ADVERTISEMENT

ಶಿಕ್ಷಣ ಆತ್ಮವಿಶ್ವಾಸದ ಪ್ರತೀಕ: ಮುಖ್ಯಮಂತ್ರಿ ಸಿದ್ದರಾಮಯ್ಯ

ಶಿವರಾತ್ರಿ ರಾಜೇಂದ್ರ ಅನುಭವ ಮಂಟಪ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 3:24 IST
Last Updated 14 ಸೆಪ್ಟೆಂಬರ್ 2025, 3:24 IST
ವರುಣ ಸಮೀಪದ ಶಿವರಾತ್ರಿ ರಾಜೇಂದ್ರ ನಗರದಲ್ಲಿ ಶಿವರಾತ್ರಿ ರಾಜೇಂದ್ರ ಅನುಭವ ಮಂಟಪ ಸಭಾಂಗಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಉದ್ಘಾಟಿಸಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಎಲ್. ರೇವಣಸಿದ್ದಯ್ಯ ಹಾಗೂ ಕೆ. ವೆಂಕಟೇಶ್‌ ಜೊತೆಗಿದ್ದರು
ವರುಣ ಸಮೀಪದ ಶಿವರಾತ್ರಿ ರಾಜೇಂದ್ರ ನಗರದಲ್ಲಿ ಶಿವರಾತ್ರಿ ರಾಜೇಂದ್ರ ಅನುಭವ ಮಂಟಪ ಸಭಾಂಗಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಉದ್ಘಾಟಿಸಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಎಲ್. ರೇವಣಸಿದ್ದಯ್ಯ ಹಾಗೂ ಕೆ. ವೆಂಕಟೇಶ್‌ ಜೊತೆಗಿದ್ದರು   

ಮೈಸೂರು: ‘ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟವರು. ಓದಿನಿಂದ ಬದುಕಿನಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಬೆಳೆಯಲಿದ್ದು, ಪ್ರತಿಯೊಬ್ಬರೂ ಶಿಕ್ಷಣ ಪಡೆಯಲೇಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ವರುಣ ಕೆರೆಯ ಪಕ್ಕದಲ್ಲಿರುವ ಶಿವರಾತ್ರಿ ರಾಜೇಂದ್ರ ನಗರದಲ್ಲಿ ಶನಿವಾರ ಜೆಎಸ್‌ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವರಾತ್ರಿ ರಾಜೇಂದ್ರ ಅನುಭವ ಮಂಟಪ ಹಾಗೂ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿದರು.

‘ಜಾತಿ ವ್ಯವಸ್ಥೆ ಬಾವಿಯೊಳಗಿನ ಸತ್ತೆ (ಕಳೆ) ಇದ್ದ ಹಾಗೆ. ಬಾವಿಗೆ ಬಿಂದಿಗೆ ಹಾಕಿದಾಗ ಸತ್ತೆ ದೂರ ಸರಿಯುತ್ತದೆ. ಬಿಂದಿಗೆ ಮೇಲೆತ್ತಿದ್ದರೆ ಸತ್ತೆ ಮತ್ತೆ ಕೂಡಿಕೊಳ್ಳುತ್ತದೆ. ಇದು ಗೊತ್ತಿದ್ದರೂ ವಿದ್ಯಾವಂತರಾದ ನಾವೂ –ನೀವು ಯಾವ ಜಾತಿಗೆ ಸೇರಿದವರು ಎಂದು ಕೇಳುವುದು ಸಾಮಾನ್ಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಬಸವಣ್ಣನವರು ಹೇಳಿದಂತೆ ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣ ಆಗಬೇಕು. ಎಲ್ಲರೂ ಮನುಷ್ಯರಾಗಿ ಬಾಳಬೇಕು. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಒಳಗೊಂಡಿರುವ ಸಂವಿಧಾನದ ಆಶಯವೂ ಇದೇ ಆಗಿದೆ’ ಎಂದರು.

