ADVERTISEMENT

ನ್ಯಾಯಯುತ ವೇತನ ದೊರಕಿಸಿಕೊಡಲು ಆಗ್ರಹ: ಅರಣ್ಯ ಇಲಾಖೆಯ ದಿನಗೂಲಿ ನೌಕರರ ಪ್ರತಿಭಟನೆ

ಅರಣ್ಯ ಇಲಾಖೆಯ ದಿನಗೂಲಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 3:08 IST
Last Updated 28 ಜನವರಿ 2021, 3:08 IST
ನ್ಯಾಯಯುತವಾದ ವೇತನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಅರಣ್ಯ ಇಲಾಖೆ ದಿನಗೂಲಿ, ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಅರಣ್ಯ ಇಲಾಖೆಯ ದಿನಗೂಲಿ ನೌಕರರು ಮೈಸೂರಿನ ಅರಣ್ಯ ಇಲಾಖೆಯ ಕಚೇರಿ ಎದುರು ಬುಧವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ನ್ಯಾಯಯುತವಾದ ವೇತನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಅರಣ್ಯ ಇಲಾಖೆ ದಿನಗೂಲಿ, ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಅರಣ್ಯ ಇಲಾಖೆಯ ದಿನಗೂಲಿ ನೌಕರರು ಮೈಸೂರಿನ ಅರಣ್ಯ ಇಲಾಖೆಯ ಕಚೇರಿ ಎದುರು ಬುಧವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಮೈಸೂರು: ನ್ಯಾಯಯುತವಾದ ವೇತನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ, ಕ್ಷೇಮಾಭಿವೃದ್ಧಿ ನೌಕರರ ಸಂಘದ ನೇತೃತ್ವದಲ್ಲಿ ಅರಣ್ಯ ಇಲಾಖೆಯ ದಿನಗೂಲಿ ನೌಕರರು ಇಲ್ಲಿನ ಅರಣ್ಯ ಇಲಾಖೆಯ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿ ವರ್ಷ ಹೆಚ್ಚಳವಾಗುವ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಕನಿಷ್ಠ ವೇತನ ಕಾಯ್ದೆಯಡಿ ವೇತನ ನಿಗದಿಪಡಿಸಿ ಕಾರ್ಮಿಕ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇದರಂತೆ ರಾಜ್ಯದ ಬಹುತೇಕ ಇಲಾಖೆಗಳ ದಿನಗೂಲಿ ನೌಕರರಿಗೆ ವೇತನ ನೀಡಲಾಗುತ್ತಿದೆ. ಆದರೆ, ಅರಣ್ಯ ಇಲಾಖೆ ಈ ಸುತ್ತೋಲೆಯನ್ನು ಗಾಳಿಗೆ ತೂರಿದೆ ಎಂದು ಕಾರ್ಯಕರ್ತರು ಕಿಡಿಕಾರಿದರು.

ದಿನಗೂಲಿ ಪದ್ಧತಿಯಿಂದ ಹೊರಗುತ್ತಿಗೆ ಪದ್ಧತಿಗೆ ಬದಲಾವಣೆ ಮಾಡಿ ನೌಕರರ ಸೇವಾಭದ್ರತೆಗೆ ಧಕ್ಕೆ ಮಾಡಿರುವುದು ಸರಿಯಲ್ಲ. ಈ ಕೂಡಲೇ ಹೊರಗುತ್ತಿಗೆ ಪದ್ಧತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಾರ್ಮಿಕರಿಗೆ ಭವಿಷ್ಯನಿಧಿ, ಆರೋಗ್ಯ ವಿಮೆ ನೀಡುತ್ತಿಲ್ಲ. ದಿನಗೂಲಿ ಮತ್ತು ಪಿಸಿಪಿ ನೌಕರರ ಹೆಸರಿನಲ್ಲಿ ದಾಖಲೆಗಳನ್ನೇ ನಿರ್ವಹಿಸದೇ ಗುತ್ತಿಗೆ ಹೆಸರಿನಲ್ಲಿ ವಂಚನೆ ಎಸಗಲಾಗುತ್ತಿದೆ ಎಂದು ಅವರು ದೂರಿದರು.

ಅರಣ್ಯ ಇಲಾಖೆಯ ವಿವಿಧ ವಲಯಗಳಲ್ಲಿ ದಿನಗೂಲಿ ನೌಕರರಾಗಿ ಕಳೆದ 20 ವರ್ಷಗಳಿಂದ ನೆಡುತೋಪು, ರಕ್ಷಣಾ ಶಿಬಿರ, ಸಸ್ಯ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ ಇಲಾಖೆಯ ದರಪಟ್ಟಿಯಂತೆ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ದಿನಗೂಲಿ ನೌಕರರು ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದಕ್ಕೆ ಇಲಾಖೆಯಲ್ಲಿರುವ ಕೆಳಹಂತದ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲನೆ ಮಾಡದಿರುವುದೇ ಕಾರಣ ಎಂದು ಅವರು ಆರೋಪಿಸಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎ.ಎಂ.ನಾಗರಾಜು, ಕಾರ್ಯದರ್ಶಿ ನಂಜುಂಡಸ್ವಾಮಿ, ಉಪಾಧ್ಯಕ್ಷ ರುದ್ರಪ್ಪ, ಮಂಡ್ಯ ಜಿಲ್ಲೆಯ ಉಪಾಧ್ಯಕ್ಷ ಸತೀಶ್‌, ಕೆ.ಆರ್‌.ಪೇಟೆಯ ಭಾಗ್ಯಮ್ಮ ಸೇರಿದಂತೆ 60 ಮಂದಿ ನೌಕರರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.