ADVERTISEMENT

ಮೈಸೂರು | ‘ಅಪಘಾತ’ ಸೃಷ್ಟಿ; ಹಣ ವಸೂಲಿಗಿಳಿದ ವಂಚಕರು!

ಕಾರು ಚಲಾಯಿಸುವ ಹಿರಿಯ ನಾಗರಿಕರೇ ಗುರಿ: ಕುವೆಂಪುನಗರ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣ

ಮೋಹನ್ ಕುಮಾರ್‌
Published 8 ಸೆಪ್ಟೆಂಬರ್ 2023, 5:15 IST
Last Updated 8 ಸೆಪ್ಟೆಂಬರ್ 2023, 5:15 IST
ರಮೇಶ್ ಬಾನೋತ್
ರಮೇಶ್ ಬಾನೋತ್   

ಮೈಸೂರು: ಅಪಘಾತ ಮಾಡಿದ್ದೀರೆಂದು ಕಾರು ಚಲಾಯಿಸುವ ಹಿರಿಯ ನಾಗರಿಕರಲ್ಲಿ ಗಾಬರಿ ಹುಟ್ಟಿಸುವ ವಂಚಕರು, ಪೊಲೀಸ್‌ ಠಾಣೆಗೆ ಕರೆದೊಯ್ಯುವುದಾಗಿ ಬೆದರಿಸಿ, ಸಾವಿರಾರು ರೂಪಾಯಿ ವಸೂಲಿ ಮಾಡಿರುವ ಪ್ರಕರಣಗಳು ನಗರದಲ್ಲಿ ನಡೆಯುತ್ತಿದ್ದು, ಹತ್ತಾರು ಮಂದಿ ಹಣ ಕಳೆದುಕೊಂಡಿದ್ದಾರೆ.

ಕುವೆಂಪುನಗರ, ಟಿ.ಕೆ.ಬಡಾವಣೆ, ವಿಶ್ವಮಾನವ ಜೋಡಿರಸ್ತೆ ಸೇರಿದಂತೆ ಸರಸ್ವತಿಪುರಂ, ಕುವೆಂಪುನಗರ ಠಾಣೆ ವ್ಯಾಪ್ತಿಯಲ್ಲಿಯೇ ಹೆಚ್ಚು ಪ್ರಕರಣಗಳು ನಡೆದಿವೆ. ನಿವೃತ್ತ ಪೊಲೀಸ್‌ ಅಧಿಕಾರಿ ಬಳಿಯೇ ₹ 40 ಸಾವಿರ ಹಣವನ್ನು ಪಡೆದಿದ್ದಾರೆ.

‘ವಂಚನೆಯ ಜಾಲವನ್ನು ಭೇದಿಸಿ ತಪ್ಪಿತಸ್ಥರಿಗೆ ಕ್ರಮ ವಹಿಸಬೇಕು’ ಎಂದು ಅಭಿಜಿತ್‌ ಎಂಬುವರು ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಅದಕ್ಕೆ ಸಂತೋಷ್‌ ನಾಯ್ಕ್‌ ಸೇರಿದಂತೆ ಹಲವರು ವಂಚನೆಗೊಳಗಾದ ಘಟನೆ ಬಗೆಯನ್ನೂ ವಿವರಿಸಿದ್ದಾರೆ.

