ADVERTISEMENT

ದಂಡಕ್ಕೂ ರಸ್ತೆ ರಿಪೇರಿಗೂ ಸಂಬಂಧವಿಲ್ಲ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 14:31 IST
Last Updated 8 ಸೆಪ್ಟೆಂಬರ್ 2019, 14:31 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಮೈಸೂರು: ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದಕ್ಕೂ, ರಸ್ತೆ ರಿಪೇರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ರಸ್ತೆ ದುರಸ್ತಿ ಮಾಡುವ ಬದಲು ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಲಾಗುತ್ತಿದೆ ಎಂಬ ಟೀಕೆಗೆ ಸಂಬಂಧಿಸಿದಂತೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಕರ್ನಾಟಕದಲ್ಲಿ ಮಾತ್ರವಲ್ಲ, ದೇಶವ್ಯಾಪಿ ಪರಿಷ್ಕೃತ ದಂಡ ಜಾರಿಗೆ ಬಂದಿದೆ. ರಸ್ತೆ ರಿಪೇರಿ ಮಾಡುವುದು ಲೋಕೋಪಯೋಗಿ ಇಲಾಖೆಯ ಕೆಲಸ. ಸಂಚಾರ ನಿಯಮ ಉಲ್ಲಂಘಿಸುವವರಿಗೆ ರಸ್ತೆ ಸರಿ ಇಲ್ಲ ಎಂಬ ಕಾರಣ ಮುಂದಿಟ್ಟು ದಂಡ ಪಾವತಿಯಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಬಸ್‌ ದರ ಏರಿಕೆ ಇಲ್ಲ: ಇಂಧನ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾವನೆ ಸರ್ಕಾರ ಮುಂದಿದಿದ್ದರೂ, ಸದ್ಯದ ಮಟ್ಟಿಗೆ ಬಸ್ ದರ ಏರಿಕೆ ಮಾಡುವುದಿಲ್ಲ ಎಂದರು.

ಎಲೆಕ್ಟ್ರಿಕ್‌ ಬಸ್‌ಗೆ ಚಿಂತನೆ: ಪರಿಸರ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಪ್ರಾರಂಭಿಸಲು ಚಿಂತನೆ ನಡೆದಿದೆ. ವಿದೇಶದ ಕೆಲವು ಕಂಪನಿಗಳ ಜತೆ ಮಾತುಕತೆ ನಡೆದಿದೆ ಎಂದು ಹೇಳಿದರು.

ಅಸ್ಸಾಂ, ಮಹಾರಾಷ್ಟ್ರ ಮತ್ತು ಹರಿಯಾಣದ ಸಾರಿಗೆ ಸಂಸ್ಥೆಗಳು ಇದೇ ಚಿಂತನೆ ನಡೆಸಿವೆ. ಅಸ್ಸಾಂನಲ್ಲಿ ಇನ್ನೊಂದು ತಿಂಗಳಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಶುರುವಾಗುವ ನಿರೀಕ್ಷೆಯಿದೆ. ಅಲ್ಲಿನ ಸಾಧಕ ಬಾಧಕಗಳನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಯಾವುದೇ ಹೂಡಿಕೆ ಮಾಡುವುದಿಲ್ಲ. ಬಸ್ಸುಗಳನ್ನು ಒದಗಿಸುವ ಕಂಪನಿಯೇ ಅವುಗಳ ನಿರ್ವಹಣೆ ಮಾಡಲಿದೆ. ಇಲ್ಲಿನ ಚಾಲಕರು ಮತ್ತು ನಿರ್ವಾಹಕರಿಗೆ ಅವರೇ ತರಬೇತಿ ನೀಡಲಿದ್ದಾರೆ. ಟಿಕೆಟ್‌ ಮಾರಾಟದಿಂದ ಬರುವ ಲಾಭದಲ್ಲಿ ಶೇ 60 ನಮಗೆ ದೊರೆಯಲಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.