ADVERTISEMENT

ಎಚ್‍.ಡಿ.ಕೋಟೆ: ಕುಡಿಯುವ ನೀರಿಗಾಗಿ ಪರದಾಟ, ಟ್ಯಾಂಕರ್‌ಗಳಲ್ಲಿ ಸರಬರಾಜು

ಪ್ರಜಾವಾಣಿ ವಿಶೇಷ
Published 29 ಮಾರ್ಚ್ 2024, 6:55 IST
Last Updated 29 ಮಾರ್ಚ್ 2024, 6:55 IST
<div class="paragraphs"><p>ಖಾಸಗಿ ಟ್ಯಾಂಕರ್‌ಗೆ ಹಣ ನೀಡಿ ನೀರು ತರಿಸಿಕೊಂಡು, ಅದನ್ನು ಶೇಖರಿಸುತ್ತಿರುವುದು</p></div>

ಖಾಸಗಿ ಟ್ಯಾಂಕರ್‌ಗೆ ಹಣ ನೀಡಿ ನೀರು ತರಿಸಿಕೊಂಡು, ಅದನ್ನು ಶೇಖರಿಸುತ್ತಿರುವುದು

   

ಎಚ್‍.ಡಿ.ಕೋಟೆ: ಬಿಸಿಳಿನ ಝಳ ಹೆಚ್ಚಾದಂತೆ ಕುಡಿಯುವ ನೀರಿನ ಸಮಸ್ಯೆಯು ಉದ್ವಿಗ್ನಗೊಳ್ಳುತ್ತಿದೆ. ಕುಡಿಯುವ ನೀರು ಒದಗಿಸಬೇಕೆಂದ ಜಿಲ್ಲಾಧಿಕಾರಿಗಳ ಸೂಚನೆ ಹೊರತಾಗಿಯೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಪಟ್ಟಣದ ಬಡಾವಣೆಯ ನಿವಾಸಿಗಳು ಹಣ ನೀಡಿ ನೀರು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ಸ್ಟೇಡಿಯಂ ಬಡಾವಣೆ, ಹೌಸಿಂಗ್ ಬೋರ್ಡ್ ಕಾಲೋನಿ, ವಿಶ್ವನಾಥಯ್ಯ ಕಾಲೋನಿಯೂ ಸೇರಿದಂತೆ ಹಲವು ಬಡಾವಣೆಯ ನಿವಾಸಿಗಳು ಕಳೆದ ಎರಡು ದಿನಗಳಿಂದ ಕುಡಿಯುವ ನೀರು ಕಂಡಿಲ್ಲ, ನೀರಿನ ಟ್ಯಾಂಕರ್‌ಗಳ ಮೂಲಕ ನೀರು ತರಿಸುತ್ತಿದ್ದಾರೆ.

ADVERTISEMENT

ನೀರು ಸರಬರಾಜಿಗೆ ಕೊರೆದಿರುವ ಬೋರ್‌ವೆಲ್‌ಗಳ ನೀರಿನ ಮಟ್ಟ ಪಾತಾಳ ಹಿಡಿದಿದ್ದು, ಪಂಪ್‌ ಮೂಲಕ ನೀರು ಬರುತ್ತಿಲ್ಲ. ಇದರಿಂದಾಗಿ ಜನರಿಗೆ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ ಎಂಬ ಉತ್ತರ ಅಧಿಕಾರಿಗಳ ಕಡೆಯಿಂದ ಬರುತ್ತಿದೆ. ‘ಸಮಸ್ಯೆ ಉಲ್ಭನಿಸಿದರೂ ಪುರಸಭಾ ಆಡಳಿತ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದೆ’ ಎಂದು ಸ್ಥಳೀಯರಾದ ಚಾ.ನಂಜುಂಡಮೂರ್ತಿ ಆರೋಪಿಸಿದ್ದಾರೆ.

‘ಕಬಿನಿಯ ನೀರು ಸರಬರಾಜು ಆಗದ ಬಡಾವಣೆಯಲ್ಲಂತೂ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ಸ್ವಂತ ಹಣದಿಂದ ಟ್ಯಾಂಕರ್ ಮೂಲಕ ನೀರು ತರಿಸಿಕೊಂಡು ತಮ್ಮ ಮನೆಯಲ್ಲಿರುವ ಪಾತ್ರೆಗಳಿಗೆ ತುಂಬಿಕೊಳ್ಳುವ ಸ್ಥಿತಿ ಬಂದಿದೆ. ವಿವಿಧ ರೀತಿಯ ತೆರಿಗೆ ಸಂಗ್ರಹಿಸುವ ಅಧಿಕಾರಿಗಳು ಸಾರ್ವಜನಿಕರಿಗೆ ಕನಿಷ್ಠ ಮೂಲಭೂತ ಸೌಕರ್ಯ ನೀಡಬೇಕು’ ಎನ್ನುವುದು ಅವರ
ಅಭಿಪ್ರಾಯ.

‘ಪಾಲಿಕೆ ಮುಖ್ಯಾಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಕುಡಿಯುವ ನೀರಿನ ಸಮಸ್ಯೆಯಾದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ, ಜನಪ್ರತಿನಿಧಿಗಳು ತಿಳಿದೂ, ತಿಳಿಯದಂತೆ ಕಣ್ಣುಮುಚ್ಚಿ ಕುಳಿತಿದ್ದಾರೆ. ತಕ್ಷಣ ನೀರು ಪೂರೈಕೆಗೆ ಕ್ರಮವಹಿಸಬೇಕು. ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು’ ಎಂದು ಬಡಾವಣೆಯ ನಿವಾಸಿಗಳು ಆಗ್ರಹಿಸಿದ್ದಾರೆ.

ಎಚ್.ಮಟಕೆರೆ ಗ್ರಾಮದ ಕಬಿನಿ ನೀರು ಸರಬರಾಜು ಮಾಡುವ ಪೈಪ್ ಒಡೆದಿರುವುರಿಂದ ನೀರಿನ ಸಮಸ್ಯೆ ತಲೆದೋರಿದೆ.
–ಪಿ.ಸುರೇಶ್, ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.