ಮೈಸೂರು: ಸತತ ಮಳೆ ಹಾಗೂ ಹವಾಮಾನ ವೈಪರೀತ್ಯದ ಕಾರಣಕ್ಕೆ ಶುಂಠಿಗೆ ರೋಗಬಾಧೆ ವಿಪರೀತವಾಗಿದ್ದು, ಬೇಸರಗೊಂಡ ರೈತರು ಬೆಳೆ ಕೈ ಚೆಲ್ಲುತ್ತಿದ್ದಾರೆ.
ಮೈಸೂರು–ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶುಂಠಿಯನ್ನು ಬೆಳೆಯಲಾಗುತ್ತಿದೆ. ಎರಡು ವರ್ಷದ ಹಿಂದೆ ಬಂಪರ್ ಬೆಲೆ ಸಿಕ್ಕಿದ್ದ ಹಿನ್ನೆಲೆಯಲ್ಲಿ ಈ ಬಾರಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಭೂಮಿಯಲ್ಲಿ ಈ ವರ್ಷ ಶುಂಠಿ ಬಿತ್ತನೆ ಆಗಿದೆ. ಆದರೆ ಈ ಮೇನಿಂದ ಉತ್ತಮ ಮಳೆಯಾಗಿದ್ದು, ಮೋಡ ಕವಿದ ವಾತಾವರಣವೂ ಹೆಚ್ಚಾದ್ದರಿಂದ ಶುಂಠಿಯನ್ನು ವಿವಿಧ ಕೀಟಬಾಧೆಗಳು ಆವರಿಸಿದ್ದು, ಬಹುತೇಕ ಕಡೆಗಳಲ್ಲಿ ಬೆಳೆಯು ಹಳದಿ–ಕೆಂಪು ಬಣ್ಣಕ್ಕೆ ತಿರುಗುತ್ತಿದೆ.
ಸದ್ಯ ಮಾರುಕಟ್ಟೆಯಲ್ಲಿ ಹಸಿ ಶುಂಠಿ ಚೀಲಕ್ಕೆ ( 60 ಕೆ.ಜಿ) ₹ 1300–₹ 1400 ಬೆಲೆ ಇದ್ದು, ಕಳೆದ ವರ್ಷಗಳಿಗೆ ಹೋಲಿಸಿದರೆ ಬೆಲೆ ಅರ್ಧದಷ್ಟು ಕುಸಿದಿದೆ. ಈ ನಡುವೆ ಬೆಳೆಯೂ ಹಾಳಾಗುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಬೆಳೆ ಉಳಿಸಲು ರೈತರು ಹರಸಾಹಸ ಪಡುತ್ತಿದ್ದು, ಕೆಲವೆಡೆ ಅತಿಯಾದ ರಾಸಾಯನಿಕಗಳ ಪ್ರಯೋಗವು ನಡೆದಿದೆ. ಆದಾಗ್ಯೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ರೈತರು ಹೇಳುತ್ತಾರೆ.
‘ಅನೇಕ ಬಾರಿ ಔಷಧ ಸಿಂಪಡನೆ ನಡುವೆಯೂ ರೋಗ ಹೋಗಿಲ್ಲ. ಹೊಲ ಪೂರ್ತಿ ಕೆಂಪು ಬಣ್ಣಕ್ಕೆ ತಿರುಗಿದೆ. ಶುಂಠಿ ಕೀಳೋಣ ಎಂದರೆ ಇನ್ನೂ ಎಳೆಯದಾಗಿದ್ದು, ಕೊಳ್ಳುವವರು ಇಲ್ಲ. ಹಾಗೇ ಬಿಟ್ಟರೆ ಬೆಳೆ ಸಂಪೂರ್ಣ ಕೊಳೆಯುತ್ತದೆ. ಹಾಕಿದ ಹಣ ಸಹ ಸಿಗುವುದು ಸಹ ಅನುಮಾನ’ ಎಂದು ಮೈಸೂರು ತಾಲ್ಲೂಕಿನ ದಡದಕಲ್ಲಹಳ್ಳಿ ನಿವಾಸಿ ರಮೇಶ್ ಬೇಸರ ವ್ಯಕ್ತಪಡಿಸುತ್ತಾರೆ.
ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಎಲೆಚುಕ್ಕಿ ರೋಗ, ಕೆಂಪು ಕೊಳೆ ರೋಗದ ಜೊತೆಗೆ ಪೈರಿಕ್ಯುಲೆರಿಯಾ ಎಂಬ ಹೊಸ ಬಗೆಯ ರೋಗವೂ ಶುಂಠಿ ಬೆಳೆಯನ್ನು ಬಾಧಿಸುತ್ತಿದೆ.
‘ವಾತಾವರಣದಲ್ಲಿ ತೇವಾಂಶ ಹೆಚ್ಚಳ, ನಿರಂತರ ಮಳೆಯು ರೋಗಬಾಧೆ ಹೆಚ್ಚಳಕ್ಕೆ ಪ್ರಮುಖ ಕಾರಣ. ಇದಲ್ಲದೇ, ಒಂದೇ ಜಾಗದಲ್ಲಿ ನಿರಂತರವಾಗಿ ಒಂದೇ ಬೆಳೆ ಬೆಳೆಸುವುದು, ಮಣ್ಣಿನಲ್ಲಿ ಫಲವತ್ತತೆ ಇಲ್ಲದಿರುವುದು, ನಿರಂತರ ಔಷಧ ಬಳಕೆಯಿಂದ ಮಣ್ಣಿನಲ್ಲಿನ ಸಾವಯವ ಅಂಶದ ಕುಸಿತವೂ ರೋಗಬಾಧೆ ಉಲ್ಬಣಕ್ಕೆ ಕಾರಣ’ ಎನ್ನುತ್ತಾರೆ ಮೈಸೂರಿನ ಯಲಚಹಳ್ಳಿಯಲ್ಲಿರುವ ತೋಟಗಾರಿಕೆ ಕಾಲೇಜಿನ ಸಹ ಪ್ರಾಧ್ಯಾಪಕ ಜಿ. ಮಂಜುನಾಥ್.
