
ಎಚ್.ಡಿ.ಕೋಟೆ: ಪಟ್ಟಣದ ಮುಸ್ಲಿಂ ಬ್ಲಾಕ್ ಮಸೀದಿ ಹಿಂಭಾಗ ಮಂಗಳವಾರ ರಾತ್ರಿ ಗಾಂಜಾ ಸೇವಿಸಿ ನಶೆಯಲ್ಲಿ ನಡೆದ ಜಗಳದಲ್ಲಿ ಓರ್ವ ಯುವಕನ ಕೊಲೆಯಾಗಿದೆ.
ಪಟ್ಟಣದ ಮುಸ್ಲಿಂ ಬ್ಲಾಕ್ ನಿವಾಸಿ ಕಲಾಂ (21) ಮೃತ ಯುವಕ. ಆರೋಪಿ ತವೀದ್ ಪರಾರಿಯಾಗಿದ್ದಾನೆ.
ಇಬ್ಬರ ನಡುವೆ ನಶೆ ಮತ್ತಿನಲ್ಲಿ ಮಾತಿನ ಚಕಮಕಿ ನಡೆದಿದ್ದು, ಕಲಾಂನ ತಲೆ ಭಾಗಕ್ಕೆ ದೊಣ್ಣೆಯಿಂದ ನವೀದ್ ಹೊಡೆದಿದ್ದಾನೆ.
ರಕ್ತ ಸ್ರಾವದಿಂದ ಸ್ಥಳದಲ್ಲಿ ಬಿದ್ದು ಒದ್ದಾಡುತ್ತಿದ್ದ ಕಲಾಂನನ್ನು ಸ್ಥಳೀಯರು ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ನೀಡಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿತ್ತು. ಅಲ್ಲಿ ಮೃತರಾದರು.
ಸ್ಥಳಕ್ಕೆ ಆಗಮಿಸಿದ ಎಸ್.ಪಿ ವಿಷ್ಣುವರ್ಧನ್, ಡಿವೈಎಸ್ಪಿ ರವಿ, ಇನ್‌ಸ್ಪೆಕ್ಟರ್ ಗಂಗಾಧರ್, ಎಸ್ಐ ಚಿಕ್ಕನಾಯಕ, ಸುರೇಶ್ ನಾಯಕ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ, ಜಗಳ ಆಡುವ ಸಂದರ್ಭದಲ್ಲಿ ಇದ್ದ ವ್ಯಕ್ತಿಗಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಕೊಲೆಗಾರನ ಹಿಡಿಯಲು ಬಲೆ ಬೀಸಿದ್ದಾರೆ. ಎಚ್.ಡಿ.ಕೋಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
‘ಡ್ರಗ್ಸ್ ದಂಧೆ ಮಟ್ಟ ಹಾಕಿ’
‘ಪಟ್ಟಣದಲ್ಲಿ ನೆಡೆಯುತ್ತಿರುವ ಡ್ರಗ್ಸ್ ದಂಧೆಯನ್ನ ಪೋಲಿಸರು ಮಟ್ಟ ಹಾಕಿ ಯುವಪೀಳಿಗೆಯನ್ನು ಉಳಿಸಬೇಕು’ ಎಂದು ಸಾರ್ವಜನಿಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಸರ್ಫ್ ಉದ್ದಿನ್ ಮಾತನಾಡಿ ‘ಈ ರೀತಿಯ ಘಟನೆಗಳು ನಮ್ಮ ಪಟ್ಟಣದಲ್ಲಿ ನಡೆದಿರುವುದು ಬೇಸರ ತಂದಿದೆ. ಇಂತಹ ಘಟನೆ ನಡೆಯುವುದಕ್ಕೆ ಯುವಕರುಗಳು ಮಾದಕ ವ್ಯಸನಿಗಳಾಗಿರುವುದು ಕಾರಣ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.