ADVERTISEMENT

ಹಣ್ಣು ದುಬಾರಿ; ತರಕಾರಿ ದರ ಯಥಾಸ್ಥಿತಿ

ಸಮುದ್ರ ಮೀನು ಇನ್ನಷ್ಟು ತುಟ್ಟಿ; ಸೊಪ್ಪು ಅಗ್ಗ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 5:11 IST
Last Updated 24 ಜುಲೈ 2025, 5:11 IST

ಮೈಸೂರು: ಶ್ರಾವಣ ಮಾಸದ ಆರಂಭದಲ್ಲೇ ಹಣ್ಣುಗಳು ಗ್ರಾಹಕರಿಗೆ ದುಬಾರಿ ಆಗಿವೆ. ತರಕಾರಿ ಬೆಲೆ ಯಥಾಸ್ಥಿತಿಯಲ್ಲಿದ್ದು, ಸೊಪ್ಪು ಅಗ್ಗವಾಗಿಯೇ ಮುಂದುವರಿದಿದೆ.

ಏಲಕ್ಕಿ ಬಾಳೆ ಬೆಳೆಗಾರರ ಜೇಬು ತುಂಬಿಸುತ್ತಿದ್ದು, ಗ್ರಾಹಕರ ಜೇಬು ಖಾಲಿಯಾಗಿಸುತ್ತಿದೆ. ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆ ಕಾಯಿಗೆ ₹70–80ರವರೆಗೂ ಬೆಲೆ ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗಾತ್ರದ ಹಣ್ಣು ₹100ರ ಸರಾಸರಿಯಲ್ಲಿ ಮಾರಾಟವಾಗುತ್ತಿದೆ. ಬೆಲೆಯಲ್ಲಿ ‘ಏಲಕ್ಕಿ’ಯು ಈ ಭಾಗದ ವಿಶಿಷ್ಟ ಸ್ವಾದದ ನಂಜನಗೂಡು ರಸಬಾಳೆಯನ್ನೂ ಹಿಂದಿಕ್ಕಿದೆ. ಪಚ್ಚೆಬಾಳೆಯ ಧಾರಣೆ ಸ್ಥಿರವಾಗಿದೆ.

ಸೇಬು ಹಾಗೂ ದಾಳಿಂಬೆ ಗ್ರಾಹಕರಿಗೆ ದುಬಾರಿಯಾಗಿಯೇ ಮುಂದುವರಿದಿವೆ. ನೇರಳೆ ಕ್ರಮೇಣ ಮಾರುಕಟ್ಟೆಯಿಂದ ಖಾಲಿಯಾಗುತ್ತಿದೆ. ಕಿತ್ತಳೆ ಸಹ ದುಬಾರಿಯಾಗಿದೆ. ಆದರೆ, ಡ್ರ್ಯಾಗನ್‌ ಫ್ರೂಟ್‌, ಕಿವಿಯಂತಹ ವಿದೇಶಿ ಹಣ್ಣುಗಳು ಅಗ್ಗವಾಗಿವೆ. ಬೆಣ್ಣೆ ಹಣ್ಣು ಸಹ ಬೆಲೆ ಇಳಿಸಿಕೊಂಡಿದೆ.

ADVERTISEMENT

ತರಕಾರಿ ಧಾರಣೆಯಲ್ಲಿ ಸದ್ಯ ಹೆಚ್ಚು ವ್ಯತ್ಯಾಸ ಆಗಿಲ್ಲ. ದಪ್ಪಮೆಣಸಿನಕಾಯಿ ಹೊರತುಪಡಿಸಿ ಉಳಿದೆಲ್ಲವು ಕೈಗೆ ಎಟಕುವ ದರದಲ್ಲಿಯೇ ಇವೆ. ಶ್ರಾವಣ ಮಾಸದ ಆರಂಭದೊಡನೆ ಶುಭ ಸಮಾರಂಭಗಳೂ ಹೆಚ್ಚಲಿದ್ದು, ಬೀನ್ಸ್, ನುಗ್ಗೆಕಾಯಿ, ಈರುಳ್ಳಿ, ಶುಂಠಿ–ಬೆಳ್ಳುಳ್ಳಿ ಮೊದಲಾದವು ಅಗ್ಗವಾಗಿಯೇ ಮುಂದುವರಿದಿವೆ.

