
ಹುಣಸೂರು: ‘ಸಫಾಯಿ ಕರ್ಮಚಾರಿಗಳಿಗೆ ಸರ್ಕಾರ ನೀಡುವ ಸುರಕ್ಷಾ ಸೌಲಭ್ಯಗಳನ್ನು ತಲುಪಿಸಿ, ಆರೋಗ್ಯ ಸುಧಾರಿಸುವ ಜವಾಬ್ದಾರಿ ಸಂಬಂಧಿಸಿದ ಅಧಿಕಾರಿಗಳ ಮೇಲಿದೆ’ ಎಂದು ಉಪವಿಭಾಗಾಧಿಕಾರಿ ಕಾವ್ಯರಾಣಿ ಹೇಳಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿ, ‘ಪೌರಕಾರ್ಮಿಕರು ಸ್ವಚ್ಛತಾ ಕೆಲಸ ಮಾಡಲು ಅಗತ್ಯ ಬೇಕಿರುವ ಸುರಕ್ಷಾ ವಸ್ತುಗಳನ್ನು ನೀಡಬೇಕು ಮತ್ತು ಆರೋಗ್ಯ ತಪಾಸಣೆ ನಿಯಮಾನುಸಾರ ಕೈಗೊಳ್ಳಬೇಕು. ಈ ಸಂಬಂಧ ಮುಂದಿನ ಸಭೆಯೊಳಗೆ ಉಪವಿಭಾಗದಲ್ಲಿನ ಎಲ್ಲಾ ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪಟ್ಟಿ ನೀಡಬೇಕು’ ಎಂದು ತಾಕೀತು ಮಾಡಿದರು.
ಸಮಿತಿ ಸದಸ್ಯ ಲಕ್ಷ್ಮಣ್ ಮಾತನಾಡಿ, ‘ಪೌರಕಾರ್ಮಿಕರಿಗೆ ನಿವೇಶನ ಇಲ್ಲದೆ ಒಂದು ಸೂರಿನಲ್ಲಿ ಮೂರು, ನಾಲ್ಕು ಕುಟುಂಬ ಬದುಕು ನಡೆಸುತ್ತಿವೆ. ಈ ಕುಟುಂಬಕ್ಕೆ ನಿವೇಶನ ನೀಡಿದರೆ ನಗರಸಭೆಯಲ್ಲಿ ಈಗಾಗಲೇ ನಗರೋತ್ಥಾನ ಯೋಜನೆಯಲ್ಲಿ ಕಾಯ್ದಿಟ್ಟ ₹ 98 ಲಕ್ಷ ಅನುದಾನದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಹಾಯವಾಗಲಿದೆ’ ಎಂದರು.
‘ನಗರ ವ್ಯಾಪ್ತಿಯಲ್ಲಿ 34 ಎಕರೆ ಸರ್ಕಾರಿ ಭೂಮಿ ಗುರುತಿಸಿದ್ದು, ಈ ಪೈಕಿ 2 ಎಕರೆ ನಗರಸಭೆಯಲ್ಲಿ ಕಾಯಂ ನೌಕರರಾಗಿ ಸೇವೆ ಸಲ್ಲಿಸುತ್ತಿರುವ 34 ಕುಟುಂಬಗಳಿಗೆ ನಿವೇಶನ ನೀಡಬೇಕು’ ಎಂದರು.
ತಹಶೀಲ್ದಾರ್ ಮಂಜುನಾಥ್ ಉತ್ತರಿಸಿ, ‘ಈ ಹಿಂದೆ ಸರ್ವೆ ನಂ 75 ರಲ್ಲಿ ಗುರುತಿಸಿದ್ದ ನಿವೇಶನ ಕರ್ದಾ ಭೂಮಿ ಎಂದು ನಮೂದಾಗಿದ್ದು, ಈ ಭೂಮಿ ಯಾರಿಗೂ ನೀಡಲು ಬರುವುದಿಲ್ಲ. ಸ.ನಂ. 73ರ ನಿವೇಶನ ಗುರುತಿಸಿದ್ದು, ಒತ್ತುವರಿ ತೆರವು ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ದಿನದಲ್ಲಿ ಅಂತ್ಯವಾಗಲಿದೆ’ ಎಂದು ಮಾಹಿತಿ ನೀಡಿದರು.
ನಗರಸಭೆ ಆಯುಕ್ತೆ ಮಾನಸ ಮಾತನಾಡಿ, ‘ಪೌರಕಾರ್ಮಿಕರಿಗೆ ಮನೆ ನಿರ್ಮಿಸಲು ಕಾದಿಟ್ಟ ಅನುದಾನದಲ್ಲಿ ನಿವೇಶನ ಹೊಂದಿರುವ ಕಾಯಂ ನೌಕರರಿಗೆ ತಲಾ ₹ 3 ಲಕ್ಷ ನೀಡಲು ಈ ಹಿಂದಿನ ಆಡಳಿತ ಮಂಡಳಿ ತೀರ್ಮಾನಿಸಿದೆ. ಅದರಂತೆ ನೀಡಲು ಬದ್ಧ’ ಎಂದರು.
‘ನಗರಸಭೆಗೆ ಹೊಂದಿಕೊಂಡಂತೆ ಪೌರಕಾರ್ಮಿಕರಿಗೆ ವಿಶ್ರಾಂತಿ ಭವನ ಮತ್ತು ಕ್ಯಾಂಟಿನ್‌ಗೆ ಕಟ್ಟಡ ನಿರ್ಮಿಸಿದ್ದರೂ ಅಧಿಕಾರಿಗಳು ಖಾಸಗಿ ಹೋಟೆಲ್‌ಗೆ ಗುತ್ತಿಗೆ ನೀಡಲಾಗಿದೆ. ಪೌರಕಾರ್ಮಿಕರ ಭವನ ಗೋದಾಮಾಗಿದೆ’ ಎಂದು ಸದಸ್ಯ ಲಕ್ಷ್ಮಣ್ ಸಭೆ ಗಮನಕ್ಕೆ ತಂದರು.
ಆಯುಕ್ತೆ ಮಾನಸ ಉತ್ತರಿಸಿ, ‘ಕ್ಯಾಂಟಿನ್ ಆರಂಭಿಸಲು ಕಷ್ಟವಾಗಿದ್ದು, ಸರ್ಕಾರದ ನಿಯಮದಂತೆ ಪ್ರತಿಯೊಬ್ಬರಿಗೂ ₹36 ರಂತೆ ಗುಣಮಟ್ಟದ ಉಪಾಹಾರ ನೀಡಲಾಗಿದೆ’ ಎಂದರು.
ಸಭೆಯಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ ಸದಸ್ಯೆ ನಾಗಮಣಿ, ಉಪವಿಭಾಗ ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪೌರಕಾರ್ಮಿಕರ ಕಾಲೊನಿಯಲ್ಲಿ ರಸ್ತೆ ಕಾಮಗಾರಿ ನಡೆದಿದ್ದು ರಸ್ತೆಗೆ ಅಡ್ಡಲಾಗಿ ಖಾಸಗಿ ಬಡಾವಣೆಯ ನಿವಾಸಿಯೊಬ್ಬರು ಶೆಡ್ ನಿರ್ಮಿಸಿದ್ದು ತೆರವಿಗೆ ಕ್ರಮವಹಿಸಬೇಕುಲಕ್ಷ್ಮಣ್ ಸದಸ್ಯ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.