷ್ಟು ಒತ್ತಡವಿದೆ. ಇದನ್ನು ಹೋಗಲಾಡಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ‌ಬದಲಾವಣೆ ಆಗಬೇಕು. ಶಾಲೆಯು ಬೆಳಿಗ್ಗೆ 10ಕ್ಕೆ ಶುರುವಾಗಿ 12ಕ್ಕೆ ಮುಗಿಯುವಂತಿರಬೇಕು. ವಾರದಲ್ಲಿ ನಾಲ್ಕು‌ ದಿನಗಳಷ್ಟೆ ಶಾಲೆ ಇರಬೇಕು’ ಎಂದು ಸಲಹೆ ನೀಡಿದರು.

‘ಮಕ್ಕಳ ಶಿಕ್ಷಣವು ತಾಯಂದಿರಿಗೆ ಪರೀಕ್ಷೆ ಎನ್ನುವಂತಾಗಿದೆ. ಯುಕೆಜಿಯಲ್ಲಿ ಮಕ್ಕಳು ಒಳ್ಳೆಯ ಅಂಕ ಗಳಿಸಲಿಲ್ಲವೆಂದು ತಾಯಂದಿರು ಅನಗತ್ಯ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದು ಬದಲಾಗಬೇಕು’ ಎಂದು ಆಶಿಸಿದರು.

ಚಿಕ್ಕ ವಯಸ್ಸಿನವರಲ್ಲೇ:‘ಹೃದ್ರೋಗ, ಕ್ಯಾನ್ಸರ್, ಪಾರ್ಶ್ವವಾಯು‌, ಮಧುಮೇಹ ಮೊದಲಾದವುಗಳು ಚಿಕ್ಕ ವಯಸ್ಸಿನವರಲ್ಲಿಯೇ ಕಾಣಿಸಿಕೊಳ್ಳುವ ಪ್ರಮಾಣ ಜಾಸ್ತಿಯಾಗುತ್ತಿದೆ. ಶೇ 50ರಷ್ಟು ಸಾವುಗಳು ಅದರಿಂದಲೇ ಆಗುತ್ತಿದೆ. ಜಯದೇವ ಆಸ್ಪತ್ರೆಯಲ್ಲಿ 5 ವರ್ಷಗಳಲ್ಲಿ 6ಸಾವಿರ ಮಂದಿ 16ರಿಂದ 45 ವರ್ಷದವರು ಚಿಕಿತ್ಸೆ ಪಡೆದಿದ್ದಾರೆ. ಹೃದ್ರೋಗದ ಸಮಸ್ಯೆಗೆ ಒಳಗಾದವರವರು’ ಎಂದು ತಿಳಿಸಿದರು.

‘ಹಿಂದೆಲ್ಲಾ 65 ವರ್ಷದ ನಂತರ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದವು. ಈಗ, ಜೀವನಶೈಲಿ ಬದಲಾವಣೆಯಿಂದಾಗಿ 45 ವರ್ಷ ವಯಸ್ಸಿನವರಲ್ಲೇ ಆಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. 20 ಲಕ್ಷ ಜನ ವಾಯುಮಾಲಿನ್ಯದಿಂದ ಸಾವಿಗೀಡಾಗಿದ್ದಾರೆ ಎಂದು ವರದಿಯೊಂದು ಹೇಳಿದೆ. ವಾಯುಮಾಲಿನ್ಯವು ಶ್ವಾಸಕೋಶದ ಸಮಸ್ಯೆ ಜೊತೆಗೆ‌ ಹೃದ್ರೋಗಕ್ಕೂ ಕಾರಣವಾಗುತ್ತಿದೆ’ ಎಂದು ಹೇಳಿದರು.

ರಿಸ್ಕ್‌ ಫ್ಯಾಕ್ಟರ್‌ ಇಲ್ಲದಿದ್ದರೂ:‘ದೇಶದಲ್ಲಿ ಸಂಭವಿಸುತ್ತಿರುವ ಶೇ 30ರಷ್ಟು ಸಾವುಗಳು ಹೃದಯಾಘಾತಕ್ಕೆ‌ ಸಂಬಂಧಿಸಿದವಾಗಿವೆ. ಇದರಲ್ಲಿ ಶೇ 30ರಷ್ಟು‌ ಮಂದಿ ಧೂಮಪಾನ, ಮಧುಮೇಹ,‌ ಬೊಜ್ಜು‌ ಇಲ್ಲದಿದ್ದರೂ (ರಿಸ್ಕ್‌ ಫ್ಯಾಕ್ಟರ್) ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಹೆಚ್ಚು ಸಂಶೋಧನೆ ನಡೆಯಬೇಕಾಗುತ್ತದೆ’ ಎಂದರು.

‘ತಡವಾಗಿ ಮದುವೆಯಾಗುವುದು ಹಾಗೂ ಮಕ್ಕಳು ಮಾಡಿಕೊಳ್ಳುವುದು ಕೂಡ ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಿಂದೆ ಮದುವೆ ಮಾಡುವಾಗ ಜಾತಕ ನೋಡುತ್ತಿದ್ದರು. ಈಗ, ಜೆನೆಟಿಕ್ ಹಾರೊಸ್ಕೋಪ್ (ಅನುವಂಶಿಕ ಜಾತಕ)ನ ನೋಡಲಾಗುತ್ತಿದೆ. ಜೀವನ ಸಂಗಾತಿಯಾಗುವವರ ಹೃದಯ ಆರೋಗ್ಯವಂತವಾಗಿದೆಯೇ ಎಂದು ತಿಳಿದುಕೊಳ್ಳುವುದು ವಿದೇಶಗಳಲ್ಲಿ ನಡೆಯುತ್ತಿದೆ. ಆರೋಗ್ಯಕರ ಜೀವನ ಶೈಲಿ ಅನುಸರಿಸಿದರೆ ಹಲವು ಸಮಸ್ಯೆಗಳಿಂದ ದೂರವಿರಬಹುದು’ ಎಂದು ತಿಳಿಸಿದರು.

ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ‘ಆರೋಗ್ಯ ಸೇವಾ ಕ್ಷೇತ್ರದಲ್ಲಿನ ಸಂಶೋಧನೆಯ ಜ್ಞಾನ‌‌ವು ಜನರು ಹಾಗೂ ಸಮಾಜವನ್ನು ತಲುಪಬೇಕು’ ಎಂದು ಆಶಿಸಿದರು.

ಮೈಸೂರು ವಿ.ವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌, ಆಮ್‌ಸ್ಟರ್‌ಡ್ಯಾಮ್ ಯೂನಿವರ್ಸಿಟಿ ಮೆಡಿಕಲ್‌ ಸೆಂಟರ್‌ನ ಡಾ.ಹರಿ ಎಸ್.ಶರ್ಮಾ ಮಾತನಾಡಿದರು.

ಜೆನೆಟಿಕ್ಸ್‌ ಅಂಡ್ ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಎಸ್.ಮಾಲಿನಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.