ಸರ್ಕಾರ ನಡೆಸುವ ಕ್ರೌರ್ಯದ ವಿರುದ್ಧ ಹೋರಾಟ ನಿರಂತರ | ಪರಶುರಾಮ ದೇವಾಲಯದ ಆವರಣದಲ್ಲಿ ಗಿಡ ನೆಟ್ಟು ಆಚರಣೆ ಮಲೆ | ಮಹದೇಶ್ವರ ಬೆಟ್ಟಕ್ಕೆ ರೈತರ ಪಾದಯಾತ್ರೆ
ನಂಜನಗೂಡು: ‘ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಪಡೆಯಲು ಪೊಲೀಸರ ಗುಂಡೇಟಿಗೆ ಹೆದರದೆ ಹೋರಾಟ ನಡೆಸಿ, ಹುತಾತ್ಮರಾದ ರೈತರ ಹೋರಾಟ ಸ್ಮರಣೀಯ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಹೇಳಿದರು.
ನಗರದ ಪರಶುರಾಮ ದೇವಾಲಯದ ಬಳಿ 45ನೇ ವರ್ಷದ ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗುಂಡೂರಾವ್ ಅವರ ಸರ್ಕಾರದ ಅವಧಿಯಲ್ಲಿ ನವಲಗುಂದ, ನರಗುಂದ ರೈತರು ಕರ ನಿರಾಕರಣೆ ವಿಚಾರವಾಗಿ 1980ರ ಜುಲೈ 21ರಂದು ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಈರಪ್ಪ ಕಡ್ಲಿಕೊಪ್ಪ ಮತ್ತು ಬಸಪ್ಪ ಲಕ್ಕುಂಡಿ ಅವರ ಮೇಲೆ ಗುಂಡಿನ ಸುರಿಮಳೆಗೈದು ಕೊಲೆ ಮಾಡಿದರು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿಸರ್ಕಾರ ತನ್ನ ಅವಧಿಯಲ್ಲಿ ಹಾವೇರಿ, ಗೆಜ್ಜಲಗೆರೆ, ದುದ್ದ, ಕೊಪ್ಪ ಮುಂತಾದ ಕಡೆಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ ರೈತರನ್ನು ಗೋಲಿಬಾರ್ನಡಸಿಕೊಂದಿವೆ. ರೈತರ ಆರ್ಥಿಕ ಮತ್ತು ಸಾಮಾಜಿಕ ಜೀವನ ಬದಲಾವಣೆ ಮಾಡಲು ಹೋರಾಟ ನಡೆಸಿ ಹುತಾತ್ಮರಾದ 140ಕ್ಕೂ ಹೆಚ್ಚಿನ ರೈತರ ಹೋರಾಟವನ್ನು ರೈತ ಸಂಘ ಎಂದಿಗೂ ಸ್ಮರಿಸುತ್ತದೆ ಎಂದರು.
ರೈತ ಸಂಘ ರೈತರ ಸಮಸ್ಯೆ ಬಗೆಹರಿಸಲು ವೈಚಾರಿಕವಾಗಿ ಹುಟ್ಟಿಕೊಂಡ ಸಂಘಟನೆಯಾಗಿದ್ದು, ಪೊಲೀಸರ ಮತ್ತು ಸರ್ಕಾರಗಳ ಗುಂಡೇಟಿಗೆ ರೈತರು ಹೆದರುವುದಿಲ್ಲ. ರೈತರ ಮೇಲೆ ಸರ್ಕಾರಗಳು ನಡೆಸುವ ಕ್ರೌರ್ಯದ ವಿರುದ್ಧ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ತಿಳಿಸಿದರು.
ರೈತ ಹುತಾತ್ಮ ದಿನಾಚರಣೆಯ ಅಂಗವಾಗಿ ರೈತ ಸಂಘದ ಕಾರ್ಯಕರ್ತರು ನಗರದ ಪರಶುರಾಮ ದೇವಾಲಯದ ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರೆರೆದರು.
ರಾಜ್ಯದ ರೈತರ ಸಂಕಷ್ಟ ಪರಿಹಾರಕ್ಕಾಗಿ ವರುಣ ಕ್ಷೇತ್ರದ ಅಹಲ್ಯಯ 200ಕ್ಕೂ ಹೆಚ್ಚು ರೈತರು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸತೀಶ್ ರಾವ್, ಜಿಲ್ಲಾ ಕಾರ್ಯದರ್ಶಿ ಇಮ್ಮಾವು ರಘು, ಶಿವಣ್ಣ, ತಿಮ್ಮನಾಯ್ಕ, ರಂಗಸ್ವಾಮಿನಾಯಕ, ರಾಮಚಂದ್ರ ನಾಯ್ಕ, ಮಹದೇವನಾಯ್ಕ, ಆನಂದ್, ಸಿದ್ದರಾಜು, ಶ್ವೇತ, ಶೈಲಜಾ, ಅಹಲ್ಯ, ನಂಜುಂಡ, ಕೃಷ್ಣ, ಯೋಗಿ, ಸವಿತಾ, ಸಿದ್ದಪ್ಪಾಜಿ, ಜವರಪ್ಪ, ವಿನಯ್, ಮಂಜು, ಮಾದೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.