ಬಂಧನ
(ಪ್ರಾತಿನಿಧಿಕ ಚಿತ್ರ)
ಮೈಸೂರು: ವಂಚನೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ, ವಕೀಲ ಬೆಂಕಿ ಚಿದಾನಂದ್ ಅವರನ್ನು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ತುಮಕೂರಿನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
‘ಬೆಂಕಿ ಚಿದಾನಂದ ಲಷ್ಕರ್ ಮೊಹಲ್ಲಾದ ಕೆ.ರಾಘು ಅವರಿಂದ 2012ರಲ್ಲಿ ₹20 ಸಾವಿರವನ್ನು ಸಾಲವಾಗಿ ಪಡೆದಿದ್ದರು. ಆ ಸಾಲದ ಮರು ಪಾವತಿಗಾಗಿ ದಿವಾನ್ಸ್ ರಸ್ತೆಯ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನ ₹20 ಸಾವಿರ ಮೊತ್ತದ ಚೆಕ್‌ಗೆ ಅದರ ಅಂದಿನ ವ್ಯವಸ್ಥಾಪಕರಾಗಿದ್ದ ಚಿದಾನಂದ್ ಸಹಿ ಮಾಡಿ ನೀಡಿದ್ದರು. ರಾಘು ಬ್ಯಾಂಕಿಗೆ ಹಾಜರುಪಡಿಸಿದಾಗ ಚೆಕ್ ಬೌನ್ಸ್ ಆಗಿತ್ತು. ಬೆಂಕಿ ಚಿದಾನಂದ ಅವರ ಮನೆ ಬಳಿ ಹೋಗಿ ವಿಚಾರ ತಿಳಿಸಿ, ಹಣ ವಾಪಸ್ ನೀಡುವಂತೆ ಕೇಳಿದ್ದರು. ಆಗ ಚಿದಾನಂದ, ಈ ವಿಚಾರವಾಗಿ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ರಾಘು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಪೊಲೀಸರು ಬೆಂಕಿ ಚಿದಾನಂದ್, ಅವರ ಪತ್ನಿ ಗಿರಿಜಾಂಬಾ ಹಾಗೂ ಪುತ್ರ ಸ್ನೇಹಿತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಚಿದಾನಂದ್ ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಚಿದಾನಂದ್ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು, ಚಿದಾನಂದ್ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿತ್ತು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.