ADVERTISEMENT

ನಿಲ್ಲದ ರೈತರ ಕಿಚ್ಚು

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಉಸ್ತುವಾರಿಗೆ ಮನವಿ ಪತ್ರ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 16:30 IST
Last Updated 1 ಜುಲೈ 2020, 16:30 IST
ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಬಾರದು ಎಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮತ್ತು ಜನಾಂದೋಲನ ಮಹಾಮೈತ್ರಿ ನೇತೃತ್ವದಲ್ಲಿ ರೈತರು ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಬಾರದು ಎಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮತ್ತು ಜನಾಂದೋಲನ ಮಹಾಮೈತ್ರಿ ನೇತೃತ್ವದಲ್ಲಿ ರೈತರು ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಮೈಸೂರು: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಬಾರದು ಎಂದು ಆಗ್ರಹಿಸಿ ಕಳೆದ ಹಲವು ದಿನಗಳಿಂದ ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ನಿಲ್ಲುತ್ತಿಲ್ಲ. ಬುಧವಾರವೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮತ್ತು ಜನಾಂದೋಲನ ಮಹಾಮೈತ್ರಿ ನೇತೃತ್ವದಲ್ಲಿ ರೈತರು ಪ್ರಾದೇಶಿಕ ಆಯುಕ್ತರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿ ಸಭೆ ನಡೆಸಲು ಬಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಭೇಟಿ ಮಾಡಿದ ಪ್ರತಿಭಟನಾಕಾರರು ತಿದ್ದುಪಡಿಯಿಂದ ರೈತರ ಮೇಲಾಗುವ ದುಷ್ಪರಿಣಾಮಗಳನ್ನು ವಿವರಿಸಿ, ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ‘ನಿಜಕ್ಕೂ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ತಪ್ಪು ಮಾಡುತ್ತಿದೆ. ರೈತರ ಬದುಕನ್ನೇ ಕಿತ್ತುಕೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈ ಕಾಯ್ದೆಗೆ ತರುವ ತಿದ್ದುಪಡಿಯಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳಿಗೆ ಸಂಬಂಧಿಸಿದಂತೆ ಶಾಸನಸಭೆಗಳಲ್ಲಿ ಚರ್ಚೆ ನಡೆಯಬೇಕು. ಆದರೆ, ಯಾವುದೇ ಚರ್ಚೆಗೆ ಅವಕಾಶ ನೀಡದೆ ಸರ್ಕಾರ ಏಕಾಏಕಿ ತಿದ್ದುಪಡಿ ತರಲು ಹೊರಟಿರುವುದು ಸರಿಯಲ್ಲ ಎಂದು ಖಂಡಿಸಿದರು.

ತಿದ್ದುಪಡಿಯಿಂದ ರೈತಾಪಿ ಕೃಷಿ ಸಂಸ್ಕೃತಿ ಮಾಯವಾಗಿ, ಬಂಡವಾಳಿಗರ ಕೃಷಿ ಸಂಸ್ಕೃತಿ ಬೆಳೆಯುತ್ತದೆ ಎಂದು ಹೇಳಿದ ಅವರು, ಆಹಾರ ಸಾರ್ವಭೌಮತ್ವಕ್ಕೆ ಧಕ್ಕೆ ಬಂದು, ಆಹಾರ ಭದ್ರತೆ ಇಲ್ಲವಾಗುತ್ತದೆ ಎಂದು ಹರಿಹಾಯ್ದರು. ಮನವಿ ಸ್ವೀಕರಿಸಿದ ಸಚಿವ ಸೋಮಶೇಖರ್ ಈ ಕುರಿತು ಪರಿಶೀಲಿಸುವ ಭರವಸೆ ನೀಡಿದರು.

ಮುಖಂಡರಾದ ಅಶ್ವಥನಾರಾಯಣರಾಜೇಅರಸ್, ಲೋಕೇಶ್‌ರಾಜೇ ಅರಸ್, ಸರಗೂರು ನಟರಾಜ್, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ನೇತ್ರಾವತಿ, ಪಿ.ಮರಂಕಯ್ಯ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.