ADVERTISEMENT

ಮೈಸೂರು | ರಂಗವೇರಲು ‘ಸತ್ಯವನ್ನೇ ಹೇಳುತ್ತೇನೆ’ ಸಜ್ಜು

ಅಡ್ಡಂಡ ಕಾರ್ಯಪ್ಪ ಅವರಿಂದ ಹೊಸ ನಾಟಕ; 29ರಿಂದ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 6:56 IST
Last Updated 24 ಅಕ್ಟೋಬರ್ 2024, 6:56 IST
ಕಲಾವಿದರು ‘ಸತ್ಯವನ್ನೇ ಹೇಳುತ್ತೇನೆ’ ನಾಟಕದ ತಾಲೀಮಿನಲ್ಲಿ ತೊಡಗಿರುವುದು
ಕಲಾವಿದರು ‘ಸತ್ಯವನ್ನೇ ಹೇಳುತ್ತೇನೆ’ ನಾಟಕದ ತಾಲೀಮಿನಲ್ಲಿ ತೊಡಗಿರುವುದು   

ಮೈಸೂರು: ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ರಂಗಪ್ರಯೋಗಕ್ಕೆ ತಂದಿದ್ದ, ‘ಟಿಪ್ಪು ನಿಜಕನಸುಗಳು’ ಹಾಗೂ ‘ಕರಿನೀರವೀರ’ ನಾಟಕವನ್ನು ರಚಿಸಿ– ನಿರ್ದೇಶಿಸಿದ್ದ ರಂಗಕರ್ಮಿ ಅಡ್ಡಂಡ ಸಿ.ಕಾರ್ಯಪ್ಪ ಅವರು, ‘ಸತ್ಯವನ್ನೇ ಹೇಳುತ್ತೇನೆ’ ಮೂಲಕ ಮತ್ತೊಮ್ಮೆ ರಂಗಪ್ರಿಯರ ಮುಂದೆ ಬರುತ್ತಿದ್ದಾರೆ.

ಕೊಡಗಿನ ರಂಗಭೂಮಿ ಟ್ರಸ್ಟ್‌ ಪ್ರಸ್ತುತಿಯ ನಾಟಕವನ್ನು ಅವರು ‘ಚರಿತ್ರೆಯ ಉತ್ಖನನ’ ಎಂದು ಕರೆದಿದ್ದಾರೆ. ಅವರದ್ದೇ ರಚನೆ, ವಿನ್ಯಾಸ ಹಾಗೂ ನಿರ್ದೇಶನದಲ್ಲಿ ರಂಗದ ಮೇಲೆ ಬರಲು ಸಜ್ಜಾಗಿದೆ. ಇದನ್ನು ಕೃತಿಯನ್ನಾಗಿಯೂ ಮಾಡಿದ್ದು ಅ.25ರಂದು ಸಂಜೆ 5.30ಕ್ಕೆ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಬಿಡುಗಡೆ ಕಾಣಲಿದೆ. ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್, ರಂಗಕರ್ಮಿ ಪ್ರಕಾಶ್ ಬೆಳವಾಡಿ ಹಾಗೂ ಡಾ.ಚಂದ್ರಶೇಖರ್‌ ಪಾಲ್ಗೊಳ್ಳಲಿದ್ದಾರೆ.

ಅದೇ ವೇದಿಕೆಯಲ್ಲಿ ಅ.28, 29, 30 ಹಾಗೂ 31ರಂದು ಸಂಜೆ 6.30ಕ್ಕೆ ನಾಟಕದ ಪ್ರದರ್ಶನವೂ ನಡೆಯಲಿದೆ. ರವಿ  ಮೂರೂರು ಸಂಗೀತ ನಿರ್ದೇಶನ ನೀಡಿದ್ದು, ಧ್ವನಿವಿನ್ಯಾಸ ಸುಬ್ರಹ್ಮಣ್ಯ ಮೈಸೂರು ಅವರದ್ದು. ಪ್ರದರ್ಶನಕ್ಕಾಗಿ ಕಲಾವಿದರು ತಾಲೀಮಿನಲ್ಲಿ ತೊಡಗಿದ್ದಾರೆ.

ADVERTISEMENT

ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದ ಕಾರ್ಯಪ್ಪ ವಿವಾದಗಳಿಂದಲೇ ಸದ್ದು ಮಾಡಿದ್ದರು. ಅವರ ‘ಟಿಪ್ಪು ನಿಜಕನಸುಗಳು’ ನಾಟಕವನ್ನು ರಂಗಾಯಣದಲ್ಲಿ ಪೊಲೀಸ್ ಭದ್ರತೆಯಲ್ಲಿ ಪ್ರದರ್ಶಿಸಲಾಗಿತ್ತು.

ಇದೀಗ, ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರೂ, ಸರ್ದಾರ್‌ ವಲ್ಲಭಬಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್, ಸುಭಾಷ್ ಚಂದ್ರಬೋಸ್ ಹಾಗೂ ವೀರ ಸಾವರ್ಕರ್‌ ಅವರ ಪಾತ್ರಗಳ ಮೂಲಕ ‘ಸತ್ಯವನ್ನೇ ಹೇಳುತ್ತೇನೆ’ಗೆ ಸಜ್ಜಾಗಿದ್ದಾರೆ.

