ಮೈಸೂರು: ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಗಣೇಶೋತ್ಸವ ಸಮಿತಿಗಳು ಹಬ್ಬದ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದು, ಜಿಲ್ಲೆ ಹಾಗೂ ನಗರ ಪೊಲೀಸರು ಧಾರ್ಮಿಕ ಮುಖಂಡರ ಶಾಂತಿ ಸಭೆ ನಡೆಸಿ, ಶಾಂತಿ– ಸೌಹಾರ್ದದ ಪಾಠ ಹೇಳುತ್ತಿದ್ದಾರೆ.
ಜಿಲ್ಲೆ ಹಾಗೂ ನಗರ ವ್ಯಾಪ್ತಿಯ ಎಲ್ಲಾ ಠಾಣೆಗಳಲ್ಲಿ ಸ್ಥಳೀಯ ಮುಖಂಡರ ಶಾಂತಿ ಸಭೆಯ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಹಾಗೂ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಮ್ಮ ಕಚೇರಿಯಲ್ಲಿ ಸಭೆ ನಡೆಸಿ ಶಾಂತಿಯುತವಾಗಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಆಚರಣೆಗೆ ಸಲಹೆ ನೀಡಿದ್ದಾರೆ.
ಗಣೇಶೋತ್ಸವ ಆಚರಿಸಲು ಸಮಿತಿಗಳಿಗೆ ಏಕಗವಾಕ್ಷಿ (ಸಿಂಗಲ್ ವಿಂಡೋ) ಅನುಮತಿ ನೀಡಲು ಜಿಲ್ಲಾ ಪೊಲೀಸರು ಚಿಂತನೆ ನಡೆಸಿದ್ದು, ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ್ದಾರೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಗಣೇಶ ಪ್ರತಿಷ್ಠಾನೆ ಮಾಡಲು ಅನುಮತಿಗಾಗಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಿದ್ದು, ಎಲ್ಲಾ ಇಲಾಖೆಯ ಅಧಿಕಾರಿಗಳೂ ಒಂದೇ ಸ್ಥಳದಲ್ಲಿ ಲಭ್ಯರಿದ್ದಾರೆ.
ಗಣೇಶ ವಿಸರ್ಜನೆ ಮೆರವಣಿಗೆ ಹಾಗೂ ಈದ್ ಮಿಲಾದ್ ಸಮಯದಲ್ಲಿ ನಡೆಯುವ ‘ಚಾಂದ್‌ನಿ’ ಮೆರವಣಿಗೆಗೆ ಭದ್ರತೆ ಒದಗಿಸುವ ಬಗ್ಗೆ ಪೊಲೀಸ್ ಅಧಿಕಾರಿಗಳು ವಿವಿಧ ಹಂತದ ಸಭೆ ನಡೆಸಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸುವ ಕುರಿತು ಚರ್ಚಿಸಿದರು.
‘ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 1,724 ಸಮಿತಿಗಳು ಗಣೇಶೋತ್ಸವ ಆಚರಿಸುತ್ತಿದ್ದು, 40 ಕಡೆ ಸೂಕ್ಷ್ಮ ಪ್ರದೇಶ ಗುರುತಿಸಿದ್ದೇವೆ. ಯಾವುದೇ ತೊಂದರೆ ಇಲ್ಲದೆ ಹಬ್ಬ ನಡೆಸಲು ಭದ್ರತೆ ಒದಗಿಸಲಿದ್ದೇವೆ’ ಎಂದು ಎಎಸ್‌ಪಿ ಮಲ್ಲಿಕ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ವರ್ಷ ಒಟ್ಟು 567 ಸಮಿತಿಗಳು ಗಣೇಶೋತ್ಸವಕ್ಕೆ ಅನುಮತಿ ಪಡೆದಿದ್ದವು. ಗುರುವಾರದಿಂದ ಈ ವರ್ಷದ ಗಣೇಶೋತ್ಸವಕ್ಕೆ ಅರ್ಜಿ ಸ್ವೀಕರಿಸಲಾಗುತ್ತಿದೆ.
