ADVERTISEMENT

ಮೈಸೂರು | ಹಬ್ಬದ ಋತುವಿನಲ್ಲೂ ಬೆಲೆ ಕುಸಿತ: ಪುಷ್ಪ ಕೃಷಿಗೆ ತೀವ್ರ ಹಿನ್ನಡೆ

ಆಗಾಗ್ಗೆ ಮಳೆಯ ಹೊಡೆತ

ಆರ್.ಜಿತೇಂದ್ರ
Published 24 ಅಕ್ಟೋಬರ್ 2025, 2:57 IST
Last Updated 24 ಅಕ್ಟೋಬರ್ 2025, 2:57 IST
ಹುಣಸೂರು ತಾಲ್ಲೂಕಿನ ಕೊಮ್ಮೇಗೌಡನಕೊಪ್ಪಲಿನ ಹೊಲವೊಂದರ ಬದುವಿನಲ್ಲಿ ಬೆಳೆದ ಚೆಂಡು ಹೂವು
ಹುಣಸೂರು ತಾಲ್ಲೂಕಿನ ಕೊಮ್ಮೇಗೌಡನಕೊಪ್ಪಲಿನ ಹೊಲವೊಂದರ ಬದುವಿನಲ್ಲಿ ಬೆಳೆದ ಚೆಂಡು ಹೂವು   

ಮೈಸೂರು: ಈ ವರ್ಷ ಹಬ್ಬದ ಋತುವಿನಲ್ಲಿಯೂ ಹೂವಿನ ಧಾರಣೆ ಸಾಧಾರಣವಾಗಿದ್ದು, ರೈತರು ಬೆಳೆಗೆ ವ್ಯಯಿಸಿದ ಹಣವೂ ವಾಪಸ್ ಬರುತ್ತಿಲ್ಲ. ಆಗಾಗ್ಗೆ ತೀವ್ರ ಮಳೆಯ ಹೊಡೆತವೂ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಈ ಬಾರಿ ದೀಪಾವಳಿಯ ಕೆಲವು ದಿನಗಳ ಹಿಂದಷ್ಟೇ ಜಿಲ್ಲೆಯಲ್ಲಿ ಜೋರು ಮಳೆಯಾಗಿದ್ದು, ನಿರೀಕ್ಷೆಯಷ್ಟು ಹೂವು ಮಾರುಕಟ್ಟೆಗೆ ಬಂದಿಲ್ಲ. ಚೆಂಡು ಹೂವು, ಸೇವಂತಿಗೆ ಹೂವಿನ ಹೊಲಗಳು ಮಳೆಯಲ್ಲಿ ತೋಯ್ದ ಪರಿಣಾಮ ಹೂವುಗಳ ಗುಣಮಟ್ಟ ಕುಸಿದಿದ್ದು, ಮಾರುಕಟ್ಟೆಯಲ್ಲಿ ಕೈಗೆ ಸಿಕ್ಕ ಬೆಲೆಯಲ್ಲಿ ಮಾರಾಟ ನಡೆದಿದೆ. ಉತ್ತಮ ಬೆಲೆಯ ನಿರೀಕ್ಷೆಯೊಂದಿಗೆ ಬಂದಿದ್ದ ರೈತರು ‘ಹೂವು ಹಸಿ’ ಎನ್ನುವ ಕಾರಣಕ್ಕೆ ಸಿಕ್ಕಷ್ಟು ಬೆಲೆಗೆ ವರ್ತಕರಿಗೆ ನೀಡಿ ನಿರಾಸೆಯಿಂದ ವಾಪಸ್ ಆಗಿದ್ದಾರೆ.

ಬೇರೆ ಕೃಷಿಗೆ ಹೋಲಿಸಿದರೆ ಹೂವಿನ ಕೃಷಿ ನಿತ್ಯ ಆದಾಯ ತಂದು ಕೊಡುವ ಕೆಲಸ. ಹೀಗಾಗಿ ಪ್ರತಿದಿನದ ಖರ್ಚು ದೂಗಿಸಲೆಂದೇ ರೈತರು ಮುಖ್ಯ ಬೆಳೆಯ ಜೊತೆಯಲ್ಲಿ ವಿವಿಧ ಹೂವುಗಳನ್ನು ಉಪ ಉತ್ಪನ್ನದ ರೀತಿ ಬೆಳೆಯುತ್ತಿದ್ದಾರೆ. 5 ಗುಂಟೆಯಿಂದ 20 ಗುಂಟೆ, ಒಂದು ಎಕರೆ ವಿಸ್ತೀರ್ಣದಲ್ಲಿ ಹೂವು ಬೆಳೆಯುವವರು ಇದ್ದಾರೆ.