ADVERTISEMENT

‘ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಆರ್ಥಿಕ, ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಈ ವ್ಯವಸ್ಥೆಗೆ ಚಲನೆ ಬರುತ್ತದೆ. ಆದರೆ ನಮ್ಮ ನಡುವಿನ ಪಟ್ಟಭದ್ರ ಹಿತಾಸಕ್ತಿಗಳು ಈ ಜಾತಿ ವ್ಯವಸ್ಥೆಗೆ ಸಾಮಾಜಿಕ, ಆರ್ಥಿಕ ಶಕ್ತಿ ಬರದ ಹಾಗೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.

‘ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ, ಸಮಾಜದ ಎಲ್ಲರಿಗೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾವಲಂಬನೆ ಸಿಕ್ಕಾಗ ಮಾತ್ರ ದೇಶದ ಸ್ವಾತಂತ್ರ್ಯಕ್ಕೆ ಸಾರ್ಥಕತೆ ಸಿಗುತ್ತದೆ. ಇಲ್ಲದಿದ್ದರೆ ಅದು ನಿರರ್ಥಕ’ ಎಂದರು.

‘ಬಸವಾದಿ ಶರಣರ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು. ಸ್ವತಂತ್ರ ಭಾರತದಲ್ಲಿ ಅದೇ ಸಂಸತ್ತು, ವಿಧಾನಸಭೆಗಳಾಗಿವೆ. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಲು ಆದೇಶ ಹೊರಡಿಸಿದ್ದೆ. ಈಗ ಬಾರಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲಾಗಿದೆ’ ಎಂದರು.

‘ಇಂದು ಸುತ್ತೂರು ಮಠವು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಹಾಕಿದ ಅಡಿಪಾಯವೇ ಕಾರಣ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಮಾತನಾಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ಹಾಗೂ ಸಂಘದ ಅಧ್ಯಕ್ಷ ಎಲ್. ರೇವಣಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಅಧ್ಯಕ್ಷ ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ನಿರ್ದೇಶಕರಾದ ಬಸವರಾಜಯ್ಯ, ನಂಜುಂಡಪ್ಪ, ಸುಬ್ಬಯ್ಯ, ಮಲ್ಲಿಕಾರ್ಜುನ ಸ್ವಾಮಿ ಪಾಲ್ಗೊಂಡರು.

‘ನನಗೂ ನಿವೇಶನ ಕೊಡಿ’

‘144 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಿ 1400ಕ್ಕೂ ಹೆಚ್ಚು ಸದಸ್ಯರಿಗೆ ನಿವೇಶನ ಹಂಚಿಕೆ ಒಳ್ಳೆಯ ಕೆಲಸ. ನಾನು ಕೂಡ ಜೆಎಸ್‌ಎಸ್ ಹಳೆಯ ವಿದ್ಯಾರ್ಥಿ. ಪಿಯುಸಿ ಜೆಎಸ್‌ಎಸ್‌ನಲ್ಲೇ ಓದಿದ್ದು ನಾನು ಸಂಘದ ಸದಸ್ಯನಾಗಿದ್ದರೆ ನನಗೂ ಸೈಟು ಸಿಗುತ್ತಿತ್ತು ಅನಿಸುತ್ತದೆ. ಈಗಲೂ ನನಗೆ ಸದಸ್ಯತ್ವ ಕೊಟ್ಟರೆ ನಿವೇಶನ ಪಡೆದುಕೊಳ್ಳುವೆ’ ಎಂದು ಸಚಿವ ಕೆ. ವೆಂಕಟೇಶ್‌ ನಗೆಚಟಾಕಿ ಹಾರಿಸಿದರು. ‘ಸಂಘವು 15 ವರ್ಷದ ಹಿಂದೆ ಜಮೀನು ಖರೀದಿಸಿ ಅಂದು ನಿಗದಿಯಾಗಿದ್ದ ದರದಲ್ಲೇ ಸದಸ್ಯರಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಸಹಕಾರ ಸಂಘಗಳ ಇತಿಹಾಸದಲ್ಲಿಯೇ ಪ್ರಥಮ ಎನಿಸುತ್ತದೆ’ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.