‘ನಗರ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ ನಡೆಸಿ ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳ ಸಾರ್ವಜನಿಕ ಸ್ಥಳವಾಗಿದ್ದರೆ ಪಾಲಿಕೆ, ಪ್ರಾಧಿಕಾರ ಮತ್ತು ಖಾಸಗಿ ಜಾಗವಾಗಿದ್ದರೆ ಅದರ ಮಾಲೀಕರಿಂದ ಅನುಮತಿ ಪಡೆಯಬೇಕು. ಆ ಸ್ಥಳದಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಮತ್ತು ಸಂಚಾರ ವಿಭಾಗದಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು’ ಎಂದು ಪೊಲೀಸ್ ಅಧಿಕಾರಿಗಳು ಮುಖಂಡರಿಗೆ ಸೂಚಿಸಿದ್ದಾರೆ.
‘ಗಣೇಶ ಮೂರ್ತಿ ಮೆರವಣಿಗೆಯಲ್ಲಿ ಡಿಜೆ ಬಳಸುವಂತಿಲ್ಲ. ನ್ಯಾಯಾಲಯದ ಸೂಚನೆಯಂತೆ ಸೌಂಡ್ ಡೆಸಿಬಲ್ 70 ಮೀರುವಂತಿಲ್ಲ. ಅನುಮತಿ ಪಡೆದ ಮಾರ್ಗದಲ್ಲಿ ಮಾತ್ರ ಸಂಚರಿಸಬೇಕು. ವಿಗ್ರಹ ವಿಸರ್ಜನೆ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಹೇಳಿದ್ದಾರೆ.
ಹಬ್ಬದಲ್ಲಿ ಮೈಸೂರಿನಲ್ಲಿ ಗಲಭೆ ನಡೆದಿಲ್ಲ. ಆ ಪರಂಪರೆ ಮುಂದುವರಿಸುತ್ತೇವೆ. ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆಯಲ್ಲಿ ಚರ್ಚ್ ಮಸೀದಿ ಮುಖಂಡರೂ ನಮ್ಮನ್ನು ಸ್ವಾಗತಿಸುತ್ತಾರೆಸಿ.ಕೆ.ರುದ್ರಮೂರ್ತಿ ಮಾಧವ ಕೃಪಾ ಗಣೇಶೋತ್ಸವ ಸಮಿತಿ ಸಂಚಾಲಕ
‘ಪೊಲೀಸರಿಗೆ ಸಹಕಾರ ನೀಡುತ್ತೇವೆ. ಗಣೇಶೋತ್ಸವ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿ ಬಳಿ ಗುಂಪು ಸೇರದೆ ಪ್ರಮುಖರು ಮೆರವಣಿಗೆಯನ್ನು ಸ್ವಾಗತಿಸುತ್ತೇವೆ. ಈದ್ ಮಿಲಾದ್‌ದಂದು ನಡೆಯುವ ‘ಚಾಂದ್‌ನಿ ಮೆರವಣಿಗೆ’ ಶಾಂತಿಯುತವಾಗಿ ನಡೆಸಲು ಸಿದ್ಧತೆ ಮಾಡಿದ್ದೇವೆ. ಸೆ.5ರಂದು ರಾತ್ರಿ ಸಾಡೇ ಸಾತ್ ಸಿಗ್ನಲ್ ಬಳಿಯಿಂದ ಆರಂಭವಾಗುವ ಮೆರವಣಿಗೆಯಲ್ಲಿ 50– 60 ಸಮಿತಿಗಳು ಭಾಗವಹಿಸಲಿವೆ. ಮಿಷನ್ ಆಸ್ಪತ್ರೆ ಸರ್ಕಲ್‌ನಲ್ಲಿ ಸಮಾಪನಗೊಳ್ಳಲಿದೆ’ ಎಂದು ಮೀನಾ ಬಜಾರ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ಇಲ್ಯಾಸ್ ಬೇಗ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.