ADVERTISEMENT

ಸಿಎಂ ಬೊಮ್ಮಾಯಿ ಹೊಗಳಿ, ಕಾಂಗ್ರೆಸ್‌ ಟೀಕಿಸಿದ ಜಿಟಿಡಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 13:18 IST
Last Updated 11 ಆಗಸ್ಟ್ 2022, 13:18 IST
ಜಿಟಿಡಿ
ಜಿಟಿಡಿ   

ಮೈಸೂರು: ‘ದೇಶದಲ್ಲಿ ಕಾಂಗ್ರೆಸ್‌ ಸ್ಥಾಪನೆಗೂ ಹಿಂದಿನಿಂದಲೇ ಸ್ವಾತಂತ್ರ್ಯ ಚಳಚಳಿ ಆರಂಭವಾಗಿತ್ತು. ಆ ಹೋರಾಟ ನಡೆದದ್ದು ನಮ್ಮಿಂದಲೇ ಎಂದು ಯಾರೂ ಹೇಳಿಕೊಳ್ಳಬಾರದು. ನಾವೆಲ್ಲರೂ ಸ್ವಾತಂತ್ರ್ಯದ ಫಲವನ್ನು ಉಣ್ಣುತ್ತಿದ್ದೇವೆಯೇ ಹೊರತು ಜೈಲಿಗೆ ಹೋಗಿ ಬಂದವರಲ್ಲ...’

– ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದು ಹೀಗೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ವಿ.ವಿಯಿಂದ ಗುರುವಾರ ಆಯೋಜಿಸಿದ್ದ ಯುವಜನ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ನಾವು ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ನಿಜವಾಗಿಯೂ ಹೋರಾಡಿದವರ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಸ್ವಾತಂತ್ರ್ಯ ಯೋಧರ ಬಗ್ಗೆ ಮಾತನಾಡುವಾಗ ಗೌರವವಿರಬೇಕು. ಚಳವಳಿಯಲ್ಲಿದ್ದ ವೀರ ಸಾವರ್ಕರ್ ಹಲವು ವರ್ಷ ಜೈಲಿನಲ್ಲಿದ್ದರು. ಮೊದಲು ಅವರ ಬಗ್ಗೆ ಓದಿ ತಿಳಿದುಕೊಳ್ಳಬೇಕು. ಅಂಥವರನ್ನು ಟೀಕಿಸಬಾರದು’ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೊಗಳಿದ ಶಾಸಕ, ‘ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರನ್ನು ಅಧಿಕಾರದಿಂದ ಇಳಿಸಲು ಯಾರಿಗೂ ಆಗದು. ಹಾಗೇನಾದರೂ ಇದ್ದರೆ ಇಳಿಸುವುದಾಗಿ ಹೇಳಬೇಕಾದವರು ಯಾರು?’ ಎಂದು ಕಾಂಗ್ರೆಸ್‌ ನಾಯಕರನ್ನು ಪರೋಕ್ಷವಾಗಿ ಟೀಕಿಸಿದರು.

‘ಒಮ್ಮೆಯೂ ದರ್ಪ ತೋರಿಲ್ಲ. ಜನರ ಸೇವಕ ಎಂದು ಹೇಳಿ ಅದರಂತೆಯೇ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ಕುಟುಂಬ ರಾಜಕಾರಣದಿಂದ ಮೇಲೆ ಬಂದವರಲ್ಲ. ಸ್ವಂತವಾಗಿ ಬೆಳೆದವರು. ತಂದೆಯಂತೆಯೇ ಕುಟುಂಬವನ್ನು ರಾಜಕೀಯದಿಂದ ದೂರವಿಟ್ಟಿದ್ದಾರೆ’ ಎಂದು ಗುಣಗಾಣ ಮಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ, ಜನರು ಮನೆಗಳ ಮೇಲೆ ತಿರಂಗಾ ಹಾರಿಸಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.