
ಮೈಸೂರು: ‘ಉದ್ದೇಶಿತ ಗ್ರೇಟರ್ ಮೈಸೂರು ನೀಲನಕ್ಷೆಯು ಅಮೀಬಾ ಸೂಕ್ಷ್ಮಜೀವಿಯಂತಿದ್ದು, ಇಡೀ ಯೋಜನೆ ಅವೈಜ್ಞಾನಿಕವಾಗಿದೆ’ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ದೂರಿದರು.
‘ಯೋಜನೆಯನ್ನು ಸರಿಪಡಿಸಿ, ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
‘ನಗರದ ಸುತ್ತಲಿನ ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳನ್ನು ನಗರದ ವ್ಯಾಪ್ತಿಗೆ ವಿಲೀನ ಮಾಡಿಕೊಳ್ಳಲಾಗುತ್ತಿದೆ. ಆದರೆ, ಇದು ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಒಂದೆಡೆ ನಗರದಿಂದ 2 ಕಿ.ಮೀ.ವರೆಗೆ, ಕೆಲವೆಡೆ ಕಡೆ 22 ಕಿ.ಮೀಟರ್‌ನಷ್ಟು ವ್ಯಾಪ್ತಿಯನ್ನು ಹೆಚ್ಚಿಸಿರುವುದು ಸರಿಯೇ? ಹೀಗೆ ಮಾಡಲು ಕಾರಣವೇನು? ಅಧಿಕಾರಿಗಳು ಒತ್ತಡದಿಂದ ಹೀಗೆ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಮೈಸೂರು ನಗರವನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಯೋಜನೆ ರೂಪಿಸಬೇಕು. ನಗರದ 365 ಡಿಗ್ರಿ ಸುತ್ತಳತೆಯಲ್ಲೂ ಇದು ಜಾರಿಯಾಗಬೇಕು. ಅದಕ್ಕೂ ಮುನ್ನ ಅಭಿವೃದ್ಧಿಗೆ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.
ನ್ಯೂನತೆ ಸರಿಪಡಿಸಿ
‘ಗ್ರೇಟರ್ ಮೈಸೂರು ಅನುಷ್ಠಾನಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಈಗ ಸಿದ್ಧಪಡಿಸಿರುವ ಯೋಜನೆಯಲ್ಲಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ಕೇವಲ ರಿಯಲ್ ಎಸ್ಟೇಟ್‌ಗೆ ಒತ್ತು ಕೊಟ್ಟರೆ ಸಾಲದು. ಅಭಿವೃದ್ಧಿಗೂ ಆದ್ಯತೆ ಕೊಡಬೇಕು’ ಎಂದರು.
‘ಗ್ರೇಟರ್ ಮೈಸೂರು ರಚನೆಗೆ ಎರಡು ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ಪಾಲಿಕೆ ಚುನಾವಣೆ ನಡೆಯಬಾರದು ಎಂಬ ಉದ್ದೇಶವಿದೆಯೇ? ಚುನಾವಣೆಗೆ ಭಯವೇಕೆ? ಗ್ರೇಟರ್ ಮೈಸೂರು ಮಾಡಲು ಸಾವಿರಾರು ಕೋಟಿ ರೂಪಾಯಿ ಬೇಕು. ಆ ಹಣವನ್ನು ಮೊದಲು ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.
‘2022-23ನೇ ಸಾಲಿನ ಸಿಎಂ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ 57 ಹಳ್ಳಿಗಳ ರಸ್ತೆ ಕಾಮಗಾರಿಗಾಗಿ ₹ 10 ಕೋಟಿಯನ್ನು ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಬಿಡುಗಡೆ ಮಾಡಲಾಗಿತ್ತು. ಭೂಮಿಪೂಜೆಯನ್ನೂ ನಡೆಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕೆಲ ಕಾಮಗಾರಿಗಳನ್ನು ರದ್ದುಪಡಿಸಿ ಮತ್ತೊಮ್ಮೆ ಭೂಮಿಪೂಜೆಯನ್ನು ಮುಖ್ಯಮಂತ್ರಿ ಮತ್ತು ಶಾಸಕರು ಸ್ಥಳೀಯವಾಗಿ ಮಾಡಿದ್ದಾರೆ’ ಎಂದು ಆರೋಪಿಸಿದರು.
ನಂದಿನಿ ತುಪ್ಪದ ದರವನ್ನು ಪ್ರತಿ ಕೆಜಿಗೆ ₹ 90 ಹೆಚ್ಚಿಸಲಾಗಿದೆ. ಹಾಗೆಯೇ ರೈತರಿಂದ ಖರೀದಿಸುವ ಹಾಲಿನ ದರವನ್ನೂ ಹೆಚ್ಚಿಸಬೇಕಲ್ಲವೇ?– ಸಾ.ರಾ. ಮಹೇಶ್, ಮಾಜಿ ಸಚಿವ
‘ಪರಂಪರೆ ಧಕ್ಕೆಯಾಗದಂತಿರಲಿ’
‘ವಾಹನ ದಟ್ಟಣೆ ಕಡಿಮೆ ಮಾಡಲು ನಗರದ ಕೆಲವೆಡೆ ಫ್ಲೈಓವರ್ ನಿರ್ಮಾಣ ಅಗತ್ಯವಿದೆ. ಆದರೆ ಯಾವ ಆಯಾಮ ಮತ್ತು ದೃಷ್ಟಿಕೋನ ಇಟ್ಟುಕೊಂಡು ಸಂಸದ ಯದುವೀರ್ ಅವರು ಮೇಲ್ಸೇತುವೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆಯೋ ಗೊತ್ತಿಲ್ಲ. ಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗದಂತೆ ಈ ಯೋಜನೆ ಜಾರಿಗೊಳಿಸಿದರೆ ಯಾವುದೇ ಅಭ್ಯಂತರ ಇಲ್ಲ’ ಎಂದು ಮಹೇಶ್ ಪ್ರತಿಕ್ರಿಯಿಸಿದರು.
ಉಳಿಯುವುದು ಈ ದಾಖಲೆಯಷ್ಟೆ...
‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 2013ರಿಂದ 2018ರವರೆಗೆ ಉತ್ತಮ ಆಡಳಿತ ನೀಡಿದ್ದಾರೆ. ಈಗ ರಾಜಿ ಮಾಡಿಕೊಂಡಿದ್ದಾರೆ. ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ಅತಿ ಹೆಚ್ಚು ಸಾಲ ಮಾಡಿದ ವಿಶೇಷ ವಿಮಾನವನ್ನು ಹೆಚ್ಚು ಬಳಸಿದ ಮುಖ್ಯಮಂತ್ರಿ ಎಂಬುದಷ್ಟೇ ದಾಖಲೆಯಲ್ಲಿ ಉಳಿಯಲಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.