ADVERTISEMENT

ಮುಂದುವರಿದ ಮುಷ್ಕರ: ತ್ಯಾಜ್ಯ ವಿಲೇವಾರಿಗೆ ತೊಡಕು

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 1:47 IST
Last Updated 3 ಜುಲೈ 2022, 1:47 IST

ಮೈಸೂರು: ಕೆಲಸ ಕಾಯಂಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರು ಮುಷ್ಕರ ಮುಂದುವರಿಸಿರುವುದರಿಂದಾಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ತ್ಯಾಜ್ಯ ವಿಲೇವಾರಿ ಕಾರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

ನಗರಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ‘ನೇರಪಾವತಿ ಮೇಲೆ ನೇಮಕವಾಗಿರುವ’ ಪೌರಕಾರ್ಮಿಕರು ಕೆಲಸದಿಂದ ದೂರ ಉಳಿದಿದ್ದಾರೆ. ತಮ್ಮ ಬೇಡಿಕೆ ಈಡೇರಿಕೆಗೆ ಗೈರು ಹಾಜರಾಗುವ ಮೂಲಕ ಪಟ್ಟು ಹಿಡಿದಿದ್ದಾರೆ. ಇದರಿಂದ, ಕಸ ವಿಲೇವಾರಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಭಾನುವಾರವೂ ಮುಷ್ಕರ ಮುಂದುವರಿದಲ್ಲಿ ‍ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ. ಪಟ್ಟಣ ಹಾಗೂ ತಾಲ್ಲೂಕು ಕೇಂದ್ರಗಳಲ್ಲೂ ಇದೇ ಪರಿಸ್ಥಿತಿ ಇದೆ.

ನಗರದಲ್ಲಿ ಪೌರಕಾರ್ಮಿಕರ ಜೊತೆಗೆ ತ್ಯಾಜ್ಯ ಸಾಗಿಸುವ ವಾಹನಗಳ ಚಾಲಕರು ಕೂಡ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ನಗರದಲ್ಲಿ ಪೌರಕಾರ್ಮಿಕರು ಜತೆ ಹೊರಗುತ್ತಿಗೆ ಮೇಲೆ ನೇಮಕವಾಗಿರುವ 300 ಮಂದಿ ವಾಹನ ಚಾಲಕರು ಕೆಲಸ ನಿಲ್ಲಿಸಿದ್ದಾರೆ.

ADVERTISEMENT

‘ಪಾಲಿಕೆಯ ಕಾಯಂ ಪೌರಕಾರ್ಮಿಕರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ನಿತ್ಯ 2ಸಾವಿರ ಮಂದಿ ಮಾಡುವ ಸ್ವಚ್ಛತಾ ಕಾರ್ಯವನ್ನು ಕೇವಲ 500 ಮಂದಿ ನಿರ್ವಹಿಸಬೇಕೆಂದರೆ ಕಷ್ಟವಾಗುತ್ತದೆ. ಹೀಗಾಗಿ, ನಗರದಾದ್ಯಂತ ತ್ಯಾಜ್ಯ ವಿಲೇವಾರಿ ಸರಿಯಾಗಿ ನಡೆದಿಲ್ಲ. ಮನೆ–ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವುದು ಸಾಧ್ಯವಾಗಿಲ್ಲ. ಎಲ್ಲ ರಸ್ತೆಗಳಲ್ಲೂ ಸ್ವಚ್ಛತೆ ನಡೆಸಲಾಗಿಲ್ಲ’ ಎಂದು ಮಹಾನಗರಪಾಲಿಕೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

‘ಕಾಯಂ ಪೌರಕಾರ್ಮಿಕರಿಂದ ಅರಮನೆ ಸುತ್ತಮುತ್ತಲಿನ ರಸ್ತೆಗಳು, ವೃತ್ತಗಳು ಹಾಗೂ ಪ್ರದೇಶಗಳಲ್ಲಿ ಸ್ವಚ್ಛತೆ ಮಾಡಿಸಲಾಗುತ್ತಿದೆ. ಉಳಿದ ಕಡೆಗಳಲ್ಲಿ ಈ ಕಾರ್ಯ ನಡೆಸಲಾಗಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.