
ಹುಣಸೂರು: ಪಟ್ಟಣದಲ್ಲಿ ಗಾಂಜಾ ಹಾವಳಿ ಹೆಚ್ಚಿದೆ. ಗಾಂಜಾ ಮಾಫಿಯಾ ಯುವಕರನ್ನು ಬಲಿಪಡೆಯುತ್ತಿದ್ದು, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ನಗರಸಭೆ ಸದಸ್ಯರು ಆಗ್ರಹಿಸಿದರು.
ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕ್ ಪಾಶಾ ಮತ್ತು ಶಾಸಕ ಜಿ.ಡಿ.ಹರೀಶ್ ಗೌಡ ನೇತೃತ್ವದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಗಾಂಜಾ ಮತ್ತು ಇತರೆ ಮಾದಕ ವಸ್ತು ಹಾವಳಿ ತಡೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಅಬಕಾರಿ ಇಲಾಖೆ ಸರ್ಕಲ್ ಇನ್‌ಸ್ಪೆಕ್ಟರ್ ಭೀಮ್ ಸಾಗರ್ ಮಾತನಾಡಿ, ‘ಈಗಾಗಲೇ ಹಲವು ಪ್ರಕರಣ ದಾಖಲಿಸಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಶೀಘ್ರ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಅಬಕಾರಿ ಇಲಾಖೆಗೆ ಈ ಹಿಂದೆ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಜವಾಬ್ದಾರಿ ಇತ್ತು. ಇತ್ತೀಚೆಗೆ ಗಾಂಜಾ ಜಾಲ ಪತ್ತೆ ಮಾಡುವ ಅಧಿಕಾರವೂ ಸಿಕ್ಕಿದೆ. ಪೊಲೀಸ್ರು ಈ ಸಂಬಂಧ ಕಾರ್ಯೋನ್ಮುಖರಾಗಿದ್ದಾರೆ. ಸೂಕ್ತ ಸಾಕ್ಷಿಗಳಿಲ್ಲದ ಕಾರಣ ಆರೋಪಿಗಳು ಜಾಮೀನು ಪಡೆದು ಹೊರ ಬರುತ್ತಿದ್ದಾರೆ. ಇದರಿಂದಲೂ ಜಾಲ ಮತ್ತೆ ಸಕ್ರಿಯವಾಗುತ್ತದೆ’ ಎಂದು ಅಪರಾಧ ವಿಭಾಗದ ಪಿಎಸ್ಐ ಜಮೀರ್ ಅಹಮ್ಮದ್ ತಿಳಿಸಿದರು.
ಈ ಸಂಬಂಧ ಹಿರಿಯ ನಾಗರಿಕರು, ಜನಪ್ರತಿನಿಧಿ, ಪೊಲೀಸ್ ಅಬಕಾರಿ ಸೇರಿದಂತೆ ಹಲವರ ವಾಟ್ಸಆ್ಯಪ್ ಗ್ರೂಪ್ ರೂಪಿಸಿ ಮಾಹಿತಿ ರವಾನಿಸಿದರೆ ಕಾರ್ಯಾಚರಣೆಗೆ ಸಹಕಾರಿ ಆಗಲಿದೆ ಎಂದು ಹಲವರು ಸಲಹೆ ನೀಡಿದ್ದರಿಂದ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಪೌರಕಾರ್ಮಿಕರಿಗೆ ವಸತಿ ಯೋಜನೆ ರೂಪಿಸಲು ಸರ್ಕಾರಿ ನಿವೇಶನ ಇಲ್ಲವಾಗಿದೆ. ಈ ಹಿಂದೆ ಗುರುತಿಸಿದ್ದ ಎರಡು ನಿವೇಶನ ಖಾಸಗಿ ಮಾಲಿಕತ್ವಕ್ಕೆ ಸೇರಿದೆ. ₹ 96 ಲಕ್ಷ ಅನುದಾನ ನಗರಸಭೆ ಖಾತೆಯಲ್ಲಿದ್ದು, ಸರ್ವ ಸದಸ್ಯರ ತೀರ್ಮಾನದಂತೆ ಮನೆ ನಿರ್ಮಿಸಿಕೊಳ್ಳುವ ಫಲಾನುಭವಿಗೆ ತಲಾ ₹ 3 ಲಕ್ಷ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಶಾಸಕ ಹರೀಶ್‌ಗೌಡ ಸಭೆಗೆ ತಿಳಿಸಿದರು.
₹ 2 ಕೋಟಿ ನಷ್ಟ:
12 ತಿಂಗಳ ಹಿಂದೆ ಚಲನಚಿತ್ರ ಮಂದಿರವನ್ನು ನಗರಸಭೆ ಸುಪರ್ದಿಗೆ ಪಡೆದಿದ್ದು, ಎಂಜಿನಿಯರ್ ಶರ್ಮಿಳಾ ಅವರಿಗೆ ದುರಸ್ತಿಗೊಳಿಸಿ ಮರು ಟೆಂಡರ್ ಕರೆಯಲು ಸಾಮಾನ್ಯ ಸಭೆಯಲ್ಲಿ ಸಂಪೂರ್ಣ ಅಧಿಕಾರ ನೀಡಿದ್ದರೂ ಕ್ರಮವಹಿಸದೆಕಾರಣ ನಗರಸಭೆಗೆ ಕನಿಷ್ಠ ₹ 2 ಕೋಟಿ ಆದಾಯ ನಷ್ಟವಾಗಿದೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಶರವಣ ಆಗ್ರಹಿಸಿದರು.
ನಗರಸಭೆ ವ್ಯಾಪ್ತಿಯ ಪ್ರಮುಖ ಮುಖ್ಯ ರಸ್ತೆಗಳಿಗೆ ದೀಪ ಅಳವಡಿಸಲು ಈ ಹಿಂದಿನ ಸಭೆಯಲ್ಲಿ ಅನುಮತಿ ನೀಡಿದ್ದರೂ ಅಧಿಕಾರಿಗಳು ಕ್ರಮವಹಿಸಿಲ್ಲ. ಶೀಘ್ರವಾಗಿ ಪ್ರಮುಖ ರಸ್ತೆಗಳಿಗೆ 300 ಎಲ್ ಇಡಿ ದೀಪ ಮತ್ತು 31 ವಾರ್ಡ್ ಸದಸ್ಯರಿಗೆ 400 ದೀಪ ವಿತರಿಸುವಂತೆ ಶಾಸಕರು ಸೂಚಿಸಿದರು.
ನಗರಸಭೆ ಮುನೇಶ್ವರ ಕಾವಲ್ ಮೈದಾನದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನೀಡಿರುವ ಸ್ಥಳ ತೆರವುಗೊಳಿಸಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿ ಸ್ಥಳಾಂತರಿಸಲು ನಗರಸಭೆ ಆಯುಕ್ತರಿಗೆ ಶಾಸಕರು ಸೂಚಿಸಿದರು.
ಕಾಂಗ್ರೆಸ್ ಸದಸ್ಯರು ಸಭೆಯಿಂದ ಹೊರಗುಳಿದಿದ್ದರು.
ಸಭೆಯಲ್ಲಿ ಉಪಾಧ್ಯಕ್ಷ ಆಶಾ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಆಯುಕ್ತೆ ಮಾನಸ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.