ಅತಿಯಾದ ಮಳೆ ಮೋಡ ಕವಿದ ವಾತಾವರಣದ ಕಾರಣಕ್ಕೆ ಶುಂಠಿಗೆ ರೋಗಬಾಧೆ ಹೆಚ್ಚಿದೆ. ಗಿಡಗಳಲ್ಲಿ ರೋಗದ ಲಕ್ಷಣ ಕಾಣಿಸಿಕೊಂಡ ಕೂಡಲೇ ಔಷಧ ಸಿಂಪಡನೆ ಮಾಡುವುದು ಸೂಕ್ತಜಿ. ಮಂಜುನಾಥ್ ಸಹ ಪ್ರಾಧ್ಯಾಪಕ ತೋಟಗಾರಿಕೆ ಕಾಲೇಜು ಯಲಚಹಳ್ಳಿ
ಜಿಲ್ಲೆಯಲ್ಲಿ ಈ ವರ್ಷ 8 ಸಾವಿರ ಹೆಕ್ಟೇರ್‌ನಲ್ಲಿ ಶುಂಠಿ ಬೆಳೆದಿದ್ದು ರೋಗಬಾಧೆ ಹೆಚ್ಚಿರುವ ಕಡೆಗಳಲ್ಲಿ ವಿಜ್ಞಾನಿಗಳೊಂದಿಗೆ ಕ್ಷೇತ್ರ ಭೇಟಿ ನೀಡಿ ಔಷಧೋಪಚಾರದ ಸಲಹೆ ನೀಡುತ್ತಿದ್ದೇವೆ.ಮಂಜುನಾಥ್ ಅಂಗಡಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ
‘ರೋಗಬಾಧೆ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ಹಾಗೂ ವಿಜ್ಞಾನಿಗಳು ಶಿಫಾರಸು ಮಾಡಿರುವ ಔಷಧೋಪಚಾರಗಳನ್ನು ಕೈಗೊಳ್ಳಬೇಕು. ಈ ಅವಧಿಯಲ್ಲಿ ಕಂಬೈಡ್ ಔಷಧ ಸಿಂಪಡನೆ ಸೂಕ್ತ. ಸಾಫ್, ನೇಟಿವೊ ಮೊದಲಾದ ಮಾದರಿಯ ಶಿಲೀಂಧ್ರನಾಶಕ ಬಳಸಬೇಕು. ಗಿಡಗಳಲ್ಲಿ ರೋಗದ ಚಿಹ್ನೆ ಕಂಡ ಕೂಡಲೇ, ಮೋಡ ಮುಚ್ಚಿದ ವಾತಾವರಣ ಇದ್ದಾಗ ಸಿಂಪಡಿಸಿದರೆ ಹೆಚ್ಚು ಅನುಕೂಲ. ಜೊತೆಗೆ ಸುಡೊಮೊನಾಸ್ ಮೊದಲಾದ ಜೈವಿಕ ಸೂಕ್ಷ್ಮ ಔಷಧ ಬಳಸಿ ಮಣ್ಣಿನ ಆರೋಗ್ಯ ಹೆಚ್ಚಿಸಿಕೊಳ್ಳಬೇಕು’ ಎನ್ನುವುದು ಮಂಜುನಾಥ್ ಅವರ ಸಲಹೆ.
‘ಶುಂಠಿ ಬೆಳೆಗಾರರು ಹೊಲದಲ್ಲಿನ ಬಸಿಕಾಲುವೆ ವ್ಯವಸ್ಥೆಯನ್ನು (ಡ್ರೈನೇಜ್) ಉತ್ತಮಪಡಿಸಿಕೊಳ್ಳಬೇಕು. ಏರು ಮಡಿ ಕಟ್ಟಬೇಕು. ಮಣ್ಣಿನಲ್ಲಿ ಸಾವಯವ ಅಂಶ ಜಾಸ್ತಿ ಸೇರಿಸಿ, ಅದರ ಆರೋಗ್ಯ ಹೆಚ್ಚಿಸಬೇಕು. ಮಣ್ಣಿಗೆ ನೇರವಾಗಿ ಕಾಪರ್‌ಯುಕ್ತ ಔಷಧ ಸೇರಿಸುವುದದನ್ನು ಕಡಿಮೆ ಮಾಡಬೇಕು. ಪಾಸ್ಫರಿಕ್ ಆ್ಯಸಿಡ್, ಹ್ಯೂಮಿಕ್ ಆ್ಯಸಿಡ್, ಪೊಟ್ಯಾಷಿಯಂ ಹೆಚ್ಚು ಸೇರಿಸಬೇಕು. ಲಘು ಪೋಷಕಾಂಶಗಳನ್ನು ಆಗಾಗ್ಗೆ ಹೆಚ್ಚು ಸಿಂಪಡನೆ ಮಾಡಬೇಕು’ ಎಂಬುದು ವಿಜ್ಞಾನಿಗಳ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.