ADVERTISEMENT

ರೈತರ ಸಮಾವೇಶ:: ರಾಜಕೀಯ ಪ್ರಾತಿನಿಧ್ಯದ ಕೂಗು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 5:56 IST
Last Updated 24 ಡಿಸೆಂಬರ್ 2025, 5:56 IST
ಇಲವಾಲದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಸುನಿತಾ ಪುಟ್ಟಣ್ಣಯ್ಯ ಅವರು ರೈತ ವಿರೋಧಿ ಕಾಯ್ದೆಗಳ ಪ್ರತಿ ಸುಟ್ಟರು – ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
ಇಲವಾಲದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಸುನಿತಾ ಪುಟ್ಟಣ್ಣಯ್ಯ ಅವರು ರೈತ ವಿರೋಧಿ ಕಾಯ್ದೆಗಳ ಪ್ರತಿ ಸುಟ್ಟರು – ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.   

ಮೈಸೂರು: ಹಸಿರು ಶಾಲು ಬಾನೆತ್ತರೆಕ್ಕೆ ಬೀಸುತ್ತಾ, ರೈತ ಮುಖಂಡರು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ವಿರೋಧಿ ಮಸೂದೆಗಳ ಪ್ರತಿಯನ್ನು ಸುಟ್ಟರು. ಕರ್ನಾಟಕ ರಾಜ್ಯ ರೈತ ಸಂಘವು ಆಯೋಜಿಸಿದ್ದ ಜಿಲ್ಲಾ ರೈತರ ಸಮಾವೇಶದಲ್ಲಿ ‘ರೈತ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು’ ಎಂಬ ಕೂಗು ಮಾರ್ದನಿಸಿತು.

ಇಲವಾಲದ ಸಂತೆಮಾಳದಲ್ಲಿ ಮಂಗಳವಾರ ಹಬ್ಬದ ವಾತಾವರಣ ಇತ್ತು. ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡು, ಕೆ.ಎಸ್‌.ಪುಟ್ಟಣ್ಣಯ್ಯ ಅವರ ಮುಖವಾಡ ಧರಿಸಿ ಆಗಮಿಸಿದರು. ರೈತ ಸಂಘಟನೆ ಪರವಾದ ಘೋಷಣೆ ಕೂಗುತ್ತಾ, ರೈತರು ಬೈಕ್‌ ಜಾಥಾ ನಡೆಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಘಟನೆಯ ಗೌರವಾಧ್ಯಕ್ಷ ಚಾಮರಸ ಪಾಟೀಲ್, ‘ಯಾವುದೇ ಪಕ್ಷದ ಸರ್ಕಾರಗಳು ನಮ್ಮ ಪರವಾಗಿ ಇಲ್ಲ. ರಾಜಕಾರಣ ಕಲುಷಿತಗೊಂಡಿದ್ದು, ರೈತರು ರಾಜಕೀಯವಾಗಿ ಜಾಗೃತರಾಗಿದ್ದು, ಅಧಿಕಾರ ಪಡೆಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಪ್ರಗತಿಪರರು ಸೇರಿ ಕಟ್ಟಿದ ಜನತಾದಳವನ್ನು ಕುಮಾರಣ್ಣ, ದೇವೇಗೌಡ ಬಿಜೆಪಿಗೆ ಅಡ ಇಟ್ಟರು. ರಾಜಕೀಯ ಪಕ್ಷಗಳು ಬದುಕಿನ ರಾಜಕಾರಣ ಮಾಡದೆ, ರೈತರೊಂದಿಗೆ ಚೆಲ್ಲಾಟ ಆಡುತ್ತಿವೆ. ದೇಶದಲ್ಲಿ ಶೇ 65ರಷ್ಟು ರೈತರಿದ್ದು, ನಮ್ಮದೇ ಆದ ಪಕ್ಷ ಅಧಿಕಾರಕ್ಕೆ ತರಬೇಕು. ಆಗ ರೈತ ಪರವಾದ ಯೋಜನೆ ರೂಪಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಸಂಘಟನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ವಿದ್ಯುಚ್ಛಕ್ತಿ, ಮಾರುಕಟ್ಟೆ ಹಾಗೂ ಬೀಜ ನೀತಿಯು ಖಾಸಗಿ ವಲಯವನ್ನು ಬೆಂಬಲಿಸುತ್ತಿದೆ. ಇವು ರೈತರನ್ನು ಗುಲಾಮಗಿರಿಗೆ ತಳ್ಳುವ ಸಾಧ್ಯತೆಯಿದ್ದು, ಇದರ ವಿರುದ್ಧ ಸಾಮೂಹಿಕ ಹೋರಾಟ ಅಗತ್ಯ’ ಎಂದು ಹೇಳಿದರು. 

ಸಂಘಟನೆ ಪದಾಧಿಕಾರಿಗಳಾದ ಹೊಸೂರು ಕುಮಾರ್, ಸುನಿತಾ ಪುಟ್ಟಣ್ಣಯ್ಯ, ಮಹೇಶ್ ಪ್ರಭು, ಒಡನಾಡಿ ಸ್ಟ್ಯಾನ್ಲಿ, ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಕೆಂಪುಗೌಡ ಭಾಗವಹಿಸಿದ್ದರು.

