ADVERTISEMENT

ಕಾಯ್ದೆ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಆಗ್ರಹ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಕಿರಿಜಾಜಿ ರೈತ ಸಂಘದ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 5:34 IST
Last Updated 12 ಜನವರಿ 2026, 5:34 IST
ಹುಣಸೂರು ತಾಲ್ಲೂಕಿನ ಕಿರಿಜಾಜಿ ಗ್ರಾಮದಲ್ಲಿ ರೈತ ಸಂಘ ಆರಂಭವಾಗಿ 25 ವರ್ಷಗಳ ಸಂಭ್ರಮಾಚರಣೆಯ ವೇಳೆ  ಪ್ರಗತಿಪರ ರೈತರಿಗೆ ಕಾಯಕ ಪ್ರಶಸ್ತಿಯನ್ನು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೀಡಿ ಗೌರವಿಸಿದರು 
ಹುಣಸೂರು ತಾಲ್ಲೂಕಿನ ಕಿರಿಜಾಜಿ ಗ್ರಾಮದಲ್ಲಿ ರೈತ ಸಂಘ ಆರಂಭವಾಗಿ 25 ವರ್ಷಗಳ ಸಂಭ್ರಮಾಚರಣೆಯ ವೇಳೆ  ಪ್ರಗತಿಪರ ರೈತರಿಗೆ ಕಾಯಕ ಪ್ರಶಸ್ತಿಯನ್ನು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೀಡಿ ಗೌರವಿಸಿದರು    

ಹುಣಸೂರು: ಕಾಂಗ್ರೆಸ್‌ ಪಕ್ಷ ರಾಜ್ಯ ವಿಧಾನಸಭೆ ಚುನಾವಣೆ ಅವಧಿಯಲ್ಲಿ ತನ್ನ ಪ್ರಣಾಳಿಕೆಯಲ್ಲಿ ಘೊಷಿಸಿದಂತೆ ಮೂರು ರೈತ ವಿರೋಧಿ ಕಾಯ್ದೆ ರದ್ದುಗೊಳಿಸುವುದಾಗಿ ಭರವಸೆ ನೀಡಿತ್ತು, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದರೂ ಈ ಬಗ್ಗೆ ಚಕಾರವೆತ್ತಿಲ್ಲ  ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ತಾಲ್ಲೂಕಿನ ಕಿರಿಜಾಜಿ ಗ್ರಾಮದಲ್ಲಿ 25 ನೇ ವರ್ಷದ ಗ್ರಾಮ ಘಟಕ ಸಂಭ್ರಮಾಚರಣೆ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಹಲವು ರೈತ ವಿರೋಧಿ ಕಾಯ್ದೆಗಳು ರೈತರಿಗೆ ಮಾರಕವಾಗಿದ್ದು , ಜನಪ್ರತಿನಿಧಿಗಳು ಮೌನವಾಗಿದ್ದಾರೆ. ರೈತರು ಒಗ್ಗಟ್ಟಿನಲ್ಲಿ ಎದುರಿಸಬೇಕಾಗಿದೆ ಎಂದರು. ರಾಜ್ಯದಲ್ಲಿ ಇಂದಿಗೂ ಜಾರಿಯಲ್ಲಿರುವ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ವಿರೋಧಿಸಲು ಸಜ್ಜಗಾಗಬೇಕಾಗಿದೆ ಎಂದರು.

ಸೀಡ್‌ ಬಿಲ್:‌ ದೇಸಿ ರೈತರು ಕೃಷಿ ಉತ್ಪನ್ನಗಳ ಬೀಜೋಪಚಾರವನ್ನು  ಮಾಡಿ ಮುಂದಿನ ಬೇಸಾಯಕ್ಕೆ ಬಳಸುವ ಪದ್ಧತಿ ಇತ್ತು,  ಇದನ್ನು ತಡೆದು ವಿದೇಶಿ ಸಂಪ್ರದಾಯದಂತೆ ಸೀಡ್‌ ಬಿಲ್‌ ಜಾರಿ ಮಾಡಿ ಹೈಬ್ರೀಡ್‌ ಬಿತ್ತನೆ ಬೀಜ ನೀಡಿದ್ದರಿಂದ ರೈತರು ಬಿತ್ತನೆ ಬೀಜ ಸಂಸ್ಕರಿಸುವ ಪರಿಸ್ಥಿತಿ ಇಲ್ಲದೆ ದೇಶಿಯ ತಳಿಗಳು ಕಣ್ಮರೆಯಾಗಿವೆ.  ರೈತರು ಹೋರಾಟ ನಡೆಸುವ ಅಗತ್ಯವಿದೆ ಎಂದರು.

