ಮೈಸೂರು: ದೇಶದ ಸೈನಿಕರ ಶಕ್ತಿ, ಸ್ಥೈರ್ಯವನ್ನು ಜಾಗತಿಕವಾಗಿ ಬಿಂಬಿಸಿದ ‘ಆಪರೇಷನ್ ಸಿಂಧೂರ’ ಪರಿಕಲ್ಪನೆ ಇಲ್ಲಿ ಹೂವುಗಳಲ್ಲಿ ಅರಳಿದೆ.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ, ಹಾರ್ಡಿಂಗ್ ವೃತ್ತದ ಕುಪ್ಪಣ್ಣ (ಕರ್ಜನ್) ಉದ್ಯಾನದಲ್ಲಿ ಆಯೋಜಿಸಿರುವ ಫಲ–ಪುಷ್ಪ ಪ್ರದರ್ಶನದಲ್ಲಿ ‘ಆಪರೇಷನ್ ಸಿಂಧೂರ’ ‘ಹೂಕೃತಿ’ ಗಮನಸೆಳೆಯುತ್ತಿದೆ.
ಶತ್ರುರಾಷ್ಟ್ರದ ವಿರುದ್ಧ ದಿಟ್ಟತನದಿಂದ ಹೋರಾಡಿ ದೇಶಕ್ಕೆ ಕೀರ್ತಿ ತಂದವರಿಗೆ ಗೌರವ ಸಲ್ಲಿಸುವ ಭಾಗವಾಗಿ ಈ ಪ್ರಯತ್ನ ಮಾಡಲಾಗಿದೆ. ಪ್ರಾತಿನಿಧಿಕವಾಗಿ ಕರ್ನಲ್ ಸೋಫಿಯಾ ಹಾಗೂ ವ್ಯೋಮಿಕಾ ಸಿಂಗ್ ಅವರಿಗೆ ಕೃತಜ್ಞತೆ ಹೇಳುವುದಕ್ಕಾಗಿ ಪುಷ್ಪಗಳಿಂದ ಅವರ ಪ್ರತಿಕೃತಿಗಳನ್ನು ಸಿಂಗರಿಸಲಾಗಿದೆ. ಆರ್ಮಿ ಟ್ರಕ್, ಏರ್‌ಜೆಟ್ ಹಾಗೂ ಯುದ್ಧ ನೌಕೆ ನಿರ್ಮಿಸಲಾಗಿದೆ. ಇದಕ್ಕಾಗಿ ಗುಲಾಬಿ, ಸೇವಂತಿಗೆ ಮೊದಲಾದ ಹೂವುಗಳನ್ನು ಬಳಸಿಕೊಳ್ಳಲಾಗಿದೆ.
ದಸರಾ ಉದ್ಘಾಟನೆಯ ದಿನವಾದ ಸೋಮವಾರವೇ ಫಲ–ಪುಷ್ಪಗಳ ವಿಶಿಷ್ಟ ಲೋಕವೂ ತೆರೆದುಕೊಂಡಿದೆ.
ಬಾಪು ಮಂಟಪ: ಈ ಬಾರಿಯ ವಿಜಯದಶಮಿ ಮೆರವಣಿಗೆಯು ಗಾಂಧಿ ಜಯಂತಿ ದಿನವಾದ ಅ.2ರಂದು ನಡೆಯಲಿದೆ. ಈ ಕಾರಣದಿಂದ ರಾಷ್ಟ್ರಪಿತನಿಗೆ ನಮಿಸುವ ಪರಿಕಲ್ಪನೆಯ ಹೂವುಗಳ ಕಲಾಕೃತಿಯ ಘಮ ಹರಡುತ್ತಿದೆ. ಕನ್ಯಾಕುಮಾರಿಯಲ್ಲಿರುವ ಗಾಂಧೀಜಿ ಸ್ಮಾರಕ ಮ್ಯೂಸಿಯಂ (ಮಹಾತ್ಮ ಗಾಂಧಿ ಮಂಟಪ)ವನ್ನು ಮೂರು ಲಕ್ಷ ಗುಲಾಬಿ ಹೂವುಗಳಿಂದ ‘ಗಾಜಿನ ಮನೆ’ಯಲ್ಲಿ ನಿರ್ಮಿಸಲಾಗಿದೆ. ಇದು ಈ ವರ್ಷದ ಮುಖ್ಯ ಪರಿಕಲ್ಪನೆಯಾಗಿದ್ದು, ಬಾಪುಗೆ ಗೌರವ ಸಲ್ಲಿಸಲಾಗುತ್ತಿದೆ.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಪಂಚ ಗ್ಯಾರಂಟಿ’ ಯೋಜನೆಗಳನ್ನು ಬಿಂಬಿಸುವುದಕ್ಕಾಗಿಯೂ ಪುಷ್ಪಗಳನ್ನು ಬಳಸಿಕೊಳ್ಳಲಾಗಿದೆ. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಮಾದರಿಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ನಡೆದಿದೆ. ಗಾಜಿನ ಮನೆಯ ಮುಂಭಾಗದಲ್ಲಿ ನಿರ್ಮಿಸಿರುವ ‘ಹಸಿರು ಚಪ್ಪರ’ದ ತಂಡಿ ಸಡಕ್ ಗಮನಸೆಳೆಯುತ್ತಿದೆ.
