ಮೈಸೂರು: ನಗರವು ವೇಗವಾಗಿ ಬೆಳೆಯುತ್ತಿದ್ದು, ಸರ್ಕಾರವು ವಿಪತ್ತು ನಿರ್ವಹಣೆ ಕುರಿತು ವಿಶೇಷ ಗಮನಹರಿಸಿದೆ. ಜಿಲ್ಲೆಯಲ್ಲಿ ಎರಡು ಹೊಸ ಅಗ್ನಿಶಾಮಕ ಘಟಕ ಹಾಗೂ ಎಸ್‌ಆರ್‌ಎಫ್ ಘಟಕ ಆರಂಭಿಸಲು ಮುಂದಾಗಿದೆ.
ನಗರದಲ್ಲಿ ಸರಸ್ವತಿಪುರಂ, ಹೆಬ್ಬಾಳ ಹಾಗೂ ಬನ್ನಿಮಂಟಪದಲ್ಲಿ ಅಗ್ನಿಶಾಮಕ ಘಟಕ ಕಾರ್ಯನಿರ್ವಹಿಸುತ್ತಿವೆ. ನಗರವು ಬೆಳೆದಂತೆ ಹೆಚ್ಚುವರಿ ಘಟಕದ ಬೇಡಿಕೆ ಕೇಳಿಬಂದಿತ್ತು. ಪ್ರತಿ 10 ಕಿ.ಮೀ.ಗೆ ಒಂದು ಅಥವಾ 50ಸಾವಿರ ಜನಸಂಖ್ಯೆಗೆ ಒಂದರಂತೆ ಅಗ್ನಿಶಾಮಕ ಘಟಕ ಇರಬೇಕು ಎಂಬ ನಿಯಮವಿದೆ. ಆದರೆ, ಚಾಮುಂಡಿಬೆಟ್ಟದ ಭಾಗಕ್ಕೆ ಹತ್ತಿರವಿರುವ ಘಟಕಗಳು ಈ ಮಿತಿಯನ್ನು ಮೀರಿವೆ. ಆ ಭಾಗದಲ್ಲಿ ಜನಸಂಖ್ಯೆ ಜಾಸ್ತಿಯಾಗಿದೆ ಹಾಗೂ ಅಗ್ನಿಶಾಮಕ ದಳ ದೂರವಿದೆ.
ಈಚೆಗೆ ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ಈ ವೇಳೆ ನೀರು ಪೂರೈಕೆಗೂ ಸಮಸ್ಯೆಯಾಗಿತ್ತು. ನೀರು ಪೂರೈಸಲು ನೆರವಾಗದ ಕಾರಣಕ್ಕೆ ಮಾಲ್ ಒಂದರ ವಿರುದ್ಧ ಜಿಲ್ಲಾಧಿಕಾರಿ ನೋಟಿಸ್ ಜಾರಿಗೊಳಿಸಿದ್ದರು. ಈ ಬೆಳವಣಿಗೆಗಳ ಬಳಿಕ ಇದೀಗ ಈ ಭಾಗದಲ್ಲಿ ಹೊಸ ಘಟಕ ತೆರೆಯಲು ಇಲಾಖೆ ಜಾಗ ಗುರುತಿಸಿದೆ. ಬಂಡೀಪಾಳ್ಯದಿಂದ ತಿ.ನರಸೀಪುರ ರಸ್ತೆಯ ಭಾಗದಲ್ಲಿ ಘಟಕಕ್ಕಾಗಿ ಸ್ಥಳ ಹುಡುಕಾಟ ನಡೆದಿದೆ.
ವರುಣದಲ್ಲಿರುವ ಸಿಎಫ್‌ಟಿಆರ್‌ಐಗೆ ಸೇರಿದ ಜಾಗದಲ್ಲಿ ಮತ್ತೊಂದು ಅಗ್ನಿಶಾಮಕ ದಳದ ಘಟಕ ನಿರ್ಮಾಣಕ್ಕೆ ಯೋಜನೆ ರೂಪುಗೊಳಿಸಲಾಗಿದೆ. ಇದರಿಂದ ಗ್ರಾಮೀಣ ಭಾಗಕ್ಕೂ ಸೇವೆ ವಿಸ್ತರಿಸಲು ಸಾಧ್ಯವಾಗಲಿದೆ.
‘ನಗರದ ಯಾವುದೇ ಭಾಗದಲ್ಲೂ ಅವಘಡಗಳಾದಾಗ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬೇಗನೆ ತಲುಪಲು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಘಟಕಗಳಿಗೆ ಸ್ಥಳ ಗುರುತಿಸಲಾಗಿದೆ’ ಎಂದು ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ಚಂದನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎರಡು ಹೊಸ ಘಟಕ ನಿರ್ಮಿಸಲಾಗುತ್ತಿದ್ದು, ಅದಕ್ಕಾಗಿ ಸ್ಥಳ ಗುರುತಿಸುವ ಕೆಲಸ ನಡೆಯುತ್ತಿದೆ. ನಗರ ಭಾಗದಲ್ಲಿ ಘಟಕ ನಿರ್ಮಿಸಲು ಸಿಎ ನಿವೇಶನಕ್ಕಾಗಿ ಮುಡಾ ಅಧಿಕಾರಿಗಳಿಂದಲೂ ಮಾಹಿತಿ ಪಡೆಯಲಾಗಿದೆ. ಅದರ ಹೊರತಾಗಿ ಬೇರೆ ಜಾಗವನ್ನೂ ಹುಡುಕುತ್ತಿದ್ದೇವೆ’ ಎಂದು ತಿಳಿಸಿದರು.
ವರುಣಾದಲ್ಲಿ ಹೊಸ ಘಟಕ ಸ್ಥಾಪನೆ ಪ್ರಸ್ತುತ 3 ಘಟಕಗಳಿಂದ ಕಾರ್ಯನಿರ್ವಹಣೆ
ಎಸ್‌ಡಿಆರ್‌ಎಫ್ ಘಟಕ ನಿರ್ಮಾಣ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಶೇಷ ಘಟಕವಾದ ಎಸ್‌ಡಿಆರ್‌ಎಫ್‌ನ ಅಕಾಡೆಮಿ ನಿರ್ಮಿಸಲು ತಾಲ್ಲೂಕಿನ ಸೋಮೇಶ್ವರಪುರ ಗ್ರಾಮದಲ್ಲಿ ಜಾಗ ಗುರುತಿಸಲಾಗಿದೆ. ‘ಪ್ರವಾಹ ಭೂಕುಸಿತ ವಾಹನಗಳ ಸಿಲುಕುವಿಕೆ ಮತ್ತು ಇತರ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಈ ಘಟಕ ಸಹಾಯಕ್ಕೆ ಧಾವಿಸುತ್ತದೆ. ಸದ್ಯ ಮೈಸೂರಿನಲ್ಲಿ ಈ ರೀತಿಯ ಪರಿಸ್ಥಿತಿ ಇದ್ದರೆ ಬೆಂಗಳೂರು ಅಥವಾ ಮಂಗಳೂರಿನಲ್ಲಿರುವ ಘಟಕ ಬರಬೇಕಾಗುತ್ತದೆ. ಹೊಸ ಘಟಕ ಸ್ಥಾಪನೆಯಿಂದ ತ್ವರಿತವಾಗಿ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ’ ಎಂದು ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ಚಂದನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.