ADVERTISEMENT

ಮೈಸೂರು: ದಿನಗೂಲಿ ನೌಕರರ ಆಕ್ರೋಶ

ಅರಣ್ಯ ಇಲಾಖೆಯ ಮೈಸೂರು, ಮಂಡ್ಯ, ಚಾಮರಾಜನಗರ ವಲಯದಿಂದ ನೂರಾರು ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 4:15 IST
Last Updated 14 ಡಿಸೆಂಬರ್ 2021, 4:15 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ, ಕ್ಷೇಮಾಭಿವೃದ್ಧಿ ನೌಕರರ ಸಂಘದ ಕಾರ್ಯಕರ್ತರು ಮೈಸೂರಿನ ಅರಣ್ಯ ಭವನದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ, ಕ್ಷೇಮಾಭಿವೃದ್ಧಿ ನೌಕರರ ಸಂಘದ ಕಾರ್ಯಕರ್ತರು ಮೈಸೂರಿನ ಅರಣ್ಯ ಭವನದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು   

ಮೈಸೂರು: ‘ಅರಣ್ಯದ ಉಳಿವಿಗೆ ಅವಿರತ ಶ್ರಮಿಸಿದರೂ ನಮ್ಮ ಸ್ಥಿತಿ ಅರಣ್ಯರೋದನವಾಗಿದೆ’ ಎಂದು ಅರಣ್ಯ ಇಲಾಖೆಯ ದಿನಗೂಲಿ ನೌಕರರು ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಬುದ್ಧವಿಹಾರದಿಂದ ಅರಣ್ಯಭವನದವರೆಗೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ, ಕ್ಷೇಮಾಭಿವೃದ್ಧಿ ನೌಕರರ ಸಂಘದ ನೇತೃತ್ವದಲ್ಲಿ ಸೋಮವಾರ ಜಾಥಾ ನಡೆಸಿದ ಅವರು, ಬಳಿಕ ಅರಣ್ಯ ಇಲಾಖೆಯ ಮುಂಭಾಗ ಪ್ರತಿಭಟನೆ ನಡೆಸಿದರು.

‘ಸರ್ಕಾರ ಒಂದು ದಿನಕ್ಕೆ ₹ 511 ದಿನಗೂಲಿಯನ್ನು ನಿಗದಿ ಮಾಡಿದೆ. ಆದರೆ, ಕೆಲವು ವಲಯಗಳಲ್ಲಿ ₹ 300, ಮತ್ತೆ ಕೆಲವೆಡೆ ₹ 200 ಮಾತ್ರ ಕೊಡುತ್ತಿದ್ದಾರೆ. ಇನ್ನೆಷ್ಟು ದಿನ ಈ ಅನ್ಯಾಯ’ ಎಂದು ಪ್ರಶ್ನಿಸಿದರು.

ADVERTISEMENT

ದಿನಗೂಲಿ ನೌಕರರನ್ನು 2017ರಿಂದ ಗುತ್ತಿಗೆ ಪದ್ಧತಿಗೆ ಅಳವಡಿಸಲಾಗಿದೆ. ಬೇನಾಮಿ ಗುತ್ತಿಗೆದಾರರ ಮೂಲಕ ಸಂಬಳ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಸುಮಾರು 15ರಿಂದ 20 ವರ್ಷಗಳ ಕಾಲ ಕೆಲಸ ಮಾಡಿದ ದಿನಗೂಲಿ ನೌಕರರ ಸೇವಾ ದಾಖಲಾತಿಗಳು ಹಲವು ಕಚೇರಿಗಳಲ್ಲಿ ಲಭ್ಯವಿಲ್ಲ. ದಿನಗೂಲಿ ನೌಕರರು ತಮ್ಮ ಜೀವಪಣಕ್ಕಿಟ್ಟು ಕೆಲಸ ಮಾಡುತ್ತಾರೆ. ಅವರ ಸೇವಾ ದಾಖಲಾತಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಬಂಡೀಪುರ ಹಾಗೂ ನಾಗರಹೊಳೆ ಹುಲಿ ರಕ್ಷಿತಾರಣ್ಯದ ರಕ್ಷಣಾ ಶಿಬಿರಗಳಲ್ಲಿ ದಿನದ 24 ಗಂಟೆಗಳ ಕಾಲ ದಿನಗೂಲಿ ನೌಕರರು ಕಾರ್ಯನಿರ್ವಹಿಸುತ್ತಾರೆ. ಇವರಿಗೆ ಕಾರ್ಮಿಕ ಕಾಯ್ದೆ ಪ್ರಕಾರ 8 ಗಂಟೆ ಕೆಲಸ ಮಾತ್ರ ನೀಡಬೇಕು. ಪಾಳಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

‘ಬೇಡಿಕೆಗಳು ಈಡೇರದೇ ಹೋದರೆ ಮುಂದಿನ ವರ್ಷ ಫೆಬ್ರುವರಿಯಲ್ಲಿ ರಾಜ್ಯದ ಎಲ್ಲ 3 ಸಾವಿರ ದಿನಗೂಲಿ ನೌಕರರು ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವರು’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎ.ಎಂ.ನಾಗರಾಜು ಎಚ್ಚರಿಕೆ ನೀಡಿದರು.

ಅಧಿಕಾರಿಗಳೊಂದಿಗೆ ಸಭೆ
ಪ್ರತಿಭಟನೆ ಮಧ್ಯಾಹ್ನವಾದರೂ ಮುಂದುವರಿದಿರುವುದನ್ನು ಗಮನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ದಿನಗೂಲಿ ನೌಕರರೊಂದಿಗೆ ಸಭೆ ನಡೆಸಿದರು. ‘ವಲಯವಾರು ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಕೆಲವೇ ದಿನಗಳಲ್ಲಿ ಪರಿಹರಿಸಲಾಗುವುದು, ರಾಜ್ಯಮಟ್ಟದ ಬೇಡಿಕೆಗಳನ್ನು ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಂಜುಂಡಸ್ವಾಮಿ, ಮಂಡ್ಯ ವಿಭಾಗದ ತುಳಸಿಕುಮಾರ್, ಬಂಡೀಪುರ ವನ್ಯಜೀವಿ ವಲಯದ ಅಣ್ಣೇಸ್ವಾಮಿ, ಪರಮೇಶ್, ಪಿರಿಯಾಪಟ್ಟಣ, ಹುಣಸೂರು ವಲಯದಿಂದ ರವಿ, ನಾಗರಹೊಳೆ ವನ್ಯಜೀವಿ ವಲಯದಿಂದ ನಟೇಶ್ ಸೇರಿದಂತೆ ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ವಿಭಾಗಗಳಿಂದ 250ಕ್ಕೂ ಅಧಿಕ ಮಂದಿ ದಿನಗೂಲಿ ನೌಕರರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.