ADVERTISEMENT

ಮೈಸೂರು: ಅಭಿಮನ್ಯು ‘ಹ್ಯಾಟ್ರಿಕ್‌’ ಸಾಧನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 4:31 IST
Last Updated 6 ಅಕ್ಟೋಬರ್ 2022, 4:31 IST
   

ಮೈಸೂರು: ಜಂಬೂಸವಾರಿಯಲ್ಲಿ ಅಭಿಮನ್ಯು ಆನೆಯು ‘ಹ್ಯಾಟ್ರಿಕ್‌’ ಸಾಧನೆ ಮಾಡಿದೆ.

ಗಜಪಡೆಯ ಕ್ಯಾಪ್ಟನ್‌ ‘ಗಜ ಗಾಂಭೀರ್ಯ’ದಿಂದ ಹೆಜ್ಜೆ ಹಾಕುವ ಮೂಲಕ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಸಮರ್ಥವಾಗಿ ಬನ್ನಿಮಂಟಪದವರೆಗೆ ಸಾಗಿಸಿದ. ಹಿಂದಿನ ಎರಡು ಸರಳ ದಸರೆಯಲ್ಲಿ ಜಂಬೂಸವಾರಿಯು ಅರಮನೆಗೆ ಸೀಮಿತವಾಗಿ ನಡೆದಿತ್ತು. ಆಗಲೂ ಅಭಿಮನ್ಯು ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ್ದ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರುನ ನಡೆಸಿದ ಎರಡನೇ ದಸರಾ ಆಯಿತು.

ಇದೇ ಮೊದಲ ಪಾಲ್ಗೊಂಡಿದ್ದ ಆನೆಗಳಲ್ಲಿ ಮಹೇಂದ್ರಗೆ ಮಾತ್ರ ಜಂಬೂಸವಾರಿಯಲ್ಲಿ ಅವಕಾಶ ಸಿಕ್ಕಿತು. 2017ರ ನಂತರ ಭೀಮ ರಾಜಪಥದಲ್ಲಿ ಹೆಜ್ಜೆ ಹಾಕಿದ.

ADVERTISEMENT

* ಅಂಬಾರಿಗೆ ಪುಷ್ಪಾರ್ಚನೆಯು ಸಂಜೆಗೆ ನಿಗದಿಯಾಗಿದ್ದರಿಂದ, ಮಧ್ಯಾಹ್ನ 1ರ ವೇಳೆಗಾಗಲೇ ಬಹುತೇಕರು ಅರಮನೆ ಆವರಣ ಪ್ರವೇಶಿಸಿದ್ದರು. ಆಹ್ವಾನಿತರು ಪಾಸ್ ಹೊಂದಿದ್ದವರಿಗೆ ನೆರಳಿನ ವ್ಯವಸ್ಥೆಗಾಗಿ ಪೆಂಡಾಲ್‌ ಹಾಕಲಾಗಿತ್ತು. ಆದರೆ, ಗೋಲ್ಡ್‌ ಕಾರ್ಡ್‌, ಟಿಕೆಟ್ ಖರೀದಿಸಿದ್ದವರು, ಗಣ್ಯರಿಗೆ ಬಿಸಿಲಿನಲ್ಲೇ ಆಸನಗಳ ವ್ಯವಸ್ಥೆ ಮಾಡಲಾಗಿತ್ತು!

* ಮೆರವಣಿಗೆಗೆ ಪುಷ್ಪಾರ್ಚನೆ ವೇಳೆ ಗಣ್ಯರೊಂದಿಗೆ ಪಾಲ್ಗೊಂಡಿದ್ದ ಮೇಯರ್‌ ಶಿವಕುಮಾರ್‌ ನಂತರ ರಾಜಬೀದಿಯಲ್ಲಿ ಕುದುರೆ ಸವಾರಿ ನಡೆಸಿದರು.

* ಕೃಷಿ ಸಚಿವ ಬಿ.ಸಿ.ಪಾಟೀಲ ಜಂಬೂಸವಾರಿ ವೀಕ್ಷಣೆಗೆ ಕುಟುಂಬ ಸಮೇತ ಬಂದಿದ್ದರು.

* ಕಲಾತಂಡಗಳು ಜಿಲ್ಲಾಡಳಿತ ನೀಡಿದ್ದ ಪಟ್ಟಿಯಂತೆ ಅನುಕ್ರಮವಾಗಿ ಬರಲಿಲ್ಲ. ಇದು, ಗೊಂದಲಕ್ಕೆ ಕಾರಣವಾಯಿತು.