ADVERTISEMENT

ಪ್ರಕರಣ 1: ನಿವೃತ್ತ ‍ಪೊಲೀಸ್‌ ಅಧಿಕಾರಿ ದೇವಯ್ಯ ಅವರು ಕುವೆಂಪುನಗರದ ಶಾಂತಿಸಾಗರ ಕಾಂಪ್ಲೆಕ್ಸ್ ಬಳಿ ಸ್ಯಾಂಟ್ರೊ ಕಾರಿನಲ್ಲಿ ಹೋಗುತ್ತಿದ್ದಾಗ, ಕಾರಿನ ಮೇಲೆ ಮರದ ಕೊಂಬೆ ಬಿದ್ದಿರುವ ಸದ್ದಾಯಿತು. ಸ್ವಲ್ಪ ದೂರ ಕ್ರಮಿಸಿದ ನಂತರ ಬೈಕ್‌ನಲ್ಲಿ ಬಂದ ವಂಚಕ, ‘ಅಪಘಾತ ಮಾಡಿದ್ದೀರಿ. ಗಾಯಗೊಂಡವನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇನೆ. ಪೊಲೀಸ್‌ ಠಾಣೆಗೆ ಕೇಸ್‌ ಹಾಕಿದರೆ ಸಮಸ್ಯೆಯಾಗುತ್ತದೆ. ಹಣ ಕೊಡಿ’ ಎಂದು ಕೇಳುತ್ತಾನೆ. ‘ನಾನೇ ಪೊಲೀಸ್‌ ಅಧಿಕಾರಿ’ ಎಂದು ಹೇಳಿದರೂ, ‘ಸಮಸ್ಯೆ ಬಗೆಹರಿಯಲ್ಲ. ₹ 40 ಸಾವಿರ ಕೊಟ್ಟು ಹೋಗಿ’ ಎಂದು ಗದರಿದ.

ದೇವಯ್ಯ ಅವರು ಮಾಸ್ಕ್‌ ಹಾಕಿದ ವಂಚಕನ ಬೈಕ್‌ನಲ್ಲಿಯೇ ಮನೆಗೆ ಹೋಗಿ, ಎಟಿಎಂನಿಂದ ₹ 40 ಸಾವಿರ ತೆಗೆದುಕೊಟ್ಟಿದ್ದಾರೆ. ವಂಚಕ ಕಾರಿನ ಬಳಿ ಬಿಟ್ಟು ಪರಾರಿಯಾಗಿದ್ದಾನೆ. ಸಂಜೆ ವೇಳೆ ದೇವಯ್ಯ ಅವರು ಕುವೆಂಪುನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಕರಣ 2: ‘ಸೆ.3ರ ಭಾನುವಾರ ನನ್ನ ತಂದೆಯೂ ಶಾಂತಿಸಾಗರ ಕಾಂಪ್ಲೆಕ್ಸ್‌ ಬಳಿಯೇ ₹ 3,000 ಸಾವಿರ ಕಳೆದುಕೊಂಡಿದ್ದಾರೆ’ ಎಂದು ಅಭಿಜಿತ್ ಅವರು ಫೇಸ್‌ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಕಾರ್ಯಕ್ರಮವೊಂದನ್ನು ಮುಗಿಸಿ, ಕುವೆಂಪುನಗರದ ಪ್ರೀತಿ ಮೆಡಿಕಲ್ಸ್ ಬಳಿ ಒಬ್ಬಾತ ಕಿರುಚುತ್ತಾ ಬಂದು ಕಾರು ನಿಲ್ಲಿಸಿದ.  ಅಂಕಲ್.. ನೋಡ್ಕೊಂಡು ಓಡ್ಸೋದಲ್ವಾ.. ನೀವು ಸಿಗ್ನಲ್ ನಲ್ಲಿ ನನ್ನ ಗಾಡಿಗೆ ಹೊಡೆದಿದ್ದೀರಿ. ನನ್ನ ಹಿಂದೆ ಕೂತವನು ಅಲ್ಲೇ ಬಿದ್ದಿದ್ದಾನೆ. ಆಸ್ಪತ್ರೆಗೆ ಸೇರಿಸಬೇಕು. ₹ 40,000 ಬೇಕಾಗಬಗಹುದು. ನೋಡೋಕೆ ನನ್ನ ತಂದೆ ತರ ಇದೀರಿ. ಅಲ್ಲಿ 50 ಜನ ಸೇರವ್ರೆ. ಸುಮ್ನೆ ಅಲ್ಲಿ ಬರಬೇಡಿ.

