ಮೈಸೂರು: ಸರ್ಕಾರದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ನಿರುದ್ಯೋಗಿಗಳು ಹಾಗೂ ವಿದ್ಯಾರ್ಥಿ ಸಂಘಟನೆ ಸದಸ್ಯರು ಮಾನಸ ಗಂಗೋತ್ರಿ ಆವರಣದ ಕ್ಲಾಕ್ ಟವರ್ ಬಳಿ ಶುಕ್ರವಾರ ಪ್ರತಿಭಟಿಸಿದರು.
‘ನಾಲ್ಕೈದು ಪದವಿ ತೆಗೆದುಕೊಂಡರೂ ಕನಿಷ್ಠ ಸರ್ಕಾರಿ ಉದ್ಯೋಗ ದೊರೆಯುತ್ತಿಲ್ಲ. ವಿದ್ಯಾರ್ಥಿಗಳು ಹೆಚ್ಚುಹೆಚ್ಚು ಓದಿದ ಕಾರಣಕ್ಕೆ ಚಿತ್ರಹಿಂಸೆಗೆ ಗುರಿಯಾಗಿದ್ದು, ಮಾನಸಿಕವಾಗಿ ವಿಚಲಿತವಾಗಿದ್ದಾರೆ. ಪ್ರಧಾನಿ 10 ವರ್ಷದ ಹಿಂದೆಯೇ ವಾರ್ಷಿಕವಾಗಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅತಿ ಹೆಚ್ಚು ಉದ್ಯೋಗಗಳು ನಷ್ಟವಾಗಿ ಉದ್ಯೋಗ ಕ್ಷೇತ್ರದಲ್ಲಿ ನೇಮಕಾತಿ ನಡೆಯುತ್ತಿಲ್ಲ’ ಎಂದು ಆರೋಪಿಸಿದರು.
‘ರಾಜ್ಯ ಸರ್ಕಾರದಲ್ಲಿ 2,73,386 ಮಂಜೂರಾದ ಖಾಲಿ ಹುದ್ದೆಗಳಿವೆ. ಈ ಹುದ್ದೆ ಭರ್ತಿ ಮಾಡದೆ ಒಳ ಮೀಸಲಾತಿ, ಜಾತಿ ಸಮೀಕ್ಷೆ ನೆಪವೊಡ್ಡಿ ನೇಮಕಾತಿಯನ್ನು ನಾಜೂಕಾಗಿ ಮುಂದಕ್ಕೆ ಹಾಕುವ ಸರ್ಕಾರ ಇದೆಲ್ಲದರ ಅಣಕದಂತೆ ಖಾಸಗಿ ಉದ್ಯೋಗ ಮೇಳವನ್ನು ಏರ್ಪಡಿಸುತ್ತಿದೆ’ ಎಂದು ಟೀಕಿಸಿದರು.
‘ವಿದ್ಯಾರ್ಥಿ ಯುವಜನರ ಕಷ್ಟವನ್ನು ಕೇಳುವ ಯಾವ ಹೋರಾಟಗಾರರೂ ಮಾಧ್ಯಮಗಳೂ, ಮುತ್ಸದ್ಧಿ ವ್ಯಕ್ತಿಗಳು ನಮಗೆ ಕಾಣುತ್ತಿಲ್ಲ. ಕೂಡಲೇ ಖಾಲಿಯಿರುವ ಹುದ್ದೆ ಭರ್ತಿ ಮಾಡಬೇಕು’ ಎಂದು ಆಗ್ರಹಿಸಿದರು.
ಸಂಶೋಧಕರಾದ ಪ್ರದೀಪ್ ಮುಮ್ಮಡಿ, ಶಿವಶಂಕರ್, ವಿಶ್ವಪ್ರಸಾದ್, ಕಾರ್ತಿಕ್, ಶರತ್ ಬಂಡಳ್ಳಿ, ರವಿ ಕೊಳ್ಳೆಗಾಲ, ವಿದ್ಯಾರ್ಥಿಗಳಾದ ಕೃಷ್ಣ ಗಣಿಗನೂರು, ಸತೀಶ್ ಹೊಸಕೋಟೆ, ನಾಗೇಂದ್ರ, ಚಿರಾಗ್, ಸುಮಂತ್, ನಿತಿನ್, ಶ್ವೇತಾ, ಜಯಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.