ತಲಕಾಡು: ಹೋಬಳಿಯಲ್ಲಿ ನದಿಪಾತ್ರದ ಬಹುತೇಕ ಗ್ರಾಮಗಳು ಪ್ರವಾಹದಿಂದ ಜಲಾವೃತವಾಗಿದೆ. ಮಾಧವ ಮಂತ್ರಿ ಅಚ್ಚುಕಟ್ಟು ಪ್ರದೇಶದ ಸುಮಾರು ಮೂರು ಸಾವಿರ ಎಕರೆ ಭತ್ತದ ಕೃಷಿ ಭೂಮಿಯಲ್ಲೂ ನೀರು ನಿಂತಿದ್ದು, ರೈತರು ಕಂಗಲಾಗಿದ್ದಾರೆ.
ಭತ್ತ ಬಿತ್ತನೆ ಮಾಡಿದವರು ಹಾಗೂ ಬಿತ್ತನೆಗೆ ಭೂಮಿ ಹದಗೊಳಿಸಿದವರೂ ಸಂಕಷ್ಟಕ್ಕೀಡಾಗಿದ್ದಾರೆ. ಮಳೆ ಗುರುವಾರವೂ ಮುಂದುವರಿದಿದೆ. ಜಮೀನಿನ ನೀರು ಹೊರ ಹೋಗಲು ಕನಿಷ್ಠ ಮೂರ್ನಾಲ್ಕು ದಿನಗಳು ಬೇಕಾಗಿದ್ದು, ಮತ್ತೆ ಭೂಮಿ ಹದ ಮಾಡಲು ಒಂದು ವಾರ ಸಮಯ ತೆಗೆದುಕೊಳ್ಳಲಿದೆ. ಈಗಾಗಲೇ ಖರ್ಚು ಮಾಡಿರುವ ರೈತರು ಮತ್ತೆ ಬಂಡವಾಳ ಒಗ್ಗೂಡಿಸಲು ಪರಿತಪಿಸುತ್ತಿದ್ದಾರೆ.
ಇದರ ಜೊತೆಗೆ ಜಾನುವಾರುಗಳಿಗೂ ಮೇವಿನ ಸಮಸ್ಯೆ ಉಂಟಾಗಿದ್ದು, ಹೈನುಗಾರಿಕೆಯಲ್ಲಿ ತೊಡಗಿರುವವರೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ತಡಿ ಮಾಲಂಗಿ ಗ್ರಾಮದಲ್ಲಿ 21 ಮನೆಗಳಿಗೆ ಪ್ರವಾಹದ ನೀರು ನುಗ್ಗಿದ್ದು ಕುಟುಂಬದ ಸದಸ್ಯರನ್ನು ಹಾಗೂ ಸಂಕಷ್ಟಕ್ಕೆ ಒಳಗಾದ 70ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಕೊಡಲಾಗಿದೆ.
‘ನಮ್ಮ ಗ್ರಾಮದ 21 ಕುಟುಂಬಗಳಿಗೆ ಪ್ರತಿವರ್ಷವೂ ಪ್ರವಾಹದ ಸಂದರ್ಭದಲ್ಲಿ ಸಮಸ್ಯೆ ಉಂಟಾಗುತ್ತದೆ. ಶೀಘ್ರವೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಬೇಕೆಂದು ಗ್ರಾಮಸ್ಥರಾದ ನಂಜಯ್ಯ, ಇಂದ್ರಮ್ಮ, ಪ್ರಭು, ದೀಪಿಕಾ, ಮಮತಾ ರುದ್ರೇಶ್ ಮತ್ತು ರಮೇಶ್ ಮನವಿ ಮಾಡಿದರು.
ಕಾಳಜಿ ಕೇಂದ್ರದಲ್ಲಿ ಕಲಿಯೂರು ಗ್ರಾಮ ಪಂಚಾಯಿತಿ ಪಿಡಿಒ ಶೈಲಜಾ, ಕಂದಾಯ ಇಲಾಖೆಯ ಪ್ರಭಾರ ರಾಜಸ್ವ ನಿರೀಕ್ಷಕ ಸತೀಶ್, ಗ್ರಾಮ ಲೆಕ್ಕಾಧಿಕಾರಿ ನಯನ, ಕಾರ್ಯದರ್ಶಿ ಮಲ್ಲಿಕಾರ್ಜುನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.