ಹೂಕುಂಡಗಳನ್ನು ಜೋಡಿಸಿ: ತೋಟಗಾರಿಕೆ ಇಲಾಖೆಯಿಂದ 60ಸಾವಿರ ಹೂವಿನ ಸಸಿಗಳನ್ನು ಆಕರ್ಷಕವಾಗಿ ಜೋಡಿಸಿ ಇಡೀ ಉದ್ಯಾನವನ್ನು ಅಲಂಕರಿಸಲಾಗಿದೆ. ನೂರಾರು ಮಂದಿ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ. ಫೋಟೊ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯವಸ್ಥಿತವಾಗಿ ಪ್ರದರ್ಶನವನ್ನು ಸಜ್ಜುಗೊಳಿಸಲಾಗಿದೆ. ಕಾರಂಜಿಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಆಹಾರ ಪದಾರ್ಥಗಳ ಮಳಿಗೆಗಳ ವಿಭಾಗವನ್ನು ಪ್ರತ್ಯೇಕವಾಗಿ ಹಾಕಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಸಸ್ಯ ಸಂತೆಯನ್ನೂ ಆಯೋಜಿಸಲಾಗಿದ್ದು, ಸಸಿಗಳು ಮಾರಾಟಕ್ಕೂ ಲಭ್ಯ ಇವೆ.
ಮುಖ್ಯಮಂತ್ರಿ ಬರುವವರೆಗೂ ಪ್ರವೇಶವಿರಲಿಲ್ಲ!
ಪ್ರದರ್ಶನವನ್ನು ವೀಕ್ಷಿಸಲೆಂದು ಬೆಳಿಗ್ಗೆಯೇ ಬಂದಿದ್ದ ಪ್ರವಾಸಿಗರು ನಿರಾಸೆ ಅನುಭವಿಸಬೇಕಾಯಿತು. ಕುಪ್ಪಣ್ಣ ಉದ್ಯಾನದ ಸುತ್ತಲೂ ಭದ್ರತೆಯ ಕೋಟೆ ಕಟ್ಟಿದ್ದ ಪೊಲೀಸರು ಸಾರ್ವಜನಿಕರು ಪ್ರವೇಶಿಸಲು ಅವಕಾಶ ನೀಡಲಿಲ್ಲ. ಮಧ್ಯಾಹ್ನದ ನಂತರವಷ್ಟೆ ಬರುವಂತೆ ತಿಳಿಸುತ್ತಿದ್ದರು. ಮಧ್ಯಾಹ್ನ 1ರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧ್ಯುಕ್ತವಾಗಿ ಉದ್ಘಾಟಿಸಿದ ನಂತರವಷ್ಟೆ ಸಂದರ್ಶಕರಿಗೆ ಅವಕಾಶ ನೀಡಲಾಯಿತು. ಪ್ರದರ್ಶನವನ್ನು ವೀಕ್ಷಿಸಿದ ಮುಖ್ಯಮಂತ್ರಿ ಗಾಂಧಿ ಮಂಟಪದಲ್ಲಿ ಗಾಂಧೀಜಿ ಪುತ್ಥಳಿಗೆ ನಮನವನ್ನೂ ಸಲ್ಲಿಸಿದರು. ಪುಷ್ಪಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಕೆ.ವೆಂಕಟೇಶ್ ಶಾಸಕರಾದ ಕೆ.ಹರೀಶ್‌ಗೌಡ ಅನಿಲ್ ಚಿಕ್ಕಮಾದು ಡಿ.ರವಿಶಂಕರ್ ಮೊದಲಾದವರು ಸಾಥ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.