ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಿರಿಯಾಪಟ್ಟಣದಲ್ಲಿ ಶನಿವಾರ ಗೋಪೂಜೆ ಮಾಡಿ ಚಾಲನೆ ನೀಡಿದರು. ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಡಿಸಿಎಂ ಡಿ.ಕೆ. ಶಿವಕುಮಾರ್ ಪಾಲ್ಗೊಂಡಿದ್ದರು
– ಪ್ರಜಾವಾಣಿ ಚಿತ್ರ
ಪಿರಿಯಾಪಟ್ಟಣ (ಮೈಸೂರು ಜಿಲ್ಲೆ): ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರಾಜ್ಯದಾದ್ಯಂತ ರಾಸುಗಳಿಗೆ ಕಾಲುಬಾಯಿ ಜ್ವರದ ವಿರುದ್ಧ ಲಸಿಕೆ ನೀಡುವ 7ನೇ ಸುತ್ತಿನ ಅಭಿಯಾನಕ್ಕೆ ಇಲ್ಲಿ ಶನಿವಾರ ಅಧಿಕೃತ ಚಾಲನೆ ನೀಡಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಗೋಪೂಜೆ ಮಾಡುವ ಮೂಲಕ ಉದ್ಘಾಟಿಸಿದರು. ಚರ್ಮಗಂಟು ರೋಗದ ಲಸಿಕೆಗೂ ಚಾಲನೆ ನೀಡಲಾಯಿತು.
‘ಜೂನ್ 9ರವರೆಗೆ ಎಲ್ಲ ಜಿಲ್ಲೆಗಳಲ್ಲೂ ಅಭಿಯಾನ ನಡೆಯಲಿದ್ದು, 98 ಲಕ್ಷ ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ನೀಡಲಾಗುವುದು. ಕರುಗಳಿಗೂ ಲಸಿಕೆಯನ್ನು ಉಚಿತವಾಗಿ ಹಾಕಲಾಗುವುದು. ಶೇ 100ರಷ್ಟು ಗುರಿ ತಲುಪಲು ಕ್ರಮ ವಹಿಸಲಾಗಿದೆ. ಕಾಲುಬಾಯಿ ಜ್ವರದ ವಿರುದ್ಧ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಕರ್ನಾಟಕವು ಇತರ ರಾಜ್ಯಗಳಿಗಿಂತ ಮುಂದಿದೆ. ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ(ಎನ್‌ಎಡಿಸಿಪಿ) ಭಾಗವಿದು’ ಎಂದು ವೆಂಕಟೇಶ್ ತಿಳಿಸಿದರು.
‘ರಾಜ್ಯವನ್ನು ಕಾಲುಬಾಯಿ ರೋಗ ಮುಕ್ತ ವಲಯವನ್ನಾಗಿಸುವ ಸಂಕಲ್ಪ ಮಾಡಲಾಗಿದೆ’ ಎಂದರು.
ಅಲೆಮಾರಿ ಕುರಿಗಾಹಿಗಳಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ‘ಗುರುತಿನ ಚೀಟಿ’ ವಿತರಿಸುವ ಕಾರ್ಯಕ್ರಮಕ್ಕೂ ಸಿದ್ದರಾಮಯ್ಯ ಚಾಲನೆ ನೀಡಿದರು. ವಿವಿಧ ಜಿಲ್ಲೆಗಳ ಕುರಿಗಾಹಿಗಳಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಾಪರ್ ಆಗಿದೆ, ದಿವಾಳಿಯಾಗಿದೆ, ಖಜಾನೆ ಖಾಲಿಯಾಗಿದೆ ಎಂದೆಲ್ಲಾ ಬಿಜೆಪಿ–ಜೆಡಿಎಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಖಜಾನೆ ಖಾಲಿಯಾಗಿದ್ದರೆ, ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗುತ್ತಿತ್ತಾ? ಬಿಜೆಪಿ- ಜೆಡಿಎಸ್‌ನವರಿಗೆ ನಿಜವಾಗಿಯೂ ಮಾನ– ಮರ್ಯಾದೆ ಇದ್ದರೆ ಸುಳ್ಳು ಹೇಳುವುದು ಬಿಡಬೇಕು’ ಎಂದು ಹೇಳಿದರು.
‘ಬಿಜೆಪಿಯವರೆಂದರೆ ಲೂಟಿ, ಸುಳ್ಳು’ ಎಂದು ಟೀಕಿಸಿದರು.
‘ಬಿಜೆಪಿ–ಜೆಡಿಎಸ್‌ನವರ ಟೀಕೆಗಳು ಸತ್ತು ಹೋಗಿವೆ. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳು ಜನಮಾನಸದಲ್ಲಿ ಉಳಿದಿವೆ’ ಎಂದು ಡಿಸಿಎಂ ಶಿವಕುಮಾರ್ ಹೇಳಿದರು.
ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಬಿ.ಎಸ್. ಸುರೇಶ್ ಹಾಗೂ ಎಂ.ಸಿ. ಸುಧಾಕರ್, ವಿಧಾನಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.