
ಹುಣಸೂರು: ಸರ್ಕಾರಿ ಶಾಲೆಗಳ ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿಕ್ಷಕರನ್ನು ಹುದ್ದೆಗೆ ನಿಯೋಜಿಸುತ್ತಿದ್ದು, ಗ್ರಾಮೀಣ ಪ್ರದೇಶದ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಮರಳಯ್ಯನಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್ ಮನವಿ ಮಾಡಿದರು.
ಮರಳಯ್ಯನಕೊಪ್ಪಲು ಗ್ರಾಮದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬನ್ನಿಕುಪ್ಪೆ ಕ್ಲಸ್ಟರ್ ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯ ಸೇರಿದಂತೆ ಉತ್ತಮ ಶಿಕ್ಷಕರನ್ನು ನಿಯೋಜಿಸಿ ಪಾಠ ಮತ್ತು ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಿ ಕಲಿಕೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುತ್ತಿದ್ದು, ಇಂಗ್ಲಿಷ್ ವ್ಯಾಮೋಹದಿಂದ ಖಾಸಗಿ ಶಾಲೆಗೆ ಪೋಷಕರು ಮಕ್ಕಳನ್ನು ದಾಖಲಿಸುತ್ತಿರುವುದು ವಿಷಾದನೀಯ’ ಎಂದರು.
‘ಮಕ್ಕಳ ಕಲಿಕೆಗೆ ಪೋಷಕರ ಪಾತ್ರ ಹೆಚ್ಚಾಗಿದ್ದು, ಮಕ್ಕಳು ಓದುವ ಸಮಯದಲ್ಲಿ ಟಿವಿ ಅಥವಾ ಮೊಬೈಲ್‌ನಲ್ಲಿ ತೊಡಗಿಸಿಕೊಳ್ಳದೆ ಮಕ್ಕಳೊಂದಿಗೆ ಕುಳಿತು ಅವರನ್ನು ಓದಿಸುವ ಕೆಲಸ ಆಗಬೇಕು. ಶಾಲೆಯಲ್ಲಿ ಕಲಿಸುವ ಪಠ್ಯವನ್ನು ಮನೆಯಲ್ಲಿ ಕಟ್ಟು ನಿಟ್ಟಿನಿಂದ ಅಭ್ಯಾಸಿಸುವ ಕೆಲಸ ಆಗಬೇಕಾಗಿದೆ’ ಎಂದರು.
ಕಲಿಕಾ ಹಬ್ಬದಲ್ಲಿ 11 ಶಾಲೆಗಳ ವಿದ್ಯಾರ್ಥಿಗಳಿಗೆ ಕ್ರೀಡೆ, ರಸಪ್ರಶ್ನೆ ಓದುವ ಕೌಶಲ ಒಳಗೊಂಡಂತೆ ಹಲವು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜು, ಶಿಕ್ಷಣ ಇಲಾಖೆ ಅಧಿಕಾರಿ ಕವಿತಾ, ಮುಖ್ಯ ಶಿಕ್ಷಕ ವೆಂಕಟೇಶಪ್ಪ, ಫ್ಯಾಕ್ಸ್ ನಿರ್ದೇಶಕ ಚೆಲುವರಾಜು, ಯೋಗೇಶ್, ಶಿವನಗೌಡ, ಶಿವಣ್ಣ, ಬಸವಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.