‘ರಾಜಾರಾಮ್ ಮೋಹನ್‌ರಾಯ್‌ ಸತಿ ಪದ್ಧತಿ ನಿರ್ಮೂಲನೆಗೆ ಹೋರಾಡಿದ್ದನ್ನು ಓದಿದ್ದೇವೆ. ಆದರೆ, ಕ್ರೈಸ್ತ ಮಿಷನರಿಗಳ ಬಗ್ಗೆ ನಡೆಸಿದ ಸಂಘರ್ಷದ ಸೊಲ್ಲಿಲ್ಲ. ನಮ್ಮ ವೀರರ ಗೆಲುವಿನ ಪಾಠವಿಲ್ಲ. ಎಲ್ಲಾ ಸೋಲಿನ ಕತೆಗಳೇ ತುಂಬಿವೆ. ಇದನ್ನೆ ಮುಂದುವರಿಸಿ ಈಗಿನ ಡೋಂಗಿ ಜಾತ್ಯತೀತವಾದಿಗಳು, ಸರ್ಕಾರಗಳು ನಿರ್ಮಿಸಿದ ಶಾಲಾ ಪಠ್ಯಗಳ ಸ್ಥಿತಿ ನೋಡಿದಾಗ, ಸ್ವಾತಂತ್ರ್ಯ ಹೋರಾಟದ ನಮ್ಮ ನಾಯಕರಿಂದಲೇ (ಪಾತ್ರಗಳ ಮೂಲಕ) ನಮ್ಮ ಚರಿತ್ರೆಯ ಸತ್ಯಗಳನ್ನು ಬಾಯಿ ಬಿಡಿಸುವ ಪ್ರಯತ್ನವೇ ‘ಸತ್ಯವನ್ನೇ ಹೇಳುತ್ತೇನೆ’ ನಾಟಕ. ಈ ನಾಟಕದ ನಾಯಕರ ಎಲ್ಲ ಸಂಭಾಷಣೆಗಳಿಗೂ ಆಧಾರಗಳಿವೆ. ಅನೇಕ ಪುಸ್ತಕಗಳ ಅಧ್ಯಯನದಿಂದ ಸಿದ್ಧಪಡಿಸಲಾಗಿದೆ’ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದರು.

‘ಈಗ ಪ್ರಕಟಗೊಳ್ಳುತ್ತಿರುವ ಶಾಲಾ ಪಠ್ಯಗಳಲ್ಲಿ ಅನುಪಯುಕ್ತ ಸರಕು ತುಂಬಿದೆ. ಇದೆಲ್ಲವನ್ನೂ ನಾಟಕದಲ್ಲಿ ಕಟ್ಟಿಕೊಡಲಾಗಿದೆ’ ಎನ್ನುತ್ತಾರೆ ಅವರು.

ಅಡ್ಡಂಡ ಸಿ.ಕಾರ್ಯ‍ಪ್ಪ

ಪುಸ್ತಕ ಬಿಡುಗಡೆ ಕಾರ್ಯಕ್ರಮ 25ರಂದು ಅನೇಕ ಪುಸ್ತಕಗಳ ಅಧ್ಯಯನದಿಂದ ಸಿದ್ಧ: ಕಾರ್ಯಪ್ಪ ತಾಲೀಮಿನಲ್ಲಿ ತೊಡಗಿರುವ ಕಲಾವಿದರು

ಚರಿತ್ರೆ ಎಂದಿಗೂ ಭೂಗರ್ಭದಲ್ಲಿ ಅವಿತಿರಬಾರದು ಅದು ಸ್ಫೋಟಿಸಬೇಕು. ಸತ್ಯಚರಿತ್ರೆಯ ಅನಾವರಣವೇ ‘ಸತ್ಯವನ್ನೇ ಹೇಳುತ್ತೇನೆ’ ನಾಟಕದ ಆಶಯ

- ಅಡ್ಡಂಡ ಕಾರ್ಯಪ್ಪ ರಂಗಕರ್ಮಿ

‘ರಂಗ’ದಲ್ಲಿ... ಶಿವಮೂರ್ತಿ ಎಸ್. (ಮಹಾತ್ಮ ಗಾಂಧಿ) ಚಿದಾರ್ಜುನ್ ವಿ.ಸಿ. (ಜವಾಹರಲಾಲ್‌ ನೆಹರೂ) ಚೇತನ್‌ ಕಾಟೇನಹಳ್ಳಿ (ಸರ್ದಾರ್‌ ವಲ್ಲಭಬಾಯಿ ಪಟೇಲ್) ಪವನ್ ದೇಶಪಾಂಡೆ (ಡಾ.ಬಿ.ಆರ್.ಅಂಬೇಡ್ಕರ್) ಸುನೀಲ್‌ ಪಟಾಕಿ (ಸುಭಾಷ್ ಚಂದ್ರಬೋಸ್) ಎಸ್.ವೈಭವ್‌ನಾಗ್ (ವೀರ ಸಾವರ್ಕರ್‌) ಅನಿತಾ ಕಾರ್ಯಪ್ಪ (ವಕೀಲೆ ಭಾರತಿ) ಎಸ್.ಎಚ್. ಕಿರಣ್ (ಗುಮಾಸ್ತ) ಕಾರ್ಯಪ್ಪ (ರೈತ ನ್ಯಾಯಾಧೀಶ) ಶಿವಕುಮಾರ್‌ (ಸಂಗೀತ ನಿರ್ವಹಣೆ) ಮಂಜುನಾಥ್‌ ಹಿರೇಮಠ (ಬೆಳಕು) ಅನಿತಾ ಕಾರ್ಯಪ್ಪ (ವಸ್ತ್ರವಿನ್ಯಾಸ) ಗುರುಪ್ರಸಾದ್ (ಭಿತ್ತಿಪತ್ರ ವಿನ್ಯಾಸ) ರಂಗ ಸಹಾಯ (ಮಂಜುನಾಥ್‌ ಶಿಲ್ಪಿ) ಹಾಗೂ ಸುನೀಲ್‌ (ರಂಗನಿರ್ವಹಣೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.