ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಸೋಮವಾರ ನಡೆದ ‘ಗಜ ಪಯಣ’ದಲ್ಲಿ ಸಾಂಸ್ಕೃತಿಕ ಕಲಾತಂಡಗಳು ಗಜಪಡೆಗೆ ಸ್ವಾಗತ ನೀಡಿದವು
–ಪ್ರಜಾವಾಣಿ ಚಿತ್ರ
ಹುಣಸೂರು: ‘ಗಜಪಯಣ’ ಪ್ರಯುಕ್ತ ಸೋಮವಾರ ತಾಲ್ಲೂಕಿನ ವೀರನಹೊಸಹಳ್ಳಿಯ ಆಶ್ರಮ ಶಾಲೆಯ ಬಳಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ಮಾವುತರು– ಕಾವಾಡಿಗರಿಗೆ ಸನ್ಮಾನ, ಹಾಡಿ ಹಾಗೂ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸೂಜಿಗಲ್ಲಿನಂತೆ ಸೆಳೆದವು.
ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಚಾಮರಾಜನಗರವಲ್ಲದೇ ದೂರದೂರುಗಳಿಂದ ಆನೆಪ್ರಿಯರು, ಆದಿವಾಸಿ ಮಕ್ಕಳು, ಟಿಬೆಟನ್ನರು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ನೃತ್ಯ ಆಕರ್ಷಿಸಿತು.
ಆದಿವಾಸಿ ಸಮುದಾಯದ ಜನರು ಹಬ್ಬದ ಹೊಸ ಬಟ್ಟೆ ಧರಿಸಿ, ಮಕ್ಕಳೊಂದಿಗೆ ಬಂದು ಆನೆಗಳಿಗೆ ಕೈಮುಗಿದರು. ಎಲ್ಲರಿಗೂ ‘ಪುಟ್ಟ ದಸರೆ’ಯಂತೆ ಕಂಗೊಳಿಸಿತು. ನಾಗಾಪುರ, ವೀರನಹೊಸಹಳ್ಳಿ, ಕೊಳವಿಗೆ ಆಶ್ರಮ ಶಾಲೆಯ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.
ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ‘ಅರಣ್ಯದಂಚಿನ ಗ್ರಾಮಗಳಲ್ಲಿ ರೈತರು ಎದುರಿಸುತ್ತಿರುವ ಸಾಗುವಳಿ ಹಕ್ಕು ಸಮಸ್ಯೆಗೆ ಅರಣ್ಯ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೆ ನಡೆಸಿ ಶಾಶ್ವತ ಪರಿಹಾರ ನೀಡಲಿವೆ’ ಎಂದರು.
ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ‘ಅರಣ್ಯದಂಚಿನಲ್ಲಿರುವ ಪಿರಿಯಾಪಟ್ಟಣ ತಾಲ್ಲೂಕಿನ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.
ಶಾಸಕ ಜಿ.ಡಿ.ಹರೀಶ್ ಗೌಡ, ‘ಸಾಗುವಳಿ ಹಕ್ಕು ನೀಡಬೇಕು. ವನ್ಯಜೀವಿಗಳ ದಾಳಿಯಲ್ಲಿ ಮೃತಪಟ್ಟವರ ಪರಿಹಾರದ ಮೊತ್ತ ಹೆಚ್ಚಿಸಬೇಕು. ಗಿರಿಜನರ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡವರಿಗೆ ಆರಂಭದಲ್ಲಿ ಮನೆ ಮಂಜೂರು ಮಾಡಲಾಗಿತ್ತು. ನಂತರದಲ್ಲಿ ಬಂದವರಿಗೆ ಮನೆ ನೀಡಿಲ್ಲ’ ಎಂದು ಸಚಿವರ ಗಮನಕ್ಕೆ ತಂದರು.
ಶಾಸಕರಾದ ತನ್ವೀರ್ ಸೇಠ್, ಜಿ.ಡಿ.ಹರೀಶ್ ಗೌಡ, ಡಿ.ರವಿಶಂಕರ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ದಕ್ಷಿಣ ವಲಯ ಡಿಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಡಿಸಿಎಫ್ ಗಳಾದ ಪ್ರಭುಗೌಡ, ಸೀಮಾ ಪಾಲ್ಗೊಂಡಿದ್ದರು.
