ADVERTISEMENT

ಗೌರಿ, ಗಣೇಶ ಹಬ್ಬಕ್ಕೆ ತಯಾರಿ ಆರಂಭ

ಹೂವಿನ ದರ ಏರಿಕೆ, ಖರೀದಿಯಲ್ಲಿ ತೊಡಗಿದ ಜನರು

ಕೆ.ಎಸ್.ಗಿರೀಶ್
Published 20 ಆಗಸ್ಟ್ 2020, 6:25 IST
Last Updated 20 ಆಗಸ್ಟ್ 2020, 6:25 IST
ಮೈಸೂರಿನ ಜೆ.ಕೆ.ಮೈದಾನದಲ್ಲಿ ಬುಧವಾರ ಗಣೇಶ ಚತುರ್ಥಿಯ ಅಂಗವಾಗಿ ಹೂವಿನ ವ್ಯಾಪಾರ ನಡೆಯಿತು‌‌
ಮೈಸೂರಿನ ಜೆ.ಕೆ.ಮೈದಾನದಲ್ಲಿ ಬುಧವಾರ ಗಣೇಶ ಚತುರ್ಥಿಯ ಅಂಗವಾಗಿ ಹೂವಿನ ವ್ಯಾಪಾರ ನಡೆಯಿತು‌‌   

ಮೈಸೂರು: ಗೌರಿ ಗಣೇಶ ಹಬ್ಬಕ್ಕೆ ಖರೀದಿ ಭರಾಟೆ ಬುಧವಾರದಿಂದಲೇ ಆರಂಭವಾಗಿದ್ದರೂ ಮಾರುಕಟ್ಟೆ ಕಳೆದ ವರ್ಷದಷ್ಟು ಕಳೆಗಟ್ಟಿಲ್ಲ. ನಿರೀಕ್ಷೆಯಷ್ಟು ಗ್ರಾಹಕರು ಬಾರದೇ ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮಾಯವಾಗಿದೆ.

ಹೂವಿನ ಮಾರುಕಟ್ಟೆಯನ್ನು ದೇವರಾಜ ಮಾರುಕಟ್ಟೆಯಿಂದ ಜೆ.ಕೆ.ಮೈದಾನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಿರುವುದರಿಂದ ವ್ಯಾಪಾರಕ್ಕೆ ಹೆಚ್ಚಿನ ಪ್ರಯೋಜನವಾಗಿಲ್ಲ ಎಂದು ಬಹುತೇಕ ಹೂವಿನ ವ್ಯಾಪಾರಿಗಳು ಹೇಳುತ್ತಾರೆ. ಇತ್ತ ದೇವರಾಜ ಮಾರುಕಟ್ಟೆಯ ಒಂದು ಭಾಗ ಭಣಗುಡಲಾರಂಭಿಸಿದೆ. ಹೂವಿಗಾಗಿ ಬರುವ ಗ್ರಾಹಕರನ್ನೇ ನೆಚ್ಚಿಕೊಂಡಿದ್ದ ಪೂಜಾ ಪರಿಕರಗಳನ್ನು ಮಾರಾಟ ಮಾಡುವ ಹಲವು ಮಳಿಗೆಗಳಲ್ಲಿ ವ್ಯಾಪಾರ ನೀರಸವಾಗಿದೆ.

ಈ ಕುರಿತು ‘ಪ್ರಜಾವಾಣಿ’‍ಗೆ ಪ್ರತಿಕ್ರಿಯಿಸಿದ ಎಂಟಿಸಿ ಮಳಿಗೆಯ ಮಾಲೀಕ ನರೇಂದ್ರಕುಮಾರ್, ‘ಹೂವಿನ ಮಾರುಕಟ್ಟೆಯ ಸ್ಥಳಾಂತರದಿಂದ ವ್ಯಾಪಾರಕ್ಕೆ ಹೆಚ್ಚಿನ ಪ್ರಯೋಜನವಾಗಿಲ್ಲ. ಕಳೆದ ವರ್ಷದಷ್ಟು ಪ್ರಮಾಣದಲ್ಲಿ ಜನರು ಖರೀದಿಗೆ ಬಂದಿಲ್ಲ. ಹೀಗಾಗಿ, ಹೂವಿನ ಸಗಟು ದರಗಳೂ ನಿರೀಕ್ಷೆಯಂತೆ ದುಬಾರಿಯಾಗಿಲ್ಲ’ ಎಂದು ಹೇಳಿದರು.‌

ಮಲ್ಲಿಗೆ ಕೆ.ಜಿಗೆ ₹180ರಿಂದ ₹280ಕ್ಕೆ, ಮರಳೆ ₹160ರಿಂದ ₹240, ಕನಕಾಂಬರ ₹800ರಿಂದ ₹1,000, ಗುಲಾಬಿ ₹150ರಿಂದ ₹200 ಹಾಗೂ ಬಿಡಿ ಸೇವಂತಿಗೆ ₹80ರಿಂದ ₹120ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.‌

ಗಾಯತ್ರಿ ಫ್ಲವರ್‌ ಸ್ಟಾಲ್‌ನ ಮಾಲೀಕ ಮಂಜುನಾಥ್ ಪ್ರತಿಕ್ರಿಯಿಸಿ, ಅಮಾವಾಸ್ಯೆವಾಗಿರುವುದರಿಂದ ಹೆಚ್ಚಿನ ಖರೀದಿ ಪ್ರಕ್ರಿಯೆ ಬುಧವಾರ ಹೆಚ್ಚಿನ ವ್ಯಾಪಾರ ನಡೆದಿಲ್ಲ. ಗುರುವಾರ ವ್ಯಾಪಾರ ಚುರುಕುಗೊಳ್ಳುವ ನಿರೀಕ್ಷೆ ಇದೆ. ಕೋವಿಡ್‌ ಕಾರಣಕ್ಕೆ ನಾವಿಲ್ಲಿ ಬರಬೇಕಾಗಿದೆ. ವ್ಯಾಪಾರಕ್ಕೆ ದೇವರಾಜ ಮಾರುಕಟ್ಟೆಯೇ ಸರಿ’ ಎಂದು ತಿಳಿಸಿದರು.

ಗಣಪತಿ ಕೂರಿಸಲು ಅಗತ್ಯವಾಗಿ ಬೇಕಾದ ತೆಂಗಿನಗರಿಗಳ ಮಾರಾಟವೂ ಕಳೆಗುಂದಿದೆ. ಇದರ ಜತೆಗೆ, ಬಾಳೆಕಂದು, ಮಾವಿನಸೊಪ್ಪು, ಸುವಾಸಿತ ಪತ್ರ ಎಲೆಗಳ ಖರೀದಿಯೂ ನೀರಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.