ADVERTISEMENT

ಮೈಸೂರು: ‘ಜನಜಾಗೃತಿ ಯಾತ್ರೆ’ಯ ಸುತ್ತೂರು ಜಾತ್ರೆ ಜನವರಿ 26ರಿಂದ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 12:21 IST
Last Updated 23 ಜನವರಿ 2025, 12:21 IST
<div class="paragraphs"><p>ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿರುವ ಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃಗದ್ದುಗೆ</p></div>

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿರುವ ಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃಗದ್ದುಗೆ

   

ಮೈಸೂರು: ‘ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವವನ್ನು ಜ.26ರಿಂದ 31ರವರೆಗೆ ‘ಜನಜಾಗೃತಿ ಯಾತ್ರೆ’ಯನ್ನಾಗಿ ನಡೆಸಲಾಗುವುದು’ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ತಿಳಿಸಿದರು.

‘ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಹಲವು ಸೇವಾ ಚಟುವಟಿಕೆಗಳು ನಡೆಯಲಿವೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘26ರಂದು ಬೆಳಿಗ್ಗೆ ಗಣರಾಜ್ಯೋತ್ಸವ ನೆರವೇರಲಿದೆ. ಅಂದು ಸಂಜೆ 4ಕ್ಕೆ ವಸ್ತುಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣೆ ಶಿಬಿರ, ದೋಣಿವಿಹಾರವನ್ನು ಕ್ರಮವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌, ಸಂಸದ ಡಾ.ಕೆ. ಸುಧಾಕರ್, ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಉದ್ಘಾಟಿಸುವರು. ಸಂಸದ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸುವರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಆಲಗೂರು–ಬಬಲೇಶ್ವರ ಪಂಚಮಸಾಲಿ ಪೀಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’ ಎಂದು ತಿಳಿಸಿದರು.

‘27ರಂದು ಸಾಮೂಹಿಕ ವಿವಾಹ, ಹಾಲರವಿ ಉತ್ಸವ, 28ರಂದು ರಥೋತ್ಸವ, ವೀರಭದ್ರೇಶ್ವರ ಕೊಂಡೋತ್ಸವ, 29ರಂದು ಮಹದೇಶ್ವರ ಕೊಂಡೋತ್ಸವ, ಲಕ್ಷದೀಪೋತ್ಸವ, 30ರಂದು ತೆಪ್ಪೋತ್ಸವ ಹಾಗೂ 31ರಂದು ಅನ್ನಬ್ರಹೋತ್ಸವ ನಡೆಯಲಿದೆ. ವೈವಿಧ್ಯಮಯ ಸಾಂಸ್ಕೃತಿಕ, ಶೈಕಣಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಹಲವು ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಪಾಲ್ಗೊಳ್ಳುವರು’ ಎಂದು ವಿವರ ನೀಡಿದರು.

‘ಭಜನಾ ಮೇಳ, ಕೃಷಿ ವಿಚಾರಸಂಕಿರಣ, ಚಿತ್ರಸಂತೆ, ಕುಸ್ತಿ ಟೂರ್ನಿ, ದೇಸಿ ಆಟಗಳು, ದನಗಳ ಪರಿಷೆ, ಕಪಿಲಾರತಿ, ನಾಟಕೋತ್ಸವ, ಕೃಷಿ ಪ್ರಾತ್ಯಕ್ಷಿಕೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 20 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ದಿನದ ಮೂರೂ ಹೊತ್ತು ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. 31ರಂದು ಬೆಳಿಗ್ಗೆ 10.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.