ADVERTISEMENT

ಕಿರಿಜಾಜಿ ರೈತ ಸಂಘ ಆರಂಭವಾಗಿ 25 ವರ್ಷ ಕಳೆದಿದ್ದು,  ಹಲವು  ಚಳವಳಿಗೆ ಸಾಕ್ಷಿಯಾಗಿದೆ. ರೈತರು ಪಂಪ್‌ ಸೆಟ್‌ ವಿದ್ಯುತ್‌ ಕಾಯ್ದೆ ವಿರೋಧಿಸಿದ್ದರು. ಅದರ ಫಲವಾಗಿ  ರಾಜ್ಯದಲ್ಲಿ  80 ಲಕ್ಷ ಪಂಪ್‌ ಸೆಟ್‌ ಬಳಕೆದಾರ ರೈತರಿಗೆ ಉಚಿತ ವಿದ್ಯುತ್‌ ಸಂಪರ್ಕ ಸಿಗುತ್ತಿದೆ ಎಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್‌ ಮಾತನಾಡಿ, ಅಂದು ರಾಜ್ಯರ ರೈತ ನಾಯಕರಾಗಿದ್ದ  ಪುಟ್ಟಣ್ಣಯ್ಯ ಕಿರಿಜಾಜಿ ಗ್ರಾಮದ ರೈತ ಸಂಘವನ್ನು  ಉದ್ಘಾಟಿಸಿ ರೈತರ ಪಂಪ್‌ ಸೆಟ್‌ಗೆ ಅಳವಡಿಸಿದ ವಿದ್ಯುತ್‌ ಮೀಟರ್‌ ಕಿತ್ತು ಹಾಕಿ ಚಳವಳಿಗೆ ಚಾಲನೆ ನೀಡಿದ್ದರು.  ಅವರು ನೀಡಿದ ಘೋಷಣೆಗೆ ಸರ್ಕಾರವೇ ಹಿಂತಿರುಗಿ ನೋಡುವಂತಾಯಿತು ಎಂದರು.

ರೈತ ಸಮುದಾಯ ಇಂದಿಗೂ ಮಾರುಕಟ್ಟೆ ಸಮಸ್ಯೆ ಎದುರಿಸುತ್ತಿದ್ದು, ಗ್ರಾಮೀಣ ಹಂತದಲ್ಲೇ ರೈತ ಬೆಳೆದ ಬೆಳೆ ಖರೀದಿಸುವ ಪದ್ಧತಿ ಜಾರಿಗೊಳಿಸಬೇಕು. ಮಾರುಕಟ್ಟೆ ದಲ್ಲಾಳಿ ಮುಕ್ತವಾಗಿ ರೈತರಿಗೆ ಎಲ್ಲಾ ಲಾಭ ಸಿಗುವಂತಾಗಬೇಕು ಎಂದರು.

 ಕೃಷಿಯಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತರಿಗೆ ಕಾಯಕ ಪ್ರಶಸ್ತಿ ನೀಡಿ ಗೌರವಿಸಿದರು.   ರೈತ ಸಂಘದ ಪ್ರದಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್‌, ಮಹಿಳಾ ವಿಭಾಗದ ನೇತ್ರಾವತಿ, ಕಿರಿಜಾಜಿ ಧನಂಜಯ, ಬೆಂಕಿಪುರ ಚಿಕ್ಕಣ್ಣ ಮಾತನಾಡಿದರು. ನಿಂಗರಾಜ್‌ ಮಲ್ಲಾಡಿ,ಪಟೇಲ್‌ ಶಂಕರ್‌, ಮಂಜುನಾಥ್‌,ಅಗ್ರಹಾರ ರಾಮೇಗೌಡ, ಚಂದ್ರೇಗೌಡ,ಮೋದೂರು ಶಿವಣ್ಣ,ಪ್ರಭಾಕರ್‌, ವಿಷಕಂಠಪ್ಪ, ಈಶ್ವರ್‌ , ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.