ಸೊಪ್ಪಿನ ಬೆಲೆಯು ತೀರ ಅಗ್ಗವಾಗಿದ್ದು, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನ ಬರುತ್ತಿದೆ. ಫಾರಂ ಕೊತ್ತಂಬರಿ ಸಣ್ಣ ಕಟ್ಟು ₹2ಕ್ಕೆ ಒಂದರಂತೆ ವ್ಯಾಪಾರ ನಡೆದಿದೆ. ಸಬ್ಬಸ್ಸಿಗೆ ₹10ಕ್ಕೆ 3, ಮೆಂತ್ಯ ₹20ಕ್ಕೆ 3, ಕೀರೆ, ಕಿಲ್‌ಕೀರೆ, ದಂಟು ಹಾಗೂ ಪಾಲಕ್‌ ಸಣ್ಣ ಕಟ್ಟು ₹10ಕ್ಕೆ 4, ಪುದೀನ ಒಂದಕ್ಕೆ ₹5 ರಂತೆ ವ್ಯಾಪಾರ ನಡೆದಿದೆ. ಗ್ರಾಹಕರು ಚಿಲ್ಲರೆ ಕಾಸಿನಲ್ಲೇ ಬುಟ್ಟಿ ತುಂಬ ಸೊಪ್ಪು ಒಯ್ಯುತ್ತಿದ್ದಾರೆ.

ಆಷಾಢ ಮಾಸ ಹಾಗೂ ಚಾಮುಂಡಿ ಹಬ್ಬದ ಅಂಗವಾಗಿ ಕುರಿ–ಮೇಕೆ ಮಾಂಸದ ಬೆಲೆ ಕೊಂಚ ಏರಿಕೆ ಕಂಡಿದ್ದು, ₹750ರ ಸರಾಸರಿಯಲ್ಲಿ ಮಾರಾಟ ನಡೆದಿತ್ತು. ಮತ್ತೆ ಬೆಲೆ ಇಳಿದಿಲ್ಲ. ಕೋಳಿಮಾಂಸವು ಪ್ರತಿ ಕೆ.ಜಿ.ಗೆ ₹200 ಹಾಗೂ ಚರ್ಮರಹಿತ ಕೋಳಿಮಾಂಸ ₹240ರಂತೆ ವ್ಯಾಪಾರವಾಗುತ್ತಿದೆ.

ಆಳಸಮುದ್ರ ಮೀನುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಸಮುದ್ರ ಮೀನುಗಳು ದುಬಾರಿಯಾಗಿಯೇ ಮುಂದುವರಿದಿವೆ. ಅಂಜಲ್ ಕೆ.ಜಿ.ಗೆ ₹1500, ಬಂಗುಡೆ ₹450, ಭೂತಾಯಿ ₹400, ಸೀಗಡಿ ₹500–600ರಂತೆ ಮಾರಾಟ ನಡೆದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮೀನು ಮಾರುಕಟ್ಟೆಗೆ ಬರುತ್ತಿಲ್ಲ ಎಂದು ವರ್ತಕರು ಹೇಳುತ್ತಾರೆ.

ಸಿಹಿನೀರಿನಲ್ಲಿ ಬೆಳೆಯುವ ಮೀನುಗಳ ಧಾರಣೆಯಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ. ಕಾಟ್ಲಾ, ರೂ‍ಪ್‌ಚಂದ್, ಗೌರಿ ಪ್ರತಿ ಕೆ.ಜಿ.ಗೆ ₹200 ಹಾಗು ಜಿಲೇಬಿ ₹180ರ ಸರಾಸರಿಯಲ್ಲಿ ವ್ಯಾಪಾರವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.