ಮೈಸೂರು: ರಂಗಾಯಣದ ಭೂಮಿಗೀತದಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕೃತಿಯ ನಾಲ್ಕು ಕಥೆಗಳು ಬೆಳಗಲಿವೆ.
‘ಶಾಹಿಸ್ತಾ ಮಹಲ್‌ನ ಕಲ್ಲು ಚಪ್ಪಡಿಗಳು’, ‘ಕರಿ ನಾಗರಗಳು’, ‘ಒಮ್ಮೆ ಹೆಣ್ಣಾಗು ಪ್ರಭುವೇ’ ಹಾಗೂ ‘ಎದೆಯ ಹಣತೆ’ ಕಥೆಗಳು ‘ಒಮ್ಮೆ ಹೆಣ್ಣಾಗು’ ಎಂಬ ರಂಗರೂಪವಾಗಿದ್ದು, ಪಾತ್ರಗಳಾಗಿ ರಂಗಾಯಣದ ಹಿರಿಯ ಕಲಾವಿದೆಯರಾದ ಬಿ.ಎನ್.ಶಶಿಕಲಾ ಮತ್ತು ಕೆ.ಆರ್.ನಂದಿನಿ ಜೀವ ತುಂಬಲಿದ್ದಾರೆ.
ರಂಗಕರ್ಮಿ ಸವಿತಾ ರಾಣಿ ನಿರ್ದೇಶನವಿರುವ ಈ ನಾಟಕವು ಇದೇ 12ರ ಭಾನುವಾರ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ. ಮಹಿಳಾ ಸಂವೇದನೆ, ಮಹಿಳಾವಾದವನ್ನು ಪ್ರತಿಪಾದಿಸುವ ಹಲವು ನಾಟಕಗಳನ್ನು ನಿರ್ದೇಶನ ಮಾಡಿರುವ ಸವಿತಾ ಅವರು, ಬಾನು ಅವರ ಕಥಾಲೋಕಕ್ಕೆ ರಂಗದ ಬೆಳಕನ್ನು ತೋರುತ್ತಿದ್ದಾರೆ.
‘ಕರಿನಾಗರಗಳು’ ಕಥೆಯು ಈ ಮೊದಲು ‘ಹಸೀನಾ’ ಆಗಿ ಚಲನಚಿತ್ರವಾಗಿತ್ತು. ‘ಎದೆಯ ಹಣತೆ’ ಕಥೆಯು ನಾಟಕವಾಗಿತ್ತು. ಆದರೆ, ಇದೇ ಮೊದಲ ಬಾರಿ ಅಂತರರಾಷ್ಟ್ರೀಯ ಪುರಸ್ಕಾರ ಪಡೆದ ಕಥಾ ಸಂಕಲನದ ನಾಲ್ಕು ಕಥೆಗಳ ‘ಮಹಿಳಾ ಸಂವೇದನೆ’ಯು ರಂಗದ ಮೇಲೆ ಧ್ವನಿಸುತ್ತಿರುವುದು ವಿಶೇಷ!
