ADVERTISEMENT

ಹುಣಸೂರು: ತಂಬಾಕು ಹದಕ್ಕೆ ವಿದ್ಯುತ್‌ಚಾಲಿತ ಬ್ಯಾರನ್

ಸಾಂಪ್ರದಾಯಿಕ ಪದ್ಧತಿಗೆ ಪರ್ಯಾಯ ವ್ಯವಸ್ಥೆ, ಸಿಟಿಆರ್‌ಐ ಕೇಂದ್ರದಲ್ಲಿ ಪ್ರಯೋಗ ಯಶಸ್ವಿ

ಎಚ್.ಎಸ್.ಸಚ್ಚಿತ್
Published 5 ಅಕ್ಟೋಬರ್ 2025, 5:04 IST
Last Updated 5 ಅಕ್ಟೋಬರ್ 2025, 5:04 IST
ಹುಣಸೂರಿನ ತಂಬಾಕು ಸಂಶೋಧನಾ ಕೇಂದ್ರದಲ್ಲಿ ನಡೆದಿರುವ ವಿದ್ಯುತ್‌ ಚಾಲಿತ ತಂಬಾಕು ಹದಗೊಳಿಸುವ ಬ್ಯಾರನ್‌ಗೆ ತಂಬಾಕು ತುಂಬಿಸುತ್ತಿರುವುದು
ಹುಣಸೂರಿನ ತಂಬಾಕು ಸಂಶೋಧನಾ ಕೇಂದ್ರದಲ್ಲಿ ನಡೆದಿರುವ ವಿದ್ಯುತ್‌ ಚಾಲಿತ ತಂಬಾಕು ಹದಗೊಳಿಸುವ ಬ್ಯಾರನ್‌ಗೆ ತಂಬಾಕು ತುಂಬಿಸುತ್ತಿರುವುದು   

ಹುಣಸೂರು: ಸೌದೆ ಬಳಸಿ ತಂಬಾಕು ಹದಗೊಳಿಸುವ ಸಾಂಪ್ರದಾಯಿಕ ಪದ್ಧತಿಗೆ ಪರ್ಯಾಯವಾಗಿ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರವು ವಿದ್ಯುತ್‌ಚಾಲಿತ ಬ್ಯಾರನ್‌ ಸಿದ್ಧಪಡಿಸಿದೆ.

ಬೆಳೆಗಾರರು ತಂಬಾಕು ಹದಗೊಳಿಸಲು ಸೌದೆ ಅವಲಂಬಿಸಿದ್ದರು. ವೈಜ್ಞಾನಿಕವಾಗಿ ಪ್ರತಿ ಕೆ.ಜಿ ತಂಬಾಕು ಹದಗೊಳಿಸಲು 6ರಿಂದ 7 ಕೆ.ಜಿ ಸೌದೆ ಬಳಸುತ್ತಿದ್ದು, ಒಂದು ಸಿಂಗಲ್‌ ಬ್ಯಾರನ್‌ ತಂಬಾಕು ಹದಗೊಳಿಸಲು ಕನಿಷ್ಠ 1.5 ರಿಂದ 2 ಟನ್‌ ಉರುವಲು ಅಗತ್ಯವಿದೆ.

ಸಂಶೋಧನೆ: ಆಂಧ್ರಪ್ರದೇಶದ ರಾಜಮಹೇಂದ್ರಿ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದಲ್ಲಿ 2 ವರ್ಷದಿಂದ ವಿದ್ಯುತ್‌ ಚಾಲಿತ ತಂಬಾಕು ಹದಗೊಳಿಸುವ ಬ್ಯಾರನ್‌ ಪರೀಕ್ಷೆ ನಡೆದಿದ್ದು, ಸಾಂಪ್ರದಾಯಿಕ ಬ್ಯಾರನ್‌ನಲ್ಲಿ ಹದಗೊಳಿಸಿದ ಮಾದರಿಯಲ್ಲೇ ಗುಣಮಟ್ಟದ ಇಳುವರಿ ಸಿಕ್ಕಿದೆ.

ADVERTISEMENT

‘ಹುಣಸೂರಿನ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದಲ್ಲಿ 3 ತಿಂಗಳಿಂದ ಪರೀಕ್ಷೆ ನಡೆಸಿದ್ದು, ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಸೌದೆ ಬದಲಿಗೆ ರೈತರು ವಿದ್ಯುತ್‌ ಚಾಲಿತ ಬ್ಯಾರನ್‌ ಬಳಸಬಹುದಾಗಿದೆ’ ಎಂದು ಕೇಂದ್ರದ ಹಿರಿಯ ವಿಜ್ಞಾನಿ ರಾಮಕೃಷ್ಣನ್ ತಿಳಿಸಿದರು.

