ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಸೋಮವಾರ ವಿಚಾರ ಸಂಕಿರಣವನ್ನು ಅಮರೇಂದ್ರ ಪಾಣಿ ಉದ್ಘಾಟಿಸಿದರು
ಪ್ರಜಾವಾಣಿ ಚಿತ್ರ
ಮೈಸೂರು: ‘ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಮುಕ್ತ ಹಾಗೂ ದೂರ ಶಿಕ್ಷಣ ವ್ಯವಸ್ಥೆಯೂ ಹೊಂದಿಕೊಂಡು ಹೋಗುತ್ತಿದೆ’ ಎಂದು ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸಂಶೋಧನಾ ವಿಭಾಗದ ಜಂಟಿ ನಿರ್ದೇಶಕ ಅಮರೇಂದ್ರ ಪಾಣಿ ಅಭಿಪ್ರಾಯಪಟ್ಟರು.
ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ಭಾರತೀಯ ವಿಶ್ವವಿದ್ಯಾಲಯಗಳ ಸಂಘವು ಆಯೋಜಿಸಿದ್ದ ‘ಸಮಕಾಲೀನ ಜಾಗತಿಕ ಸನ್ನಿವೇಶದಲ್ಲಿ ಮುಕ್ತ, ದೂರ ಶಿಕ್ಷಣದ ಪ್ರಸ್ತುತತೆ ಮತ್ತು ಭವಿಷ್ಯದ ದೃಷ್ಟಿಕೋನಗಳು’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಮೊದಲು ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸಂಬಂಧಿಸಿದ ಶಿಕ್ಷಣ ಸಂಸ್ಥೆಯು ವಾರ್ಷಿಕ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿ, ಅದರಂತೆ ತರಗತಿ ನಡೆಸುವುದು, ಪಠ್ಯಕ್ರಮಗಳ ಬೋಧನೆ, ಪರೀಕ್ಷೆ ಎಲ್ಲವನ್ನೂ ಆಯೋಜನೆ ಮಾಡುತ್ತಿತ್ತು. ಆದರೆ ಈಗ ತಂತ್ರಜ್ಞಾನ ಬದಲಾಗಿದ್ದು, ಶಿಕ್ಷಣ ವ್ಯವಸ್ಥೆಯು ತರಗತಿ ಕೇಂದ್ರಿತವಾಗದೇ ವಿದ್ಯಾರ್ಥಿಕೇಂದ್ರಿತ ಆಗುತ್ತಿದೆ. ಡಿಜಿಟಲ್ ಮಾದರಿಯಲ್ಲಿ ಕುಳಿತಲ್ಲೇ ವಿದ್ಯಾರ್ಥಿಗಳು ಪಾಠ ಕೇಳಬಹುದು. ತಮ್ಮ ಕೋರ್ಸಿನ ಅವಧಿ ಮುಗಿದ ಕ್ಷಣ ಅವರಿಗೆ ಅನುಕೂಲವಾಗುವಂತಹ ಸಮಯದಲ್ಲಿ ಶಿಕ್ಷಣ ಕೇಂದ್ರಕ್ಕೆ ಬಂದು ಪರೀಕ್ಷೆ ತಗೆದುಕೊಳ್ಳಬಹುದು. ಅದೂ ಕೂಡ ಡಿಜಿಟಲ್ ಮಾದರಿಯಲ್ಲೇ ಇರುತ್ತದೆ. ಇಂತಹದ್ದನ್ನು ಗಮನಿಸಿದರೆ ದೂರ ಹಾಗೂ ಮುಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಕೆಯೂ ಸಮಕಾಲೀನ ಸಂದರ್ಭಕ್ಕೆ ಒಗ್ಗಿಕೊಂಡು ಹೋಗುತ್ತಿದೆ ಎಂದು ತಿಳಿಯುತ್ತದೆ ಎಂದರು.
ದೂರ ಹಾಗೂ ಮುಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯಲು ಬರುವವರು ಸಾಮಾನ್ಯ ವಿದ್ಯಾರ್ಥಿಗಳಲ್ಲ. ಬೇರೆಬೇರೆ ಕಡೆಗಳಲ್ಲಿ ಕೆಲಸ ನಿರ್ವಹಿಸುವ, ಬೇರೆ ಬೇರೆ ವಯೋಮಾನದವರು ಕಲಿಯಲು ಬರುತ್ತಾರೆ. ಅವರ ಅನುಕೂಲಕ್ಕೆ ಬದಲಾವಣೆ ಮಾಡಿಕೊಂಡರೆ ಕಲಿಯುವವರಲ್ಲೂ ಆಸಕ್ತಿ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.
ಭಾರತದಲ್ಲಿ 1700ಕ್ಕೂ ಹೆಚ್ಚು ದೂರ ಹಾಗೂ ಮುಕ್ತ ಶಿಕ್ಷಣ ನೀಡುವ ಕೇಂದ್ರಗಳು ಇವೆ. ಇಗ್ನೋದಲ್ಲಿ ಮುಕ್ತ ಕಲಿಯುವವರ ಸಂಖ್ಯೆ 1 ಕೋಟಿ ದಾಟಿದೆ. ಕೆಎಸ್‌ಒಯುನಲ್ಲಿ 1 ಲಕ್ಷ ಮಂದಿ ನೋಂದಣಿ ಮಾಡಿಸಿದ್ದಾರೆ. ಇದರಿಂದ ಮುಕ್ತ ಶಿಕ್ಷಣ ವ್ಯವಸ್ಥೆಗೆ ಎಷ್ಟು ಬೇಡಿಕೆ ಇದೆ ಎನ್ನುವುದು ತಿಳಿಯುತ್ತದೆ ಎಂದರು.
ಮುಕ್ತ ವಿ.ವಿ. ಕುಲಪತಿ ಪ್ರೊ. ಶರಣಪ್ಪ ಹಲಸೆ ಅಧ್ಯಕ್ಷತೆ ವಹಿಸಿದ್ದರು. ಸಿಇಎಂಸಿಎ ನಿರ್ದೇಶಕ ಬಿ.ಶ್ಯಾಡ್ರಕ್, ರಾಯಪುರದ ಹೇಮಚಂದ ಯಾದವ್ ವಿ.ವಿ. ಕುಲಪತಿ ಪ್ರೊ. ಸಂಜಯ ತಿವಾರಿ, ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, ಕುಲಸಚಿವರಾದ ಎಸ್.ಕೆ. ನವೀನ್ ಕುಮಾರ್, ಸಿ.ಎಸ್.ಆನಂದಕುಮಾರ್, ಡೀನ್ .ಎಂ.ರಾಮನಾಥಂ ನಾಯ್ಡು, ವಿಚಾರ ಸಂಕಿರಣ ಸಂಘಟನಾ ಕಾರ್ಯದರ್ಶಿ ಜಿ. ನಟರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.