ಮೈಸೂರು: ಲಿಂಗತ್ವ ಅಲ್ಪಸಂಖ್ಯಾತರಲ್ಲಿನ ವೈವಿಧ್ಯತೆ, ಅವರ ಅನುವಂಶಿಕ ರಚನೆ (ಜಿನೋಮ್)ಯಂತಹ ದತ್ತಾಂಶವನ್ನು ಸಂಗ್ರಹಿಸಿ, ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಲು ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಅಂಡ್ ಜಿನೋಮಿಕ್ಸ್ ಅಧ್ಯಯನ ವಿಭಾಗದಿಂದ ವಿಶಿಷ್ಟ ಸಂಶೋಧನೆ ಕೈಗೆತ್ತಿಕೊಳ್ಳಲಾಗಿದೆ.
ಈ ಸಂಬಂಧ ‘ಅನಿತಾ ಹ್ಯುಮಾನಿಟೇರಿಯನ್ ಫೌಂಡೇಷನ್’ ಹಾಗೂ ಮೈಸೂರು ವಿಶ್ವವಿದ್ಯಾಲಯದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ವಂಶವಾಹಿ ಹಾಗೂ ಜಿನೋಮ್‌ಗಳ ವೈಜ್ಞಾನಿಕ ಅಧ್ಯಯನ ವರದಿ ಸಿದ್ಧಪಡಿಸುವುದು ಯೋಜನೆಯ ಉದ್ದೇಶ.
ದೇಶದ ವಿವಿಧ ಭಾಗಗಳ 500 ಮಂದಿ ವೈವಿಧ್ಯಮಯ ಲಿಂಗತ್ವ ಅಲ್ಪಸಂಖ್ಯಾತರ ಜಿನೋಮ್ ಅಧ್ಯಯನ ನಡೆಸಲಾಗುವುದು. ಅವರು ಲಿಂಗತ್ವ ಅಲ್ಪಸಂಖ್ಯಾತರು ಆಗಿದ್ದು ಯಾವ ವರ್ಷದಲ್ಲಿ, ಅವರಲ್ಲಾದ ಮಾನಸಿಕ–ದೈಹಿಕ ಬದಲಾವಣೆ ಏನು ಎಂಬಿತ್ಯಾದಿ ಮಾಹಿತಿಯ ವರದಿ ಸಿದ್ಧಪಡಿಸಲಾಗುವುದು. ಇದಕ್ಕಾಗಿ ಮಾದರಿಗಳ ಸಂಗ್ರಹವನ್ನು ಆರಂಭಿಸಲಾಗಿದೆ.
‘ಲಿಂಗತ್ವ ಅಲ್ಪಸಂಖ್ಯಾತರ ಜಿನೋಮ್ ಹಂತದಲ್ಲಿ ಆಗುವ ಬದಲಾವಣೆಯ ಬಗ್ಗೆ ಹೆಚ್ಚಿನ ಸಂಶೋಧನೆ ಆಗಿಲ್ಲ. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಈ ವಿಶಿಷ್ಟ ಸಂಶೋಧನೆಯನ್ನು ನಡೆಸುತ್ತಿದ್ದೇವೆ. ಮೂರು ವರ್ಷಗಳ ದೀರ್ಘ ಅವಧಿಯವರೆಗೆ ನಡೆಯಲಿರುವ ಸಂಶೋಧನೆ ಇದು’ ಎಂದು ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಅಂಡ್ ಜಿನೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ, ಸಂಶೋಧನೆಯ ಸಾರಥ್ಯ ವಹಿಸಿರುವ ಸುತ್ತೂರು ಎಸ್.ಮಾಲಿನಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಂಶೋಧನೆಗೆ ಬಳಸಲಾಗುವ ಕೆಮಿಕಲ್‌ಗಳು, ಸಂಶೋಧನಾರ್ಥಿಗಳಿಗೆ ಶಿಷ್ಯವೇತನ ಮೊದಲಾದವುಗಳಿಗೆ ಬೇಕಾಗುವ ಆರ್ಥಿಕ ನೆರವನ್ನು ‘ಅನಿತಾ ಹ್ಯುಮಾನಿಟೇರಿಯನ್ ಫೌಂಡೇಷನ್’ ಒದಗಿಸಲಿದೆ. ವಿಶ್ಲೇಷಣೆಯನ್ನು ನಮ್ಮ ತಂಡ ನಡೆಸಲಿದೆ. ಜೀನ್ಸ್‌ನಲ್ಲಿ ಏನು ಬದಲಾವಣೆಯಾದರೆ ‘ಹೀಗಾಗುತ್ತದೆ’ ಎಂಬುದನ್ನು ಪತ್ತೆ ಹಚ್ಚಲಾಗುವುದು. ಇದಕ್ಕಾಗಿ ಲಿಂಗತ್ವ ಅಲ್ಪಸಂಖ್ಯಾತರ ಫಂಕ್ಷನಲ್ ಎಂಆರ್‌ಐ ಮಾಡಲಾಗುವುದು. ಜಿನೋಮ್ ಅನಾಲಿಸಿಸ್ (ತಲಾ ಒಬ್ಬರಿಗೆ ₹ 80ಸಾವಿರ ಬೇಕಾಗುತ್ತದೆ), ಕ್ರೋಮೋಜೋನ್, ಲಿವರ್, ಕಿಡ್ನಿ, ಹೃದಯದ ಕಾರ್ಯಾಚರಣೆ ಹೇಗಿದೆ, ಅವರು ಎದುರಿಸುವ ದೈಹಿಕ ಸವಾಲುಗಳೇನು, ಅಂಗಾಗಗಳಲ್ಲಿನ ಬದಲಾವಣೆ ಹೇಗೆ ಎಂಬಿತ್ಯಾದಿ ಅಧ್ಯಯನವನ್ನು ನಡೆಸಲಾಗುವುದು’ ಎಂದ ಮಾಹಿತಿ ನೀಡಿದರು.
