ADVERTISEMENT

ಮೈಸೂರು: ಕಾರಾಗೃಹದಲ್ಲಿ ಗಾಂಜಾ, ಮೊಬೈಲ್‌ ಪತ್ತೆ

₹ 15 ಸಾವಿರ ನಗದು, ಮಾರಕಾಸ್ತ್ರ ವಶಕ್ಕೆ: ರಮೇಶ್‌ ಬಾನೋತ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 6:56 IST
Last Updated 9 ಫೆಬ್ರುವರಿ 2023, 6:56 IST
ಮೈಸೂರಿನ ಕೇಂದ್ರ ಕಾರಾಗೃಹ
ಮೈಸೂರಿನ ಕೇಂದ್ರ ಕಾರಾಗೃಹ   

ಮೈಸೂರು: ಅಕ್ರಮ ಚಟುವಟಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಇಲ್ಲಿನ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಬುಧವಾರ ಸಂಜೆ ದಿಢೀರ್ ದಾಳಿ ನಡೆಸಿ, 20 ಗ್ರಾಂ ಗಾಂಜಾ, ₹ 15 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.

ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ನೇತೃತ್ವದಲ್ಲಿ ಡಿಸಿಪಿಗಳಾದ ಎಂ.ಮುತ್ತುರಾಜು, ಎಸ್‌.ಜಾಹ್ನವಿ ಸೇರಿದಂತೆ ಎಲ್ಲ ವಿಭಾಗದ ಎಸಿಪಿ, ಇನ್‌ಸ್ಪೆಕ್ಟರ್‌, ಸಬ್‌ಇನ್‌ಸ್ಪೆಕ್ಟರ್‌ಗಳು ಕಾರ್ಯಾಚರಣೆ ನಡೆಸಿದರು. ಕಮಾಂಡೋ ಪಡೆ ಹಾಗೂ ಮಾದಕ ವಸ್ತು ಪತ್ತೆ ಹಚ್ಚುವ ಶ್ವಾನದಳವೂ ಇತ್ತು.

‘ಅನಿರೀಕ್ಷಿತ ದಾಳಿ ನಡೆಸಿ ತಪಾಸಣೆ ನಡೆಸಿದ್ದೇವೆ. ಗಾಂಜಾ, ನಗದು ಸೇರಿದಂತೆ ಚಮಚದಿಂದ ಮಾಡಿದ 8 ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲಿಂದ ವಸ್ತುಗಳು ಜೈಲಿಗೆ ಸರಬರಾಜಾಗುತ್ತಿತ್ತು ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಗುರುವಾರ ತಿಳಿಸಿದರು.

ADVERTISEMENT

‘ಕಾರಾಗೃಹಕ್ಕೆ ಹೊಂದಿಕೊಂಡಿರುವ ಸ್ಮಶಾನದ ಕಡೆಯಿಂದ ಪೂರೈಕೆಯಾಗುತ್ತಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಜೈಲಿನಲ್ಲಿ ಮಾದಕವಸ್ತು, ಮೊಬೈಲ್‌ಗಳು ಸಿಗುವುದು ಗಂಭೀರ ವಿಷಯ. ಮೊಬೈಲ್‌ ಇದ್ದರೆ ಹೊರಗಿನವರಿಗೆ, ಸಾಕ್ಷ್ಯಗಳಿಗೆ ಬೆದರಿಕೆ ಒಡ್ಡುತ್ತಾರೆ. ಹೀಗಾಗಿ ವಸ್ತುಗಳು ಹೇಗೆ ಬಂದಿವೆ, ಯಾರಾದರೂ ತಂದುಕೊಟ್ಟಿದ್ದಾರಾ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಗೆ ವರದಿ ನೀಡಲಾಗುವುದು’ ಎಂದರು.

ಹಣ ವಸೂಲಿ; 30 ಮಂದಿ ವಶಕ್ಕೆ: ಭಿಕ್ಷಾಟನೆ ನೆಪದಲ್ಲಿ ನಾಗರಿಕರಿಂದ ಹಣ ವಸೂಲಿ ಮಾಡುತ್ತಿದ್ದ 8 ಮಂದಿ ಆರೋಪಿಗಳನ್ನು ಹಾಗೂ 22 ತೃತೀಯ ಲಿಂಗಿ ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ನಗರದ ಪ್ರಮುಖ ವೃತ್ತಗಳು, ಟ್ರಾಫಿಕ್ ಸಿಗ್ನಲ್, ಪ್ರಮುಖ ಸ್ಥಳಗಳಲ್ಲಿ ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದಿದ್ದರಿಂದ ಕಾರ್ಯಾಚರಣೆ ವಶಕ್ಕೆ ಪಡೆಯಲಾಗಿದೆ. 8 ಮಂದಿಯನ್ನು ಎಚ್ಚರಿಕೆ ನೀಡಿ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. 22 ಮಂದಿ ತೃತೀಯ ಲಿಂಗಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಕಮಿಷನರ್‌ ರಮೇಶ್‌ ಬಾನೋತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.