ಸಮಾವೇಶದಲ್ಲಿ ಭಾಗವಹಿಸಿದ್ದ ರೈತರು 

ಅನಾವರಣವಾಗದ ಪುಟ್ಟಣ್ಣಯ್ಯ ಪ್ರತಿಮೆ

ಇಲವಾಲದಲ್ಲಿ ಪುಟ್ಟಣ್ಣಯ್ಯ ಪ್ರತಿಮೆ ಅನಾವರಣಗೊಳಿಸುವ ಕಾರ್ಯಕ್ರಮ ಮುಂದೂಡಲಾಯಿತು. ಪ್ರತಿಮೆ ಸ್ಥಾಪಿಸುವ ಜಾಗದ ವಿವಾದ ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಪ್ರತಿಮೆಯನ್ನು ಇಲವಾಲ ಪೊಲೀಸರು ಠಾಣೆಯಲ್ಲಿರಿಸಿದ್ದರು.  ‘ಪುಟ್ಟಣ್ಣಯ್ಯ ಅವರ ಪ್ರತಿಮೆಯನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾಗಿದೆ. ರಾಜ್ಯದ ಜನ ಅವರಿಗೆ ಅಪಾರ ಗೌರವ ನೀಡುತ್ತಿದ್ದಾರೆ. ಅವರ ಪ್ರತಿಮೆಯನ್ನು ಸರ್ಕಾರದ ಸಹಕಾರದೊಂದಿಗೆ ಇಲವಾಲದಲ್ಲೇ ಅನಾವರಣ ಮಾಡುತ್ತೇವೆ’ ಎಂದು ಬಡಗಲಪುರ ನಾಗೇಂದ್ರ ಹೇಳಿದರು.

ಸಮಾವೇಶದ ಪ್ರಮುಖ ನಿರ್ಣಯಗಳು:

ಜಿಲ್ಲಾ ರೈತ ಸಮಾವೇಶದಲ್ಲಿ 19 ನಿರ್ಣಯ ಕೈಗೊಳ್ಳಲಾಯಿತು. 

* ಕೈಗಾರಿಕೆ ಸ್ಥಾಪಿಸುವುದಾಗಿ ರೈತರ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಬೇನಾಮಿ ಹೆಸರಿನಲ್ಲಿ ಖರೀದಿಸಿ ಅದೇ ಭೂಮಿಯನ್ನು ದುಬಾರಿ ಬೆಲೆಗೆ ಕೆಐಎಡಿಬಿಗೆ ನೀಡಿ ಮೈಸೂರು ತಾಲ್ಲೂಕು ಕೋಚನಹಳ್ಳಿ ಗ್ರಾಮದ ರೈತರಿಗೆ ಮೋಸ ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕು.

* ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಸತಿ ನಿವೇಶನ ಮತ್ತು ಮನೆ ಕಳೆದುಕೊಂಡಿರುವ ಮರಲಿ ಗ್ರಾಮದ ರೈತ ಕುಟುಂಬಗಳಿಗೆ ಪ್ರತ್ಯೇಕ ನಿವೇಶನ ನೀಡಬೇಕು. ಹೊಸ ರಾಷ್ಟ್ರೀಯ ಹೆದ್ದಾರಿ-273ಕ್ಕೆ ಭೂಮಿ ಕಳೆದುಕೊಂಡಿರುವ ಬಗರ್‌ಹುಕುಂ ಸಾಗುವಳಿದಾರರಿಗೆ ಪರಿಹಾರ ನೀಡಬೇಕು

* ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಮಾರುಕಟ್ಟೆ ಚೌಕಟ್ಟು ನೀತಿ ಬೀಜ ಕಾಯ್ದೆ ಮತ್ತು ವಿದ್ಯುತ್ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲವೆಂದು ತೀರ್ಮಾನಿಸಬೇಕು.

* ಭೂ ಸುಧಾರಣೆ ತಿದ್ದುಪಡಿಯ ನಂತರ ಗುಜರಾತ್‌ ಮೂಲದ ಬಂಡವಾಳಶಾಹಿಗಳು ರಾಜ್ಯದಲ್ಲಿ ಲಗಾಮಿಲ್ಲದೆ ಕೃಷಿ ಭೂಮಿ  ಕಬಳಿಸುತ್ತಿದ್ದಾರೆ. ಇದಕ್ಕೆ ತಡೆ ಒಡ್ಡಬೇಕು ಅಭಿವೃದ್ಧಿಯ ನೆಪದಲ್ಲಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದನ್ನು ರಾಜ್ಯ ಸರ್ಕಾರ ಕೈಬಿಟ್ಟು ಭೂ ಉಪಯೋಗ ನೀತಿಯನ್ನು ರೂಪಿಸಬೇಕು

* ಜಿಲ್ಲೆಯ ಸರಗೂರು ಮತ್ತು ಸಾಲಗ್ರಾಮ ನೂತನ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.