
ನಂಜನಗೂಡು: ‘ರಾಜ್ಯ ನೂರಾರು ಕಡೆ ಬಸನವಾಳುಖಾದಿ ಗ್ರಾಮೋದ್ಯೋಗ ಕೇಂದ್ರದಂಥ ಸಂಸ್ಥೆಗಳಿವೆ. ಸರ್ಕಾರ ಗಾಂಧಿ ಮಿಷನ್ ಸ್ಥಾಪಿಸಿ ಅನುದಾನ ನೀಡಿ, ಅವುಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ರಂಗಕರ್ಮಿ ಹೆಗ್ಗೊಡು ಪ್ರಸನ್ನ ಹೇಳಿದರು.
ತಾಲ್ಲೂಕಿನ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ‘ಖಾದಿ ಗ್ರಾಮೋದ್ಯೋಗವನ್ನು ನಂಬಿ, ದಶಕಗಳಿಂದ ಅದನ್ನು ಪೋಷಿಸುತ್ತಿರುವ ಬದನವಾಳು ಗ್ರಾಮದ ಮಹಿಳೆಯರ ಬದುಕನ್ನು ಹಸನಾಗಿಸಲು ಖಾದಿ ಗ್ರಾಮೋದ್ಯೋಗ ಅಭಿವೃದ್ಧಿಗಾಗಿ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದರು
15 ದಿನಗಳಿಂದ ನಾನು, ಮಾಜಿ ಸಂಸದ ನಾರಾಯಣ ಸ್ವಾಮಿ, ಪ್ರೊ.ಜಯದೇವ್, ಪ್ರೊ.ಸತೀಶ್ ಜತೆಗೂಡಿ ಬದನವಾಳು ಸುತ್ತಲಿನ ಗ್ರಾಮಗಳನ್ನು ಸುತ್ತಾಡಿ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಸಬರಮತಿ ಆಶ್ರಮದ ರೀತಿ ಅಭಿವೃದ್ಧಿ ಪಡಿಸಲು ವರದಿಯನ್ನು ಸಿದ್ದಪಡಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವರ್ಷದ ಬಜೆಟ್‌ನಲ್ಲಿ ಗ್ರಾಮೋದ್ಯೋಗ ಕೇಂದ್ರದ ಅಭಿವೃದ್ಧಿಗಾಗಿ ₹40 ಕೋಟಿ ಅನುದಾನ ಮೀಸಲಿರಿಸಿದ್ದರು. ಅಭಿವೃದ್ಧಿ ಎಂದರೆ ಕಟ್ಟಡಗಳನ್ನು ಕಟ್ಟಿ ಅನುದಾನವನ್ನು ವ್ಯರ್ಥಮಾಡುವ ಬದಲು ಕ್ಲಸ್ಟರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು, ಹಿಂದೆ ಬದನವಾಳು ಸೇರಿದಂತೆ ಇಲ್ಲಿನ 10 ಗ್ರಾಮಗಳಲ್ಲಿ ಗ್ರಾಮೋದ್ಯೋಗ ಕೇಂದ್ರ ನಡೆಯುತ್ತಿದ್ದವು. ಅವುಗಳಿಗೆ ಪುನಶ್ಚೇತನ ಅಗತ್ಯ ಎಂದು ಹೇಳಿದರು.
