ADVERTISEMENT

ಹುಣಸೂರು|ಧಾರ್ಮಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಒತ್ತು: ಶಾಸಕ ಜಿ.ಡಿ.ಹರೀಶ್ ಗೌಡ

​ಪ್ರಜಾವಾಣಿ ವಾರ್ತೆ
Published 15 ಮೇ 2025, 11:41 IST
Last Updated 15 ಮೇ 2025, 11:41 IST
ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಗೊಮ್ಮಟಗಿರಿ ಕ್ಷೇತ್ರದಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ ಬುಧವಾರ ಜೈನ ತೀರ್ಥಂಕರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು
ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಗೊಮ್ಮಟಗಿರಿ ಕ್ಷೇತ್ರದಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ ಬುಧವಾರ ಜೈನ ತೀರ್ಥಂಕರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು   

ಹುಣಸೂರು: ‘ಅಲ್ಪಸಂಖ್ಯಾತ ಸಮುದಾಯಗಳಿಗೆ ಸಾಮಾಜಿಕ ಚಟುವಟಿಕೆ ಹಮ್ಮಿಕೊಳ್ಳಲು ಸಮುದಾಯ ಭವನಗಳು ಅವಶ್ಯಕವಿದ್ದು, ಕ್ಷೇತ್ರದಲ್ಲಿ ಸಮುದಾಯಗಳ ಅಭಿವೃದ್ಧಿಗೆ ಕೈ ಜೋಡಿಸಲಾಗುವುದು’ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.

ತಾಲ್ಲೂಕಿನ ಬಿಳಿಕೆರೆ ಹೋಬಳಿ ಗೊಮ್ಮಟಗಿರಿ ಕ್ಷೇತ್ರದಲ್ಲಿ ಜೈನ ತೀರ್ಥಂಕರ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಜೈನ ತೀರ್ಥಂಕರ ಸಮುದಾಯ ಭವನಕ್ಕೆ ₹1.50 ಕೋಟಿ ಅನುದಾನ ನೀಡಿದ್ದು, ಭವನ ನಿರ್ಮಾಣದಿಂದ ವರ್ಷಕ್ಕೆ ಒಮ್ಮೆ ಕ್ಷೇತ್ರದಲ್ಲಿ ನಡೆಯುವ ಮಹಾ ಮಸ್ತಕಾಭಿಷೇಕದಲ್ಲಿ ಭಾಗವಹಿಸುವ ಜೈನ ಸಮುದಾಯದವರು ತಂಗಲು ಪೂರಕವಾಗಲಿದೆ. ಧಾರ್ಮಿಕ ಪ್ರಕ್ರಿಯೆ ನಡೆಸಲು ಕ್ಷೇತ್ರದಲ್ಲಿ ಸಮುದಾಯ ಭವನದ ಅವಶ್ಯಕತೆಯಿತ್ತು’ ಎಂದರು.

ಪ್ರವಾಸಿ ತಾಣ: ‘ತಾಲ್ಲೂಕಿನ ಪ್ರಮುಖ ಕ್ಷೇತ್ರದಲ್ಲಿ ಒಂದಾಗಿರುವ ಗೊಮ್ಮಟಗಿರಿಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸುವ ಬಗ್ಗೆ ಪ್ರವಾಸೋದ್ಯಮ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಸವಲತ್ತು ಕಲ್ಪಿಸಲು, ಹೆಚ್ಚಿನ ಪ್ರಚಾರ ನೀಡಲು ಮನವಿ ಮಾಡುತ್ತೇನೆ. ಮೈಸೂರಿಗೆ ಬರುವ ಪ್ರವಾಸಿಗರನ್ನು ಕ್ಷೇತ್ರದತ್ತ ಗಮನ ಸೆಳೆಯುವ ಪ್ರಯತ್ನಕ್ಕೆ ಒತ್ತು ನೀಡಿ ಶ್ರವಣಬೆಳಗೊಳ ಮಾದರಿ ಅಭಿವೃದ್ಧಿಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸುತ್ತೇನೆ’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಹಳೆಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೃತಿ, ಉಪಾಧ್ಯಕ್ಷ ಮಲ್ಲೇಶ್, ಎ.ಎಂ.ಎಫ್ ನಿರ್ದೇಶಕ ಕೆ.ಎಸ್.ಕುಮಾರ್, ಬಿಳಿಕೆರೆ ಗ್ರಾಮದ ಮುಖಂಡ ಮಧು, ಸುರೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.