ಮೈಸೂರು: ಕಳೆದೊಂದು ದಶಕದಲ್ಲಿ ಜಿಲ್ಲೆಯ ಅಂತರ್ಜಲ ಮಟ್ಟ ಸುಧಾರಣೆ ಕಂಡಿದ್ದು, ಅಂತರ್ಜಲ ಬಳಕೆಯಲ್ಲಿಯೂ ಮೈಸೂರು ‘ಸುರಕ್ಷತಾ ವಲಯ’ದಲ್ಲಿದೆ.
ಜಿಲ್ಲೆಯಲ್ಲಿ ಅಂತರ್ಜಲ ಬಳಕೆ ಪ್ರಮಾಣವು ಪ್ರಸ್ತುತ ಶೇ 55.3ರಷ್ಟಿದೆ. ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯ ಸ್ಥಿತಿ ಉತ್ತಮವಾಗಿದೆ ಎನ್ನುತ್ತವೆ ಅಂಕಿ–ಅಂಶಗಳು. ಅಂತರ್ಜಲ ನಿರ್ದೇಶನಾಲಯವು ಅಂತರ್ಜಲ ಬಳಕೆಯ ಪ್ರಮಾಣದ ಮೇಲೆ ಜಿಲ್ಲೆಗಳನ್ನು ವಲಯವಾರು ವಿಂಗಡಿಸಿದೆ. ಶೇ 70ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಅಂತರ್ಜಲ ಬಳಕೆ ಮಾಡುವ ಜಿಲ್ಲೆಗಳು ಸುರಕ್ಷತಾ ವಲಯದಲ್ಲಿದ್ದು, ಇದರಲ್ಲಿ ಮೈಸೂರು ಸಹ ಸೇರಿದೆ.
ಮಟ್ಟ ಉತ್ತಮ: ಕಳೆದ ದಶಕಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು ಸುಧಾರಣೆ ಕಂಡಿದೆ. 2015ರಲ್ಲಿ ಈ ಪ್ರಮಾಣವು 10.50 ಮೀಟರ್‌ಗಳಾಗಿದ್ದು, ಪ್ರಸ್ತುತ 10.23 ಮೀಟರ್‌ಗಳಷ್ಟಿದೆ. ಈಚಿನ ವರ್ಷಗಳಲ್ಲಿನ ಉತ್ತಮ ವರ್ಷಧಾರೆಯಿಂದಾಗಿ ಭೂಮಿಯೊಳಗಿನ ನೀರಿನ ಮಟ್ಟವೂ ಹೆಚ್ಚಾಗಿದೆ. ಮೈಸೂರು ಜಿಲ್ಲೆ ಉತ್ತಮ ನದಿ ಮೂಲಗಳ ಜೊತೆಗೆ ಅಂತರ್ಜಲ ಸಂಪತ್ತನ್ನೂ ಹೊಂದಿದ್ದು, ಮುಂದಿನ 25 ವರ್ಷಗಳಿಗೆ ನೀರಿನ ಆತಂಕ ಇರದು. ಆದರೆ, ಮಿತಿಮೀರಿ ಬಳಕೆಯಾದಲ್ಲಿ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಭೂವಿಜ್ಞಾನಿಗಳು.
ಎಲ್ಲೆಲ್ಲಿ ಉತ್ತಮ: ಜಿಲ್ಲೆಯಲ್ಲಿ ನಂಜನಗೂಡು ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟವು ಅತ್ಯುತ್ತಮವಾಗಿದೆ. ಇಲ್ಲಿ ಪ್ರಸ್ತುತ ಪ್ರಮಾಣವು ಸರಾಸರಿ 6.50 ಮೀಟರ್‌ನಷ್ಟಿದೆ. ನಂತರದಲ್ಲಿ ತಿ. ನರಸೀಪುರ, ಸಾಲಿಗ್ರಾಮ ಮತ್ತು ಮೈಸೂರು ತಾಲ್ಲೂಕುಗಳಿವೆ.
ಎಲ್ಲೆಲ್ಲಿ ಅಪಾಯ: ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಪ್ರಸ್ತುತ ಅಂತರ್ಜಲ ಮಟ್ಟವು ಪಾತಾಳಕ್ಕೆ ಇಳಿಯುತ್ತಿದ್ದು, ಸರಾಸರಿ 15.19 ಮೀಟರ್‌ಗಳಷ್ಟಿದೆ. 500–600 ಅಡಿಗಳವರೆಗೂ ಕೊಳವೆಬಾವಿ ಕೊರೆದರೂ ಕೆಲವೆಡೆ ನೀರಿನ ಲಭ್ಯತೆ ಕಡಿಮೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಹುಣಸೂರು, ಸರಗೂರು ಹಾಗೂ ಕೆ.ಆರ್. ನಗರ ತಾಲ್ಲೂಕುಗಳೂ ಜಿಲ್ಲೆಯ ಸರಾಸರಿ ಮಟ್ಟಕ್ಕಿಂತ ಹೆಚ್ಚು ಆಳಕ್ಕೆ ಇಳಿಯುತ್ತಿದೆ.
ಅಳೆಯುವುದು ಹೇಗೆ?: ‘ಅಂತರ್ಜಲ ಇಲಾಖೆಯು ನೀರಿನ ಮಟ್ಟದ ಮಾಪನಕ್ಕೆಂದೇ ಜಿಲ್ಲೆಯ 9 ತಾಲ್ಲೂಕುಗಳಲ್ಲಿ ಒಟ್ಟು 60 ಕೊಳವೆಬಾವಿಗಳನ್ನು ಹೊಂದಿದೆ. ಪ್ರತಿ ತಿಂಗಳ ಕೊನೆಯ ವಾರದಲ್ಲಿ ಇವುಗಳಲ್ಲಿನ ನೀರಿನ ಮಟ್ಟವನ್ನು ಅಳೆಯಲಾಗುತ್ತದೆ. ಹೀಗೆ ಸಂಗ್ರಹಿಸಲಾದ ದತ್ತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಿ ಮಾಹಿತಿ ಸಿದ್ಧಪಡಿಸಲಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಪ್ರಸನ್ನಕುಮಾರ್.
ಈಚಿನ ವರ್ಷಗಳಲ್ಲಿ ಜಿಲ್ಲೆಯ ಅಂತರ್ಜಲ ಮಟ್ಟವು ಸುಧಾರಣೆ ಕಂಡಿದೆ. ನೀರಿನ ಬಳಕೆಯಲ್ಲಿ ಮೈಸೂರು ‘ಸುರಕ್ಷತಾ ವಲಯ’ದಲ್ಲಿ ಇದೆಪ್ರಸನ್ನಕುಮಾರ್ ಹಿರಿಯ ಭೂವಿಜ್ಞಾನಿ ಜಿಲ್ಲಾ ಅಂತರ್ಜಲ ಕಚೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.