ADVERTISEMENT

ಪ್ರಸ್ತುತ ಜಿಲ್ಲೆಯಾದ್ಯಂತ 3ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಬಗೆಬಗೆಯ ಹೂವನ್ನು ಬೆಳೆಯಲಾಗುತ್ತಿದೆ. 1,750 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಚೆಂಡು ಹೂವಿನ ಕೃಷಿ ನಡೆದಿದ್ದು, ನಂತರದಲ್ಲಿ ಸೇವಂತಿಗೆ, ಸುಗಂಧರಾಜ, ಗುಲಾಬಿ, ಕನಕಾಂಬರ ಹಾಗೂ ಕಾಕಡ ಸ್ಥಾನ ಪಡೆದುಕೊಂಡಿವೆ. ಮಲ್ಲಿಗೆಗೆ ಮೈಸೂರು ಹೆಸರಾಗಿದ್ದು, ಜಿಯೊ ಟ್ಯಾಗ್‌ ಕೂಡ ಪಡೆದಿದೆ.

ಈಗ ಎಷ್ಟಿದೆ ದರ?
ಈಚಿನ ವರ್ಷಗಳಲ್ಲಿ ಚೆಂಡು ಹೂವು ಪ್ರತಿ ಕೆ.ಜಿ.ಗೆ ಸಾಮಾನ್ಯ ದಿನಗಳಲ್ಲಿ ₹25–30ರಂತೆ ಮಾರಾಟವಾದರೆ, ಹಬ್ಬದ ದಿನಗಳಲ್ಲಿ ₹80–100ರವರೆಗೂ ಮಾರಾಟವಾದ ದಾಖಲೆ ಇದೆ. ಆದರೆ ಈ ದೀಪಾವಳಿಯ ಸಂದರ್ಭ ಕೆ.ಜಿ.ಗೆ ₹20–30ರಂತೆ ವರ್ತಕರು ಖರೀದಿಸಿದ್ದಾರೆ. ಹಬ್ಬದ ದಿನಗಳಂದು ಕೆ.ಜಿ.ಗೆ ₹200–300ವರೆಗೂ ವ್ಯಾಪಾರವಾಗುತ್ತಿದ್ದ ಸೇವಂತಿಗೆ 2–3 ದಿನದ ಹಿಂದಷ್ಟೇ ಕೆ.ಜಿ.ಗೆ ₹50–60ರಂತೆ ಸಗಟು ದರದಲ್ಲಿ ಖರೀದಿಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ₹100ರಂತೆ ಮಾರಾಟ ನಡೆದಿದೆ. ಮಾರು ಲೆಕ್ಕದಲ್ಲಿಯೂ ಹೂವಿನ ಬೆಲೆ ₹30–40 ದಾಟಿಲ್ಲ.

ಸುಗಂಧರಾಜ ಹೂವನ್ನು ಈ ಬಾರಿ ಕೇಳುವವರು ಇಲ್ಲ. ಕೆ.ಜಿ.ಗೆ ₹80–100 ಸಿಕ್ಕರೆ ಹೆಚ್ಚು ಎನ್ನುವಂತೆ ಆಗಿದೆ. ಕಾಕಡ ಹಾಗೂ ಮಲ್ಲಿಗೆ ಸಹ ಬೇಡಿಕೆ ಹೊರತಾಗಿಯೂ ಬೆಲೆ ಕುಸಿತ ಕಂಡಿವೆ. ಕನಕಾಂಬರ ಮಾತ್ರ ಪ್ರತಿ ಹಬ್ಬಕ್ಕೂ ಉತ್ತಮ ಬೆಲೆ ಹೊಂದಿದ್ದು, ಕೆ.ಜಿ.ಗೆ ₹1 ಸಾವಿರಕ್ಕೂ ಹೆಚ್ಚಿನ ದರದಲ್ಲಿ ಮಾರಾಟ ನಡೆದಿದೆ.

