ADVERTISEMENT

ಎಚ್.ಡಿ.ಕೋಟೆ: ಗರ್ಲ್ ಐಕಾನ್ ಫೆಲೊಶಿಪ್‌ಗೆ 46 ಮಂದಿ

ಮಿಲಾನ್ ಸಂಸ್ಥೆಯಿಂದ ಹೆಣ್ಣು ಮಕ್ಕಳಿಗೆ ತರಬೇತಿ ಯೋಜನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 13:54 IST
Last Updated 28 ಜುಲೈ 2024, 13:54 IST
ಎಚ್.ಡಿ.ಕೋಟೆ ಪಟ್ಟಣದ ಹ್ಯಾಂಡ್ ಪೋಸ್ಟ್‌ನಲ್ಲಿ ಮಿಲಾನ್ ಸಂಸ್ಥೆಯಿಂದ ಈಚೆಗೆ ನಡೆದ ಗರ್ಲ್ ಐಕಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವತಿಯರು
ಎಚ್.ಡಿ.ಕೋಟೆ ಪಟ್ಟಣದ ಹ್ಯಾಂಡ್ ಪೋಸ್ಟ್‌ನಲ್ಲಿ ಮಿಲಾನ್ ಸಂಸ್ಥೆಯಿಂದ ಈಚೆಗೆ ನಡೆದ ಗರ್ಲ್ ಐಕಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವತಿಯರು   

ಎಚ್.ಡಿ.ಕೋಟೆ: ‘ಜಿಲ್ಲೆಯ ಸುಮಾರು 46 ಹೆಣ್ಣುಮಕ್ಕಳನ್ನು 2024- 25ನೇ ಸಾಲಿನ ‘ಗರ್ಲ್ ಐಕಾನ್ ಫೆಲೊಶಿಪ್’ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಗಿದೆ’ ಎಂದು ಯೋಜನೆ ಸಂಯೋಜಕಿ ರೂಪಾ ಮರಿಗೌಡ ತಿಳಿಸಿದರು.

ಪಟ್ಟಣದ ಹ್ಯಾಂಡ್ ಪೋಸ್ಟ್‌ನಲ್ಲಿ ಈಚೆಗೆ ಮಿಲಾನ್ ಸಂಸ್ಥೆಯು ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ನಡೆಸುವ ‘ಗರ್ಲ್ ಐಕಾನ್ ಕಾರ್ಯಕ್ರಮ’ಕ್ಕೆ ಆಯ್ಕೆಯಾದ ಹೆಣ್ಣುಮಕ್ಕಳಿಗೆ ಮೊಬೈಲ್‌, ಶಾಲಾಚೀಲ, ಪುಸ್ತಕ ಮತ್ತಿತರ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.

‘ಸಂಸ್ಥೆಯು ಹದಿಹರೆಯದ ಹೆಣ್ಣುಮಕ್ಕಳನ್ನು ಆಯ್ಕೆ ಮಾಡಿ ನಾಯಕತ್ವದ ತರಬೇತಿಯನ್ನು ನೀಡುತ್ತಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ವ್ಯಕ್ತಿತ್ವ ವಿಕಸನ, ಹದಿಹರೆಯದವರ ಆರೋಗ್ಯ ಮತ್ತು ಶಿಕ್ಷಣದ ಮಹತ್ವದ ಕುರಿತಾಗಿ ತರಬೇತಿಗಳನ್ನು ನೀಡುವ ಮೂಲಕ ಅವರು ತಮ್ಮ ಹಾಗೂ ತಮ್ಮಂಥ ಇತರ ಬಾಲಕಿಯರ ಬದುಕಿನಲ್ಲಿ ಬದಲಾವಣೆಯ ನಾಂದಿ ಹಾಡಲು ಉತ್ತೇಜಿಸಲಾಗುವುದು’ ಎಂದರು.

ADVERTISEMENT

‘ಬಾಲ್ಯವಿವಾಹ, ಬಾಲ ಕಾರ್ಮಿಕತೆ, ಹೆಣ್ಣು ಭ್ರೂಣ ಹತ್ಯೆ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು, ಜಾತಿಭೇದ, ವರದಕ್ಷಿಣೆ, ಮಕ್ಕಳ ಮೇಲಾಗುವ ದೌರ್ಜನ್ಯಗಳ ವಿರುದ್ಧ ಹೆಣ್ಣುಮಕ್ಕಳು ಧ್ವನಿ ಎತ್ತಲು ಪ್ರೇರೆಪಿಸಲಾಗುತ್ತದೆ’ ಎಂದರು.

‘ಕರ್ನಾಟಕದಲ್ಲಿ ಮಿಲಾನ್ ಸಂಸ್ಥೆಯು ಪ್ರಸ್ತುತ ಸುಮಾರು 1,500ಕ್ಕೂ ಹೆಚ್ಚು ಬಾಲಕಿಯರನ್ನು ‘ಗರ್ಲ್ ಐಕಾನ್’ ಮತ್ತು ‘ಗರ್ಲ್ ಐಕಾನ್ ಸ್ವಯಂಸೇವಕ’ರನ್ನು ಹೊಂದಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿಯೂ ಸಂಸ್ಥೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲಕ್ಷ್ಮಿ ಪವಾರ, ಯೋಜನೆಯ ಸಹಾಯಕಿ ರಶ್ಮಿ ಬಸವರಾಜ್, ಸಹನಾ, ರಕ್ಷಿತಾ ಉಮೇಶ್, ದೀಕ್ಷಿತಾ, ಸಿಂಧೂ, ಸುಚಿತ್ರ, ರಕ್ಷಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.