ಮೆರವಣಿಗೆಯಲ್ಲಿ ಅವ್ಯವಸ್ಥೆ:

* ಮೆರವಣಿಗೆಯಲ್ಲಿ ಅವ್ಯವಸ್ಥೆ ಕಂಡುಬಂತು. ಹಾದಿಯಲ್ಲಿ ಕಲಾವಿದರಿಗಿಂತ ಕಲಾವಿದರೇತರರೇ ಇದ್ದರು. ಬಿಜೆಪಿ ಕಾರ್ಯಕರ್ತರು, ಅವರ ಬೆಂಬಲಿಗರು, ಅಧಿಕಾರಿಗಳ ಕಡೆಯವರೇ ತುಂಬಿಕೊಂಡಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ವಿಜಯಪುರ ಸ್ತಬ್ಧಚಿತ್ರದ ನಂತರ ಮತ್ತೊಂದು ಕಲಾತಂಡ ಹಾಗೂ ಸ್ತಬ್ಧಚಿತ್ರ ಬರುವುದು ತಡವಾಯಿತು. ಈ ವೇಳೆ, ಮಾರ್ಗವು ಖಾಲಿಯೇ ಇತ್ತು. ಸ್ತಬ್ಧಚಿತ್ರ ಹಾಗೂ ಕಲಾತಂಡಗಳ ಪ್ರದರ್ಶನ ಮುಗಿದ ಬಳಿಕ ಅರಮನೆ ಆವರಣದ ವಿಶೇಷ ವೇದಿಕೆಯ ಬಳಿ ನೆರೆದಿದ್ದವರನ್ನು ಕಳುಹಿಸಲು ಪೊಲೀಸರಿಗೆ ಬಹಳ ಸಮಯ ಹಿಡಿಯಿತು!

* ಜಂಬೂಸವಾರಿಯ ಮಾರ್ಗದಲ್ಲಿನ ಹಸಿರು ಚಪ್ಪರ, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಗಣಪತಿ ದೇವಸ್ಥಾನದ ಬಳಿ ಅಂಬಾರಿಯಲ್ಲಿನ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಂಬಾರಿ ಆನೆ ಅಭಿಮನ್ಯುಗೆ ಹಣ್ಣು ನೀಡಲಾಯಿತು.

* ಎಲ್‌ಇಡಿ ಪರದೆ ಇರಲಿಲ್ಲ: ಪ್ರತಿ ಬಾರಿ ಅರಮನೆಯಲ್ಲಿ ಜಂಬೂಸವಾರಿ ಚಾಲನೆ ದೃಶ್ಯವನ್ನು ಸಾರ್ವಜನಿಕರಿಗೆ ತೋರಿಸಲು ಜಂಬೂಸವಾರಿ ಮಾರ್ಗದಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗುತ್ತಿತ್ತು. ಸಾರ್ವಜನಿಕರು ತಾವು ಕುಳಿತಲ್ಲಿಯೇ ಎಲ್ಲವನ್ನೂ ವೀಕ್ಷಿಸಿ ಸಂಭ್ರಮಿಸುತ್ತಿದ್ದರು. ಆದರೆ, ಈ ಬಾರಿ ಎಲ್‌ಇಡಿ ಪರದೆ ಅಳವಡಿಸಿರಲಿಲ್ಲ.

* ಪ್ರತಿ ಬಾರಿ ಪ್ರಮುಖ ವೃತ್ತಗಳಲ್ಲಿ ಆಯೋಜಿಸುತ್ತಿದ್ದ ವೀಕ್ಷಕರ ವಿವರಣೆಯನ್ನು ಈ ಬಾರಿ ಬಂದ್ ಮಾಡಲಾಗಿತ್ತು. ಜಂಬೂಸವಾರಿ ಮಾರ್ಗದಲ್ಲಿ ವೀಕ್ಷಕ ವಿವರಣೆಗಾರರು ಮೆರವಣಿಗೆಯಲ್ಲಿ ಭಾಗಿಯಾಗುವ ಕಲಾವಿದರು ಹಾಗೂ ಸ್ತಬ್ಧಚಿತ್ರಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ಬಾರಿ ಅರಮನೆ ಆವರಣದಲ್ಲಿ ಮಾತ್ರ ವೀಕ್ಷಕ ವಿವರಣೆ ನೀಡಲಾಯಿತು. ಲಕ್ಷ್ಮಿ, ಮಂಜುನಾಥ್ ಹಾಗೂ ನಂದಿನಿ ಆ ಕಾರ್ಯನಿರ್ವಹಿಸಿದರು.

* ಆನೆಗಳು ಹಾಕಿದ್ದ ಲದ್ದಿಗೆ ಕೆಲವರು ನಮನ ಸಲ್ಲಿಸಿದರು. ಕೆಲವರು ಅದನ್ನು ಒಯ್ದರು. ‘ಜಾನುವಾರುಗಳಿಗೆ ರೋಗ ಬಂದಾಗ, ಈ ಲದ್ದಿಯನ್ನು ಹಚ್ಚಿದರೆ ಬೇಗ ಗುಣವಾಗುತ್ತದೆ’ ಎಂದು ಮಹಿಳೆಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.