‘ನಮ್ಮ ವಿಭಾಗದ ಚೈತ್ರಾ, ಅಮೃತವಲ್ಲಿ ಹಾಗೂ ಸಂಶೋಧನಾ ಅಭ್ಯರ್ಥಿಗಳು ಪಾಲ್ಗೊಳ್ಳುವರು. ಮೈಸೂರಿನ ಮೆಡಿವೇವ್ ಐವಿಎಫ್ ಅಂಡ್ ಫರ್ಟಿಲಿಟಿ ರಿಸರ್ಚ್ ಆಸ್ಪತ್ರೆಯ ಡಾ.ಶರತ್‌ಕುಮಾರ್, ಜೆಎಸ್‌ಎಸ್ ಆಸ್ಪತ್ರೆಯ ಮನೋವೈದ್ಯ ಶಿವಾನಂದ್ ಮನೋಹರ್ ಹಾಗೂ ಜಯದೇವ ಆಸ್ಪತ್ರೆಯ ಡಾ.ದೇವರಾಜ್ ಸಹಕಾರ ನೀಡುತ್ತಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರ ಸವಾಲುಗಳನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ನೋಡುವ ಸಂಶೋಧನೆ ಇದಾಗಿದೆ’ ಎನ್ನುತ್ತಾರೆ ಅವರು.
‘ಇದು ಸಂಶೋಧನೆಯಷ್ಟೇ ಅಲ್ಲ. ಸಮುದಾಯದ ಒಳಗೊಳ್ಳುವಿಕೆ, ಆರ್ಥಿಕ ಜೀವನೋಪಾಯ, ಪ್ರಾತಿನಿಧ್ಯ ಮತ್ತು ವೈಜ್ಞಾನಿಕ ಹಿನ್ನೆಲೆಯನ್ನು ತಿಳಿಸುವ ಉದ್ದೇಶದ್ದಾಗಿದೆ. ವೈವಿಧ್ಯತೆಯನ್ನು ಬೆಂಬಲಿಸುವುದು ಮತ್ತು ಶತಮಾನಗಳ ತಪ್ಪು ತಿಳಿವಳಿಕೆ ಹೋಗಲಾಡಿಸಲು ಪ್ರಯತ್ನಿಸುವ ಭಾಗವಾಗಿದೆ’ ಎನ್ನುತ್ತಾರೆ ಸಂಶೋಧನೆಗೆ ನೆರವಾಗಿರುವ ‘ಅನಿತಾ ಹ್ಯುಮಾನಿಟೇರಿಯನ್ ಫೌಂಡೇಷನ್’ನ ಅನಿತಾ ಪ್ರಸಾದ್.
ಸಂಶೋಧನೆಗೆ ಬೇಕಾಗುವ ₹ 1 ಕೋಟಿಯನ್ನು ನೀಡಲು ‘ಅನಿತಾ ಹ್ಯುಮಾನಿಟೇರಿಯನ್ ಫೌಂಡೇಷನ್’ ಒಪ್ಪಂದ ಮಾಡಿಕೊಂಡಿದೆಸುತ್ತೂರು ಎಸ್.ಮಾಲಿನಿ ಮುಖ್ಯಸ್ಥೆ ಜೆನೆಟಿಕ್ಸ್ ಅಂಡ್ ಜಿನೋಮಿಕ್ಸ್ ಅಧ್ಯಯನ ವಿಭಾಗ ಮೈಸೂರು ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.