‘ತಡೆಗೋಡೆ ನಿರ್ಮಾಣಕ್ಕೆ ₹ 800 ಕೋಟಿ’:
‘ಅರಣ್ಯದಂಚಿನಲ್ಲಿ ಆನೆ ಹಾವಳಿ ನಿಯಂತ್ರಣಕ್ಕೆ ರೈಲು ಕಂಬಿಗಳ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ರಾಜ್ಯದಲ್ಲಿ 312 ಕಿ.ಮೀ ತಡೆಗೋಡೆ ನಿರ್ಮಿಸಲು ಯೋಜಿಸಲಾಗಿದ್ದು 112 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಈ ಯೋಜನೆಗೆ ಸರ್ಕಾರವು ₹ 800 ಕೋಟಿ ಅನುದಾನ ನೀಡಿದೆ’ ಎಂದು ಈಶ್ವರ ಖಂಡ್ರೆ ಮಾಹಿತಿ ನೀಡಿದರು. ‘ಅರಣ್ಯ ರಕ್ಷಣೆಯಲ್ಲಿ ಕಾಡಂಚಿನ ಗ್ರಾಮಸ್ಥರ ಸಹಕಾರ ಶ್ಲಾಘನೀಯ. ಈ ನಡುವೆ ಕೆಲವೊಂದು ದುಷ್ಕೃತ್ಯ ನಡೆದಿವೆ. ಚಾಮರಾಜನಗರದಲ್ಲಿ 5 ಹುಲಿಗಳಗೆ ವಿಷಪ್ರಾಶನ ಹಾಕಿ ಸಾಯಿಸಿರುವುದು ದೇಶವನ್ನೇ ತಲ್ಲಣಗೊಳಿಸಿದೆ. ವನ್ಯಜೀವಿಗಳಿಗೆ ಬದುಕುವ ಹಕ್ಕಿದೆ. ಅವುಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಆಗಿದೆ’ ಎಂದು ಹೇಳಿದರು.
ಹರಿದು ಬಂದ ಜನ; ಪರದಾಟ
ಹಾಡಿಗಳ ಜನರು ಮಾವುತರು– ಕಾವಾಡಿಗಳ ಕುಟುಂಬದವರು ನೆರೆ ಜಿಲ್ಲೆಗಳ ಜನರು ನಾಡದೇವತೆ ಚಾಮುಂಡೇಶ್ವರಿಯನ್ನು ಹೊರುವ ‘ಅಭಿಮನ್ಯು’ ನೇತೃತ್ವದ 9 ಆನೆಗಳಿಗೆ ಬೀಳ್ಕೊಡಲು ಬರುತ್ತಿದ್ದರು. ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಇತರ ರಾಜ್ಯದವರಷ್ಟಲ್ಲದೇ ವಿದೇಶಿ ಪ್ರವಾಸಿಗರು ಬಂದಿದ್ದರು. ಆನೆಗಳ ಪೂಜೆ ಕಾರ್ಯಕ್ರಮ ನೋಡಲು ಬಂದಿದ್ದ ಜನರನ್ನು ಪೊಲೀಸರು ಬ್ಯಾರಿಕೇಡ್‌ಗಳನ್ನು ಬಳಸಿ ನಿಯಂತ್ರಿಸಿದರು. ಈ ವೇಳೆ ತಳ್ಳಾಟ– ನೂಕಾಟವು ನಡೆಯಿತು. ಕೆಲವರು ಮರಗಳನ್ನು ಹತ್ತಿ ನೆಚ್ಚಿನ ಆನೆಗಳನ್ನು ಕಣ್ತುಂಬಿಕೊಂಡರು. ವೇದಿಕೆಯ ಕಾರ್ಯಕ್ರಮದಲ್ಲೂ ಆಸನಗಳು ಕಡಿಮೆ ಇದ್ದರಿಂದ ಜನರು ನಿಂತು ನೋಡಿದರು. ವಾಹನ ನಿಲ್ಲಿಸಲು ಪಾರ್ಕಿಂಗ್ ಜಾಗವಿದ್ದರೂ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸಿ ಜನರು ಬಂದಿದ್ದರಿಂದ ದಟ್ಟಣೆ ಉಂಟಾಯಿತು. ಎರಡು ಕಿ.ಮೀ. ನಡೆಯಬೇಕಾಯಿತು. ಮಧ್ಯಾಹ್ನ ಜನರಿಗೆ ಊಟದ ಕೊರತೆಯೂ ಕಾಡಿತ್ತು.
‘ಭೀಮ’ನಿಗೆ ಅಭಿಮಾನಿಗಳ ಜಯಕಾರ
ಅಭಿಮನ್ಯು ಜೊತೆಗೆ ‘ಭೀಮ’ನಿಗೆ ಹೆಚ್ಚು ಆನೆ ಅಭಿಮಾನಿಗಳು ಮುತ್ತಿದರು. ನಡಿಗೆಯಲ್ಲೂ ಅವನ ಸುತ್ತವೇ ಹೆಚ್ಚು ಮಂದಿ ಇದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ‘ರೀಲ್ಸ್’ ವಿಡಿಯೊ ಮಾಡುವವರು ‘ಭೀಮ’ ಎಂದು ಕೂಗುತ್ತಿದ್ದರು. ಅದೂ ಸೊಂಡಿಲು ಎತ್ತಿ ನಮಸ್ಕರಿಸುತ್ತಿತ್ತು. ಮಾವುತ ಗುಂಡಣ್ಣ ಸೊಂಡಿಲೆತ್ತದೇ ನಡೆಯುವಂತೆ ಹಣೆಯನ್ನು ತಟ್ಟುತ್ತಿದ್ದದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.