ಅವಿಷ್ಕಾರ: ‘ಆಂಧ್ರಪ್ರದೇಶದ ತಂಬಾಕು ಬೇಸಾಯ ಕುಟುಂಬದ ಎಂಜಿನಿಯರ್‌ ನಾರಾಯಣ ರೆಡ್ಡಿ ‌ಮತ್ತು ಇಬ್ಬರು ಸ್ನೇಹಿತರು ಆರಂಭಿಸಿದ ‘ಔಲ್‌ ಟೆಕ್ನೋ’ ವಿದ್ಯುತ್‌ ಚಾಲಿತ ಬ್ಯಾರನ್‌ ಅವಿಷ್ಕಾರಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

‘ಅಗ್ನಿ ಅವಘಡದಲ್ಲಿ ಬ್ಯಾರನ್‌ ಸುಟ್ಟು ಭಸ್ಮವಾದ ಕಹಿ ಘಟನೆಯಿಂದ ಸಮಸ್ಯೆ ಪರಿಹಾರಕ್ಕೆ ಮತ್ತು ಪರಿಸರ ಪೂರಕ ಬ್ಯಾರನ್‌ನ ಹೊಸ ತಂತ್ರಜ್ಞಾನದ ಅವಿಷ್ಕಾರಕ್ಕೆ ಕಾರಣವಾಯಿತು’ ಎಂದು ನಾರಾಯಣ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂಬಾಕು ಸಂಶೋಧನಾ ಕೇಂದ್ರ ರಾಜಮಹೇಂದ್ರಿಯೊಂದಿಗೆ ಒಪ್ಪಂದ ಮಾಡಿಕೊಂಡು ವಿದ್ಯುತ್‌ ಬ್ಯಾರನ್‌ನಲ್ಲಿ 2 ವರ್ಷ ನಿರಂತರ ಪ್ರಯತ್ನಿಸಿ ಗುಣಮಟ್ಟದ ತಂಬಾಕು ಹದಗೊಳಿಸಿದ ಫಲಿತಾಂಶ ಸಿಕ್ಕಿದೆ. ಕರ್ನಾಟಕದ ವಾತಾವರಣದಲ್ಲಿ ಬೆಳೆದ ತಂಬಾಕು ಹೊಸ ತಂತ್ರಜ್ಞಾನದಲ್ಲಿ ಹದಗೊಳಿಸುವ ಕಾರ್ಯ ಕಳೆದ 3 ತಿಂಗಳಿಂದ ಹುಣಸೂರು ಸಿಟಿಆರ್‌ಐ ಕೇಂದ್ರದಲ್ಲಿ ನಡೆದಿದ್ದು, ಇಲ್ಲಿಯೂ ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ’ ಎನ್ನುತ್ತಾರೆ ಅವರು.

ವಿದ್ಯುತ್‌ ಬಳಕೆ: ಹೊಸ ವಿನ್ಯಾಸದಲ್ಲಿ ಹೊರ ಬಂದಿರುವ ವಿದ್ಯುತ್‌ ಬ್ಯಾರನ್‌ನಲ್ಲಿ ತಂಬಾಕು ಹದಗೊಳಿಸಲು ಪ್ರತಿ ಬ್ಯಾರನ್‌ಗೆ 400ರಿಂದ 500 ಯುನಿಟ್‌ ವಿದ್ಯುತ್‌ ಬೇಕು. ಇದಕ್ಕೆ ತಗಲುವ ವೆಚ್ಚ ₹3ರಿಂದ 4ಸಾವಿರ. ಸೌದೆ ಬಳಸಿದಲ್ಲಿ ₹8 ರಿಂದ 9 ಸಾವಿರ ಬೇಕಾಗುತ್ತದೆ. ಇದಲ್ಲದೆ ಕೂಲಿ ಕಾರ್ಮಿಕರು ಹಗಲು ರಾತ್ರಿ ಪಾಳೆಯಲ್ಲಿ ಉರುವಲು ನೀಡಬೇಕು. ಈ ತಂತ್ರಜ್ಞಾನದಲ್ಲಿ ಎಲ್ಲವೂ ಆಟೋಮೆಟಿಕ್‌ ವ್ಯವಸ್ಥೆ ಅಳವಡಿಸಿದೆ. ಮೊಬೈಲ್‌ ಮೂಲಕ ಶಾಖ ನಿರ್ವಹಣೆ ಮಾಡುವ ಸೌಲಭ್ಯ ಕಲ್ಪಿಸಿದೆ.