‘ ಬೆಳಿಗ್ಗೆ 7ಕ್ಕೆಲ್ಲ ಹೂವಿನ ಕೊಯ್ಲು ಆರಂಭಿಸಿ 11ರ ಒಳಗೆ ಮುಗಿಸಿ ಅಂದಿನ ಹೂವನ್ನು ಅಂದೇ ಮಾರುಕಟ್ಟೆಗೆ ತಲುಪಿಸುತ್ತೇವೆ. ಮಹಿಳಾ ಕಾರ್ಮಿಕರು ಹೆಚ್ಚಾಗಿ ಈ ಕಾರ್ಯಕ್ಕೆ ಬರುತ್ತಾರೆ. ಅವರಿಗೆ ಮುಂಜಾನೆ ಅವಧಿಯ ಕೂಲಿ ₹150–200ರವರೆಗೂ ಇದೆ. ಕ್ವಿಂಟಲ್‌ನಷ್ಟು ಚೆಂಡು ಹೂವು ಕೊಯ್ಲಿಗೆ 8–10 ಕಾರ್ಮಿಕರು ಬೇಕು. ಕನಕಾಂಬರ ಹೂವು ಕೊಯ್ಲಿಗೆ ಹೆಚ್ಚಿನ ಕಾರ್ಮಿಕರನ್ನು ಬಳಸಲಾಗುತ್ತದೆ. ಆದರೆ ಉತ್ಪಾದನಾ ವೆಚ್ಚ, ಕೊಯ್ಲಿನ ಖರ್ಚಿಗೆ ಆಗವಷ್ಟು ದರವೂ ಹೂವಿಗೆ ಸಿಗುತ್ತಿಲ್ಲ. ಹೀಗಾಗಿ ಪರ್ಯಾಯ ಬೆಳೆಯ ನಿರೀಕ್ಷೆಯಲ್ಲಿ ಇದ್ದೇವೆ’ ಎಂದು ಮೈಸೂರು ತಾಲ್ಲೂಕಿನ ದಡದ ಕಲ್ಲಹಳ್ಳಿ, ಹುಣಸೂರು ತಾಲ್ಲೂಕಿನ ಕೊಮ್ಮೇಗೌಡನ ಕೊಪ್ಪಲು ಭಾಗದ ರೈತರು ಹೇಳುತ್ತಾರೆ.

ಕೆಲವು ದಿನದಿಂದ ಸುರಿದ ಮಳೆಗೆ ಹೂವು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಅಲ್ಲಲ್ಲಿ ಹಾನಿಯಾಗಿದೆ. ಈ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗುವುದು.
– ಮಂಜುನಾಥ ಅಂಗಡಿ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ಮಳೆಯಿಂದ ಹೆಚ್ಚಿನ ಹಾನಿ

ಈ ಬಾರಿ ಮುಂಗಾರಿನಲ್ಲಿ ಕೆಲವೊಮ್ಮೆ ತೀವ್ರ ಮಳೆ ಕೊರತೆ ಆಗಿದ್ದರೆ ಇನ್ನೂ ಕೆಲವೊಮ್ಮೆ ಒಂದೇ ದಿನದ ಅವಧಿಯಲ್ಲಿ ಅಲ್ಲಲ್ಲಿ ಜೋರು ಮಳೆಯಾಗಿದೆ. ಹೊಲಗಳಲ್ಲಿ ನೀರು ನಿಂತು ಹೂವಿನ ಬೆಳೆಗಳಿಗೆ ಹೆಚ್ಚು ಹಾನಿಯಾಗಿದೆ. ಈಗ ಸುರಿಯುತ್ತಿರುವ ಮಳೆಯೂ ಪುಷ್ಪ ಕೃಷಿಗೆ ತೊಂದರೆ ಉಂಟುಮಾಡಿದೆ.

‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೂವಿನ ಕೃಷಿಗೆ ತೀವ್ರ ತೊಂದರೆ ಆಗಿದ್ದರೂ ಮೈಸೂರು ಭಾಗದಲ್ಲಿ ಅಷ್ಟು ತೊಂದರೆ ಆಗಿಲ್ಲ. ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ ಅಲ್ಲಲ್ಲಿ ಹಾನಿಯಾಗಿದೆ. ಹೂವಿನ ಕೃಷಿಯೂ ಸೇರಿದಂತೆ ಒಟ್ಟಾರೆ ತೋಟಗಾರಿಕೆ ಬೆಳೆಗಳಿಗೆ ಆಗಿರುವ ಹಾನಿಯ ಜಂಟಿ ಸಮೀಕ್ಷೆ ನಡೆಸುತ್ತಿದ್ದೇವೆ. ಸದ್ಯದಲ್ಲೇ ಜಿಲ್ಲಾಡಳಿತಕ್ಕೆ ವರದಿ ನೀಡುತ್ತೇವೆ’ ಎನ್ನುತ್ತಾರೆ ತೋಟಗಾರಿಕೆ ಉಪನಿರ್ದೇಶಕ ಮಂಜುನಾಥ ಅಂಗಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.