ADVERTISEMENT

‘ಶರಣರ ನಾಡಿನ ವಚನ ಗುಮ್ಮಟ ಫ.ಗು. ಹಳಕಟ್ಟಿ’

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 15:35 IST
Last Updated 4 ಜುಲೈ 2022, 15:35 IST
ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಹಯೋಗದಲ್ಲಿ ವಚನ ಸಾಹಿತ್ಯ ಸಂಶೋಧಕ ಡಾ.ಫ.ಗು. ಹಳಕಟ್ಟಿ ಜಯಂತಿಯ ಅಂಗವಾಗಿ ಗೌರಿಶಂಕರ ನಗರದ ಗೌರಿಶಂಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ಯನ್ನು ಸಾಹಿತಿ ಬನ್ನೂರು ಕೆ.ರಾಜು ಉದ್ಘಾಟಿಸಿದರು
ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಹಯೋಗದಲ್ಲಿ ವಚನ ಸಾಹಿತ್ಯ ಸಂಶೋಧಕ ಡಾ.ಫ.ಗು. ಹಳಕಟ್ಟಿ ಜಯಂತಿಯ ಅಂಗವಾಗಿ ಗೌರಿಶಂಕರ ನಗರದ ಗೌರಿಶಂಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ಯನ್ನು ಸಾಹಿತಿ ಬನ್ನೂರು ಕೆ.ರಾಜು ಉದ್ಘಾಟಿಸಿದರು   

ಮೈಸೂರು: ‘ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರು ಶರಣರ ನಾಡು ವಿಜಯಪುರದ ಗೋಳಗುಮ್ಮಟದ ಎತ್ತರವನ್ನೂ ಮೀರಿಸಿ ವಚನ ಸಾಹಿತ್ಯವನ್ನು ಬೆಳೆಸಿದವರು ಹಾಗೂ ಕರ್ನಾಟಕದ ವಚನ ಗುಮ್ಮಟವೆಂದೇ ಹೆಸರಾದವರು’ ಎಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.

ನಗರದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಹಯೋಗದಲ್ಲಿ ವಚನ ಸಾಹಿತ್ಯ ಸಂಶೋಧಕ ಡಾ.ಫ.ಗು. ಹಳಕಟ್ಟಿ ಜಯಂತಿಯ ಅಂಗವಾಗಿ ಗೌರಿಶಂಕರ ನಗರದ ಗೌರಿಶಂಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ವಚನ ಸಾಹಿತ್ಯಕ್ಕಾಗಿ ತಮ್ಮ ಜೀವ-ಜೀವನವನ್ನೆಲ್ಲಾ ತ್ಯಾಗ ಮಾಡಿದ ಹಳಕಟ್ಟಿ ಅವರ ಜನ್ಮ ದಿನವನ್ನು ಈ ವರ್ಷದಿಂದ ವಚನ ಸಾಹಿತ್ಯ ಸಂರಕ್ಷಣಾ ದಿನವಾಗಿ ಆಚರಿಸಲು ಸರ್ಕಾರ ಕ್ರಮ ಕೈಗೊಂಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ’ ಎಂದರು.

ADVERTISEMENT

‘ಹಳಕಟ್ಟಿಯವರು ಸಂಶೋಧಕರಾಗಿ ಪ್ರವೇಶಿಸುವ ಮುನ್ನ ಬೆರಳೆಣಿಕೆಯಷ್ಟು ವಚನಕಾರರು ಹಾಗೂ ವಚನಗಳನ್ನು ಮಾತ್ರ ಕನ್ನಡ ಸಾರಸ್ವತ ಲೋಕ ಕಂಡಿತ್ತು. ತಮ್ಮ ಸಂಶೋಧನೆಯ ಮೂಲಕ ಮುನ್ನೂರು ವಚನಕಾರರನ್ನು, ಸಾವಿರಾರು ವಚನಗಳನ್ನು ಬೆಳಕಿಗೆ ತಂದ ವಚನ ಮಹಾತ್ಮ ಹಳಕಟ್ಟಿಯವರು. ವಚನ ಸಾಹಿತ್ಯವನ್ನು ಉಸಿರಾಗಿಸಿಕೊಂಡಿದ್ದ ಅವರು, ಹಸ್ತಪ್ರತಿಗಳಿಗೆ, ಓಲೆಗರಿ ಗ್ರಂಥಗಳಿಗೆ, ತಾಳೆ ಗರಿಗಳಿಗಾಗಿ ಊರೂರು ಅಲೆದರು. ಹೀಗೆ ಸಂಗ್ರಹಿಸಿದ ವಚನ ರಾಶಿಯನ್ನು ಪುಸ್ತಕ ರೂಪದಲ್ಲಿ ಮುದ್ರಿಸಲು ತಮ್ಮ ಮನೆಯನ್ನೇ ಮಾರಿ ಮುದ್ರಣಾಲಯ ಮಾಡಿದ ಮಹನೀಯ’ ಎಂದು ಸ್ಮರಿಸಿದರು.

‘ತಮ್ಮೆಲ್ಲ ಆಸ್ತಿ ಕಳೆದುಕೊಂಡು ವಚನ ಸಾಹಿತ್ಯದ ಅಮೂಲ್ಯ ಆಸ್ತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟು ಹೋಗಿರುವ ಮಹಾ ತ್ಯಾಗಿ. ಅವರು ಇಲ್ಲದೆ ಹೋಗಿದ್ದರೆ ಇಷ್ಟೊಂದು ಸಮೃದ್ಧವಾದ ವಚನ ಸಾಹಿತ್ಯ ನಮಗೆ ದೊರಕುತ್ತಿರಲಿಲ್ಲ’ ಎಂದರು.

ನಂತರ ವಚನ ವಾಚನ ಗೋಷ್ಠಿ ನಡೆಯಿತು. ಶಾಲಾ ಮಕ್ಕಳು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಆಯ್ದಕ್ಕಿ ಲಕ್ಕಮ್ಮ, ಅಂಬಿಗರ ಚೌಡಯ್ಯ ವಚನಗಳನ್ನು ವಾಚಿಸಿ ಗಮನಸೆಳೆದರು. ಉಮಾಪತಿ ಹಾಗೂ ವಿಶ್ರಾಂತ ಶಿಕ್ಷಕ ಎ.ಎಸ್. ಪ್ರಕಾಶ್ ವಚನ ಗಾಯನ ಪ್ರಸ್ತುತಪಡಿಸಿದರು.

ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ ಹಾಗೂ ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಅವರು ಫ.ಗು. ಹಳಕಟ್ಟಿ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಬಹುಮಾನ ವಿತರಿಸಿದರು.

ಮೈಸೂರು ಕಲಾ ಗ್ಯಾಲರಿಯ ಅಧ್ಯಕ್ಷ ಎಲ್. ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಯೋಗೇಂದ್ರ, ಮಹಾದೇವಮ್ಮ, ಸಣ್ಣದೇವಮ್ಮ, ಲತಾ ಉಪಸ್ಥಿತರಿದ್ದರು.

ಗೌರಿಶಂಕರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ.ಸಂಪತ್ತು ಸ್ವಾಗತಿಸಿದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.