ಅಪ್ಪನಿಗೆ ತಲೆ ಬ್ಲ್ಯಾಂಕ್! ಪೊಲೀಸ್ ಠಾಣೆಗೆ ಹೋಗೋಣ ಅಂದರು. ಆದಕ್ಕೆ ಆತ, ‘ಅಯ್ಯೋ ಸರ್, ಅಲ್ಲಿ ನಮ್ ಜನನೇ ಅಲ್ಲಿರೋದು. ಅಲ್ಲಿ ಬಂದ್ರೆ ₹ 40,000. ಇಲ್ಲೇ ಸೆಟಲ್ ಮಾಡಿದರೆ ₹5,000 ಎಂದ! ಕೊನೆಗೆ ₹ 3,000 ಕೊಟ್ಟು ಅವನನ್ನು ಸಾಗ ಹಾಕಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಕರಣ 3: 'ನನ್ನ ಸ್ನೇಹಿತರೊಬ್ಬರು ಟಿ.ಕೆ.ಬಡಾವಣೆ ಬಳಿ ₹ 15 ಸಾವಿರ ಕಳೆದು ಕೊಂಡರು. ಅದಾದ ಒಂದು ವಾರಕ್ಕೆ ನನ್ನ ಬಳಿಯೂ ಹೀಗೆ ಆಗಿತ್ತು’ ಎಂದು ಕೆಎಸ್‌ಒಯು ಪ್ರಸಾರಂಗದ ನಿರ್ದೇಶಕರಾಗಿರುವ ಸಂತೋಷ್‌ ನಾಯ್ಕ್‌ ಹೇಳಿದರು.

‘ವಿಶ್ವಮಾನವ ಜೋಡಿ ರಸ್ತೆಯಲ್ಲಿ ಅಡ್ಡಗಟ್ಟಿ, ಅಪಘಾತ ಮಾಡಿದ್ದೀರಾ ಎಂದು ಕಾರನ್ನು ಅಡ್ಡಗಟ್ಟಿದ್ದ, ಸರಿಯಾಗಿ ಬಯ್ದಾಗ ಜಾಗ ಖಾಲಿ ಮಾಡಿದ.  ಕಂಪನಿ ಉದ್ಯೋಗಿತರ ಬಟ್ಟೆ ಹಾಕಿದ್ದು, ಕಿವಿಯಲ್ಲಿ ಇಯರ್‌ಫೋನ್‌ ಹಾಕಿದ್ದ’ ಎಂದರು.

ಸಾಂದರ್ಭಿಕ ಚಿತ್ರ

‘ತನಿಖೆ ಕೈಗೊಂಡಿದ್ದೇವೆ’ ‘

ಕುವೆಂಪುನಗರ ಸರಸ್ವತಿಪುರಂ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಮಾಡಿದ್ದೀರೆಂದು ಭಯ ಹುಟ್ಟಿಸಿ ಹಣ ಪಡೆಯುತ್ತಿರುವ ಪ್ರಕರಣಗಳು ನಡೆದಿರುವ ಕುರಿತು ಮಾಹಿತಿ ಇದೆ. ಈಗಾಗಲೇ ಒಬ್ಬರು ದೂರು ನೀಡಿದ್ದಾರೆ. ತನಿಖೆ ಕೈಗೊಂಡಿದ್ದೇವೆ’ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರಕರಣದ ಬಗ್ಗೆ ಸಂತ್ರಸ್ತರು ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಅವರು ಠಾಣೆಗೆ ತೆರಳಿ ದೂರು ನೀಡಬೇಕು. ವಂಚಕರ ಬಗ್ಗೆ ಗಮನಕ್ಕೆ ತಂದರೆ ಕ್ರಮವಹಿಸಲು ಸಾಧ್ಯ. ನಾವೂ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಕ್ರಮವಹಿಸಿದ್ದೇವೆ’ ಎಂದರು. ‘ಯಾರಾದರೂ ವಂಚಕರು ಬೆಂಬತ್ತಿದರೆ ಭಯಗೊಳಗಾಗದೆ ಧೈರ್ಯದಿಂದ ಪ್ರತಿಕ್ರಿಯಿಸಬೇಕು. ಪೊಲೀಸ್‌ ಠಾಣೆಗೆ ಹೋಗೋಣ ಎನ್ನಬೇಕು. ಇಲಾಖೆಯು ಜನರ ರಕ್ಷಣೆಗೆ ಬದ್ಧವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.