‘ಪುರುಷ ಪ್ರಧಾನ ಸಮಾಜದಲ್ಲಿನ ಕರಾಳ ಮುಖವನ್ನು ಅಭಿವ್ಯಕ್ತಿಸುವ ಕಥೆಗಳ ಸಾರವನ್ನು ನಾಟಕ ಆಗಿಸಲಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿದ ಶೋಷಕ ಮನಸ್ಥಿತಿಯನ್ನು ಇಲ್ಲಿನ ಪಾತ್ರಗಳು ಪ್ರಶ್ನಿಸುತ್ತವೆ. ಮಾನವೀಯತೆ ಹಾಗೂ ಅಂತಃಕರಣವನ್ನು ಸಹೃದಯರಲ್ಲಿ ಶೋಧಿಸುವಂತೆ ಮಾಡುವ ಶಕ್ತಿ ಇಲ್ಲಿನ ಕಥಾಪಾತ್ರಗಳಿಗೆ ಇದೆ. ಹೀಗಾಗಿ ಎದೆಯ ಹಣತೆ ಕೃತಿಯನ್ನು ನಾಟಕವಾಗಿಸಲಾಗಿದೆ’ ಎಂದು ನಿರ್ದೇಶಕಿ ಸವಿತಾ ರಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಾನು ಅವರ ವಿಚಾರ ಹಾಗೂ ವ್ಯಕ್ತಿತ್ವವನ್ನು ಕೃತಿಯಲ್ಲಿ ಕಂಡಿರುವೆ. ಕಥೆಗಳಲ್ಲಿ ಮಹಿಳೆಯರ ಜೀವನಾನುಭವಗಳನ್ನು ಅವರು ಹಿಡಿದಿಡುತ್ತಲೇ ವಿಮರ್ಶಾತ್ಮಕ ದೃಷ್ಟಿಕೋನವನ್ನೂ ತೋರುತ್ತಾರೆ. ಕಲ್ಪನೆಗಳನ್ನು ಮೀರಿದ ಒಳನೋಟಗಳನ್ನು ಕಟ್ಟಿಕೊಡುತ್ತಾರೆ. ಗಂಡಾಳಿಕೆಯ ಸಮಾಜಕ್ಕೆ ಅವರ ಪಾತ್ರಗಳು ಕೇಳುವ ಪ್ರಶ್ನೆಗಳು ಎಲ್ಲ ಮಹಿಳೆಯರದ್ದೂ ಆಗಿವೆ’ ಎಂದರು.
‘ಬಾನು ಅವರ ಬರವಣಿಗೆಯು ಸಮಾಜದ ಹೇರಿಕೆಗಳ ವಿರುದ್ಧ ಪ್ರಶ್ನೆಗಳನ್ನು ನಿರಂತರವಾಗಿ ಎತ್ತುತ್ತದೆ. ಕೃತಿಯನ್ನು ಓದುವಾಗ ಸಿಗುವ ಭಾವಾನುಭವವನ್ನೇ ರಂಗದಲ್ಲಿ ತರಲು ತಂಡವಾಗಿ ಕಲಾವಿದರು, ತಂತ್ರಜ್ಞರು ಹಾಗೂ ರಂಗಾಯಣ ಸೇರಿದಂತೆ ಎಲ್ಲರೂ ಶ್ರಮಿಸಿದ್ದೇವೆ’ ಎಂದು ಹೇಳಿದರು.
ರಂಗಕರ್ಮಿ ಸವಿತಾ ರಾಣಿ ನಿರ್ದೇಶನ ಬಿ.ಎನ್.ಶಶಿಕಲಾ, ಕೆ.ಆರ್.ನಂದಿನಿ ಅಭಿನಯ ಶ್ವೇತಾ ರಾಣಿ, ಮಹೇಶ್ ಕಲ್ಲತ್ತಿ ನೆರವು
- ಮಹಿಳೆಯರೇ ಬಹುಪಾಲು!
‘ಒಮ್ಮೆ ಹೆಣ್ಣಾಗು’ ನಾಟಕದ ಪಾತ್ರಗಳು ನಿರ್ದೇಶನ ಸಹ ನಿರ್ದೇಶನ ಸೇರಿದಂತೆ ತಂತ್ರಜ್ಞರೆಲ್ಲ ಮಹಿಳಾ ಪ್ರಧಾನವಾಗಿದೆ. ಪರಿಕಲ್ಪನೆ ವಿನ್ಯಾಸ ಮತ್ತು ನಿರ್ದೇಶನವನ್ನು ಸವಿತಾ ರಾಣಿ ಸಹ ವಿನ್ಯಾಸ ಮತ್ತು ಸಹ ನಿರ್ದೇಶನವನ್ನು ಎಚ್.ಕೆ.ಶ್ವೇತಾರಾಣಿ ಶಬ್ಧವಿನ್ಯಾಸವನ್ನು ಮೀನಾಕ್ಷಿ– ಲೋಹಿತ್ ಮಾಡಿದ್ದಾರೆ ಬೆಳಕಿನ ವಿನ್ಯಾಸ ಮಹೇಶ್ ಕಲ್ಲತ್ತಿ ಅವರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.