ವಿದ್ಯುತ್‌ ಅಡಚಣೆ ಆದಲ್ಲಿ ಸೌರಶಕ್ತಿ ಚಾಲಿತ ವಿದ್ಯುತ್‌ ಪರ್ಯಾಯವಾಗಿ ಬಳಸುವ ವ್ಯವಸ್ಥೆ ಈ ತಂತ್ರಜ್ಞಾನದಲ್ಲಿ ಅಳವಡಿಸಿದ್ದು, ಗ್ರಾಮೀಣ ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿಗೊಳಿಸಲಾಗಿದೆ.

ವಿದ್ಯುತ್‌ ಚಾಲಿತ ಬ್ಯಾರನ್‌ನಲ್ಲಿ ಹದಗೊಂಡಿರುವ ತಂಬಾಕು
ಮೋದೂರು ಶಿವಣ್ಣ
ರಾಮಕೃಷ್ಣನ್‌
ನಾರಾಯಣ ರೆಡ್ಡಿ

Highlights - ಪ್ರತಿ ಬ್ಯಾರನ್‌ಗೆ 400ರಿಂದ 500 ಯುನಿಟ್‌ ತಗಲುವ ವೆಚ್ಚ ₹3ರಿಂದ 4ಸಾವಿರ ಮೊಬೈಲ್‌ ಫೋನ್‌ ಮೂಲಕ ಶಾಖ ನಿರ್ವಹಣೆ

Quote - ವಿದ್ಯುತ್‌ ಬ್ಯಾರನ್‌ ಮೂರು ಫೇಸ್‌ನಲ್ಲಿ ಬಳಸುವಂತೆ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನದಲ್ಲಿ ಸಿಂಗಲ್‌ ಫೇಸ್‌ ವಿದ್ಯುತ್‌ ಬಳಸಿ ಹದಗೊಳಿಸುವ ತಂತ್ರಜ್ಞಾನ ಅಳವಡಿಸುವ ಚಿಂತನೆ ಇದೆ ನಾರಾಯಣ ರೆಡ್ಡಿ ಯುವ ವಿಜ್ಞಾನಿ

Cut-off box - ‘ಆರ್ಥಿಕ ಹೊರೆ ತಗ್ಗಲಿದೆ’ ವಿದ್ಯುತ್‌ಚಾಲಿತ ತಂಬಾಕು ಹದಗೊಳಿಸುವ ಬ್ಯಾರನ್‌ ಪರಿಸರ ಪೂರಕವಾಗಿದ್ದು ಆರ್ಥಿಕ ಹೊರೆ ತಗ್ಗಲಿದೆ. ಆರಂಭದ ಬಂಡವಾಳ ₹ 18ರಿಂದ 20 ಲಕ್ಷ ಹೂಡಬೇಕಾಗಿದ್ದು ರೈತರಿಗೆ ಕಷ್ಟ ಸಾಧ್ಯ. ಬ್ಯಾಂಕ್‌ ಸಾಲ ಸೌಲಭ್ಯ ಮತ್ತು ತಂಬಾಕು ಮಂಡಳಿ ರಿಯಾಯಿತಿ ದರದಲ್ಲಿ ನೀಡಬೇಕು ಎಂದು ತಂಬಾಕು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮೋದೂರು ಶಿವಣ್ಣ ಹೇಳಿದರು.

Cut-off box - ‘ರಾಸಾಯನಿಕ ಬದಲಾವಣೆ ಕಂಡು ಬಂದಿಲ್ಲ’ ಹದಗೊಳಿಸಿದ ತಂಬಾಕು ಪ್ರಯೋಗಾಲಯಕ್ಕೆ ಕಳುಹಿಸಿ ವೈಜ್ಞಾನಿಕ ಪರೀಕ್ಷೆ ನಡೆಸಿದ್ದು ಸಾಂಪ್ರದಾಯಕ ಪದ್ಧತಿ ಮತ್ತು ವಿದ್ಯುತ್‌ ಪದ್ಧತಿಯಲ್ಲಿ ಹದಗೊಳಿಸಿದ ತಂಬಾಕಿನಲ್ಲಿ ಯಾವುದೇ ರಾಸಾಯನಿಕ ಬದಲಾವಣೆ ಕಂಡು ಬಂದಿಲ್ಲ ಎಂಬ ವರದಿ ಬಂದಿದೆ. ರೈತರು ಈ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದಾಗಿದೆ ಎಂದು ಸಿಟಿಆರ್‌ಐ ವಿಜ್ಞಾನಿ ರಾಮಕೃಷ್ಣನ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.