ದೀನಬಂಧು ಸಂಸ್ಥೆಯ ಪ್ರೊ.ಜಯದೇವ್ ಮಾತನಾಡಿ, 10 ವರ್ಷಗಳ ಹಿಂದೆ ಬದನವಾಳುವಿನಲ್ಲಿ ಶ್ರಮಸಹಿತ ಸರಳ ಜೀವನ ಹಾಗೂ ಗ್ರಾಮೋದ್ಯೋಗಕ್ಕೆ ಒತ್ತು ಕೊಟ್ಟು ನಡೆಸಿದ ಚಳವಳಿ ಫಲನೀಡುತ್ತಿದೆ. ಶ್ರಮದ ಘನತೆಯನ್ನು ಎತ್ತಿಹಿಡಿಯುವ,ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಾರ್ಯವಾಗಬೇಕು, ಇಲ್ಲಿ ನೂಲುವ ಮಹಿಳೆಯರ ವಸ್ತುಗಳನ್ನು ಖರೀದಿಸುವವರಿಲ್ಲ ಹೀಗಾಗಿ ಅವರಿಗೆ ಸಂಬಳ ನೀಡಲು ಸಾಧ್ಯವಾಗಿಲ್ಲ, ಡಿ.ಆರ್.ಪಾಟೀಲರು ಖರೀದಿಸಿ ಸಹಾಯ ಹಸ್ತ ಚಾಚಿದ್ದಾರೆ ಎಂದು ಹೇಳಿದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಧ್ರುವನಾರಾಯಣ ಗ್ರಾಮೋದ್ಯೋಗ ಕೇಂದ್ರವನ್ನು ಅಭಿವೃದ್ಧಿ ಪಡಿಸುವ ಭರವಸೆ ನೀಡಿದ್ದರು. ಗ್ರಾಮಕ್ಕೆ ಸ್ವತಂತ್ರ್ಯ ಹೋರಾಟದ ಹಿನ್ನಲೆಯಿದೆ. ಖಾದಿ ಗ್ರಾಮೋದ್ಯೋಗ ಕೇಂದ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ನೀಡಿದ್ದಾರೆ. ಯೋಗ ಕೇಂದ್ರವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಗ್ರಾಮೋದ್ಯೋಗ ಕೇಂದ್ರವನ್ನು ಅಭಿವೃದ್ಧಿಪಡಿಸಲು ಪ್ರಸನ್ನ ತಯಾರಿಸಿರುವ ವರದಿಯನ್ನು ಮಾಜಿ ಶಾಸಕ ಡಿ.ಆರ್.ಪಾಟೀಲ್,ಶಾಸಕ ದರ್ಶನ್ ಧ್ರುವನಾರಾಯಣ ಅವರಿಗೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ 5 ನೇ ಹಣಕಾಸು ಸಮಿತಿ ಅಧ್ಯಕ್ಷ ನಾರಾಯಣ ಸ್ವಾಮಿ,ಮಾಜಿ ಶಾಸಕ ಕಳಲೆ ಕೇಶವಮೂರ್ತಿ,ಪ್ರೊ.ಶಿವರಾಜ್, ಮೋಹನ್ ಕುಮಾರ್, ಪ್ರೊ.ಸತೀಶ್, ಕೆಂಪೇಗೌಡ, ಗ್ರಾ.ಪಂ.ಅಧ್ಯಕ್ಷ ದೊರೆಸ್ವಾಮಿ, ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ವೀರೇದೇವನಪುರ ವಿಜಯ್ ಕುಮಾರ್, ಶ್ರೀನಿವಾಸ ಮೂರ್ತಿ, ಪ್ರೊ.ಶಿವಸ್ವಾಮಿ ಉಪಸ್ಥಿತರಿದ್ದರು.
‘ನಂದಿನಿ ಮಳಿಗೆ ಬಳಕೆಯಾಗಲಿ’
ವಿಕೇಂದ್ರೀಕರಣ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಡಿ.ಆರ್.ಪಾಟೀಲ್ ಮಾತನಾಡಿ ಗ್ರಾಮೋದ್ಯೋಗದ ಜೊತೆಗೆ ಈ ಭಾಗದ ಹಳ್ಳಿಗಳ ಆಹಾರವಾಗಿರುವ ಚೋಳ ಸಜ್ಜೆ ರಾಗಿಯ ರೊಟ್ಟಿಗಳನ್ನು ಗ್ರಾಮೋದ್ಯೋಗ ಕೇಂದ್ರದಲ್ಲಿ ತಯಾರಿಸಿ ರಾಜ್ಯದ ‘ನಂದಿನಿ’ ಮಳಿಗೆಗಳ ಮೂಲಕ ಮಾರಾಟ ಮಾಡುವ ಪ್ರಸ್ತಾಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರೆ ಬಡವರ ಕೆಲಸ ಎಂದು ಖುಷಿಯಿಂದ ಕೈಗೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ ಎಂದರು. ಮಹಾತ್ಮ ಗಾಂಧೀಜಿ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ 2027ಕ್ಕೆ ನೂರು ವರ್ಷ ತುಂಬಲಿದೆ ಅದರ ಶತಮಾನೋತ್ಸವದಲ್ಲಿ ಗ್ರಾಮೋದ್ಯೋಗ ಕೇಂದ್ರದ ಅಭಿವೃದ್ಧಿಯಾಗಿರಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.