ADVERTISEMENT

ಉದಾರ, ವಿಶಾಲ ಮನೋಭಾವ ಬೆಳೆಸಿಕೊಳ್ಳಿ: ಡಾ.ಡಿ. ತಿಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 4:18 IST
Last Updated 29 ಜುಲೈ 2025, 4:18 IST
ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆ ಹಾಗೂ ನವ ವಿಶ್ವಮಾನವ ಟ್ರಸ್ಟ್‌ ವತಿಯಿಂದ ಡಿ.ಶಿವಣ್ಣ, ಆರ್‌.ಸಿದ್ದರಾಜು, ಪ್ರೊ.ಎಚ್‌. ಕಮಲಾ, ಪಿ. ಕೃಷ್ಣಯ್ಯ, ಪ್ರೊ.ಶಬ್ಬೀರ್‌  ಮುಸ್ತಫಾ, ಗೌರಮ್ಮ ಅವರನ್ನು ಸೋಮವಾರ ಸನ್ಮಾನಿಸಲಾಯಿತು– ಪ್ರಜಾವಾಣಿ ಚಿತ್ರ
ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆ ಹಾಗೂ ನವ ವಿಶ್ವಮಾನವ ಟ್ರಸ್ಟ್‌ ವತಿಯಿಂದ ಡಿ.ಶಿವಣ್ಣ, ಆರ್‌.ಸಿದ್ದರಾಜು, ಪ್ರೊ.ಎಚ್‌. ಕಮಲಾ, ಪಿ. ಕೃಷ್ಣಯ್ಯ, ಪ್ರೊ.ಶಬ್ಬೀರ್‌  ಮುಸ್ತಫಾ, ಗೌರಮ್ಮ ಅವರನ್ನು ಸೋಮವಾರ ಸನ್ಮಾನಿಸಲಾಯಿತು– ಪ್ರಜಾವಾಣಿ ಚಿತ್ರ   

ಮೈಸೂರು: ‘ಪ್ರತಿಯೊಬ್ಬರೂ ಉದಾರತೆ, ಒಳ್ಳೆಯತನ ಮತ್ತು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಸಲಹೆ ನೀಡಿದರು.

ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆ ಹಾಗೂ ನವ ವಿಶ್ವಮಾನವ ಟ್ರಸ್ಟ್‌ ಸೋಮವಾರ ಇಲ್ಲಿನ ಮಹಾರಾಜ ಕಾಲೇಜು ಹೊಸ ಕಟ್ಟಡದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ, ಸಿಂಡಿಕೇಟ್‌ ಸದಸ್ಯ ಪ್ರೊ.ಶಬ್ಬೀರ್‌ ಮುಸ್ತಫಾ ಅವರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಕರ್ತವ್ಯಲೋಪ ಇಲ್ಲದೆ ಕೆಲಸ ಮಾಡಿದರೆ ವೃತ್ತಿ ಜೀವನ ಸಾರ್ಥಕವಾಗುತ್ತದೆ. ಯಾವುದೇ ನೌಕರಿ ಇರಲಿ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಸರ್ಕಾರಿ ನೌಕರಿ ಪಡೆದವರು ಸಕಾರಾತ್ಮಕ ಧೋರಣೆಯೊಂದಿಗೆ ಸಮಾಜಕ್ಕೆ ನೆರವಾಗಬೇಕು’ ಎಂದು ತಿಳಿಸಿದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ, ‘ಸರಿಯಾಗಿ ಕಾರ್ಯನಿರ್ವಹಿಸಿದರೆ ಸ್ಮರಿಸಿ, ಸನ್ಮಾನಿಸಿ ಬೀಳ್ಕೊಡಲಾಗುತ್ತದೆ’ ಎಂದರು.

ವಿಜಯನಗರ ಎಸಿಪಿ ಪಿ. ರವಿಪ್ರಸಾದ್‌ ಮಾತನಾಡಿ, ‘ಮಹಾರಾಜ ಕಾಲೇಜಿಗೆ ದೊಡ್ಡ ಪರಂಪರೆ ಇದೆ. ನಾನೂ ಈ ಕಾಲೇಜಿನ ವಿದ್ಯಾರ್ಥಿ. ನಮ್ಮ ಬ್ಯಾಚ್‌ನ 27 ಮಂದಿ ಎಸ್‌ಐಗಳಾಗಿ ಆಯ್ಕೆಯಾದೆವು. ವಿದ್ಯಾರ್ಥಿಗಳು ಉತ್ತಮ ಗುರುಗಳ ಮಾರ್ಗದರ್ಶನ ಪಡೆದು ಮುಂದೆ ಬರಬೇಕು’ ಎಂದು ಹೇಳಿದರು.

ಮೈವಿವಿ ಸಿಂಡಿಕೇಟ್‌ ಸದಸ್ಯ ಪ್ರೊ.ಶಬ್ಬೀರ್‌ ಮುಸ್ತಫಾ ಮಾತನಾಡಿ, ‘ಪ್ರಸ್ತುತ ಉನ್ನತ ಶಿಕ್ಷಣದ ಪರಿಸ್ಥಿತಿ ಚೆನ್ನಾಗಿಲ್ಲ. ಶೇ 80ರಷ್ಟು ಮಂದಿಯನ್ನು ಅತಿಥಿ ಉಪನ್ಯಾಸಕರಾಗಿಯೇ ದುಡಿಸಿಕೊಳ್ಳಲಾಗುತ್ತಿದೆ. ಇದರಿಂದ ಗುಣಾತ್ಮಕ ಶಿಕ್ಷಣ ಸಾಧ್ಯವಾಗಿಲ್ಲ. ಆದ್ದರಿಂದ ಇಂತಹ ವ್ಯವಸ್ಥೆ ವಿರುದ್ಧ ಪ್ರತಿಭಟಿಸಬೇಕು’ ಎಂದು ತಿಳಿಸಿದರು.

ಮಹಾರಾಜ ಕಾಲೇಜು ಪ್ರಾಂಶುಪಾಲ ಎಚ್.ಸಿ. ದೇವರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮುಖ್ಯ ಅತಿಥಿಯಾಗಿದ್ದರು. ಮಹಾರಾಜ ಕಾಲೇಜಿನ ಅಧೀಕ್ಷಕ ಉಮೇಶಚಂದ್ರ, ವಿನೋದ್‌, ವರ್ಗವಾದ ಚಂದ್ರಶೇಖರ್‌ ಹಾಗೂ ಹೇಮಂತಕುಮಾರ್‌ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯ ಅಧ್ಯಕ್ಷ ಆರ್‌. ವಾಸುದೇವ, ಭಾಸ್ಕರ್‌, ವಿನೋದ್‌, ಕೆ. ಗಣೇಶ್‌, ಚಿದಾನಂದ, ನವೀನ್‌, ಟಿ.ಎಂ. ಸರಸ್ವತಿ, ಬಿ.ಎಸ್‌. ದಿನಮಣಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.