ADVERTISEMENT

ಬರಕ್ಕೆ ಸಿಗದ ಸ್ಪಂದನೆ: ರೈತ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 15:30 IST
Last Updated 3 ಏಪ್ರಿಲ್ 2024, 15:30 IST
   

ಮೈಸೂರು: ತೀವ್ರ ಬರಗಾಲದಿಂದ ತತ್ತರಿಸಿರುವ ರೈತರ ಸಂಕಷ್ಟ ಆಲಿಸಲು ಯಾರೂ ಇಲ್ಲವಾಗಿದ್ದಾರೆ. ಅಧಿಕಾರ ಹಿಡಿಯಲು ಪೈಪೋಟಿ ನಡೆಸುತ್ತಿದ್ದಾರೆ. ರಾಜಕಾರಣವನ್ನು ವ್ಯಾಪಾರಕ್ಕಿಂತಲೂ ಹೆಚ್ಚು ಲಾಭ ಗಳಿಸುವ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ.

– ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಇಲ್ಲಿನ ಜೆಎಸ್‌ಎಸ್‌ ಆಸ್ಪತ್ರೆ ಸಮೀಪದ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಬರಗಾಲದಲ್ಲಿ ಚುನಾವಣೆ–ರೈತರ ದಿಕ್ಸೂಚಿ’ ಚಿಂತನ–ಮಂಥನ ಸಭೆಯಲ್ಲಿ ರೈತ ಮುಖಂಡರು ಮೇಲಿನಂತೆ ಆಕ್ರೋಶ ವ್ಯಕ್ತಪಡಿಸಿದರು.

ಒಣಗಿದ ಕಬ್ಬಿನ ಗಿಡಕ್ಕೆ ನೀರು ಹಾಕಿ, ಶೋಕಗೀತೆಯೊಂದಿಗೆ ಉದ್ಘಾಟನೆ ನೆರವೇರಿಸಿದ್ದು ಗಮನಸೆಳೆಯಿತು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ಪ್ರಾಕೃತಿಕ ವಿಕೋಪದಿಂದ ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ. ನೀರಿನ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಕೊಳವೆಬಾವಿಗಳಲ್ಲಿ ದೊರೆಯುವ ನೀರಿನ ಪ್ರಮಾಣ ಕಡಿಮೆಯಾಗಿದೆ. ರೈತರು ಈಗಲಾದರೂ ಹಳ್ಳಿಗಳಲ್ಲಿ ಗುಡಿ–ಗೋಪುರ ಕಟ್ಟುವ ಚಿಂತನೆ ಕಡಿಮೆ ಮಾಡಿ ಕೆರೆ– ಕಟ್ಟೆಗಳ ಹೂಳೆತ್ತಿ ಪುನಶ್ಚೇತನ ನೀಡಬೇಕು. ಹೊಸದಾಗಿ ಕೆರೆಗಳನ್ನು ನಿರ್ಮಿಸುವ ಕೆಲಸ ಮಾಡಬೇಕು. ಇಲ್ಲದಿದಲ್ಲಿ ಭವಿಷ್ಯದಲ್ಲಿ ಬಹಳ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದರು.

‘ರಾಜಕಾರಣಿಗಳಿಗೆ ಜನರ ಸಂಕಷ್ಟ ಬೇಕಾಗಿಲ್ಲ. ಅಧಿಕಾರಿಗಳು ಚುನಾವಣಾ ಗುಂಗಿನಲ್ಲಿ ತಲ್ಲೀನವಾಗಿದ್ದಾರೆ’ ಎಂದು ದೂರಿದರು.

‘ರಾಜಕೀಯ ಪಕ್ಷಗಳು ಬರ ನಿವಾರಣೆಗೆ, ಕೃಷಿ ಕ್ಷೇತ್ರದ ರಕ್ಷಣೆಗೆ, ಕೆರೆ– ಕಟ್ಟೆ– ನದಿ ಸಂರಕ್ಷಣೆಗೆ, ಅರಣ್ಯ ಸಂರಕ್ಷಣೆಗೆ ಒತ್ತು ನೀಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ನಾರಾಯಣ ರೆಡ್ಡಿ ಮಾತನಾಡಿ, ‘ಕೇಂದ್ರ ಸರ್ಕಾರ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಚಳವಳಿಯನ್ನು ಹತ್ತಿಕ್ಕುತ್ತಿದೆ. ಎಂ.ಎಸ್. ಸ್ವಾಮಿನಾಥನ್‌ ವರದಿ ಶಿಫಾರಸು ಜಾರಿಗೆ ಕ್ರಮ ಕೈಗೊಂಡಿಲ್ಲ. ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ಈಡೇರಿಲ್ಲ’ ಎಂದು ದೂರಿದರು.

ಅರಸಿನ ಬೆಳೆಗಾರರ ಸಂಘದ ನಾಗಾರ್ಜುನ ಮಾತನಾಡಿ, ‘ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚವನ್ನೆ ಕಡಿಮೆ ತೋರಿಸಿ ಸರ್ಕಾರ ರೈತರನ್ನು ವಂಚಿಸುತ್ತಿದೆ’ ಎಂದು ಆರೋಪಿಸಿದರು.

ಮುಖಂಡರಾದ ಹತ್ತಳ್ಳಿ ದೇವರಾಜ್‌, ಪಿ. ಸೋಮಶೇಖರ್, ಎನ್.ಎಚ್. ದೇವಕುಮಾರ್, ಧರ್ಮರಾಜ್, ಕಮಲಮ್ಮ, ರೇವಣ್ಣ,ಶಿವಮೂರ್ತಿ, ಮಹದೇವಸ್ವಾಮಿ, ಕುರುಬೂರು ಸಿದ್ದೇಶ್, ವೆಂಕಟೇಶ್, ಪರಶಿವಮೂರ್ತಿ, ರಾಜೇಶ, ರಾಜು, ಕೆಂಡಗಣ್ಣಸ್ವಾಮಿ, ಕಿರಗಸೂರು ಶಂಕರ್, ಬರಡನಪುರ ನಾಗರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.