ADVERTISEMENT

ಕಂದಾಯ ವಸೂಲಿಗೆ ಕಾರ್ಯಪಡೆ ರಚಿಸಿ: ಪ.ಪಂ, ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಜಿಟಿಡಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 5:19 IST
Last Updated 4 ಜನವರಿ 2026, 5:19 IST
ಮೈಸೂರಿನ ನಗರಪಾಲಿಕೆ ವಲಯ ಕಚೇರಿ–3ರಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿದರು
ಮೈಸೂರಿನ ನಗರಪಾಲಿಕೆ ವಲಯ ಕಚೇರಿ–3ರಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿದರು   

ಮೈಸೂರು: ‘ಗ್ರೇಡ್-1 ಮೈಸೂರು ಮಹಾನಗರಪಾಲಿಕೆ ಅಧಿಸೂಚನೆ ಯಾವುದೇ ಕ್ಷಣದಲ್ಲಿ ಹೊರಬೀಳುವ ಸಾಧ್ಯತೆ ಇದ್ದು, ನಗರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳು, ಬಡಾವಣೆಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಒಂದು ತಿಂಗಳಲ್ಲಿ ಸಿದ್ಧವಿಟ್ಟುಕೊಳ್ಳಬೇಕು. ಕಂದಾಯ ವಸೂಲಿಗೆ ಪ್ರತ್ಯೇಕ ಕಾರ್ಯಪಡೆ ರಚಿಸಬೇಕು’ ಎಂದು ಶಾಸಕ ಜಿ.ಟಿ. ದೇವೇಗೌಡ ಸೂಚಿಸಿದರು.

ಇಲ್ಲಿನ ನಗರಪಾಲಿಕೆ ವಲಯ ಕಚೇರಿ–3ರಲ್ಲಿ ಶನಿವಾರ ನಡೆದ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಪಾಲಿಕೆ ವಲಯ ಕಚೇರಿ, ಪಟ್ಟಣ ಪಂಚಾಯಿತಿ, ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯಿತಿಗಳಿಂದ ಪಟ್ಟಣ ಪಂಚಾಯಿತಿ, ನಗರಸಭೆಯಾಗಿ ಮೇಲ್ದರ್ಜೇಗೇರಿಸಿದ ಬಳಿಕ ಸಾಕಷ್ಟು ಸಮಸ್ಯೆಗಳು ಸುಧಾರಣೆಯಾಗಿವೆ. ಆರಂಭದಲ್ಲಿ ಖಾತೆ ಕೊಡುತ್ತಿಲ್ಲ, ದುಡ್ಡು ಜಾಸ್ತಿ ಕೇಳುತ್ತಿದ್ದಾರೆ, ಕಂದಾಯ ದ್ವಿಗುಣ ಮಾಡಲಾಗಿದೆ, ಕಚೇರಿಗೆ ಅಲೆದಾಡಿಸಲಾಗುತ್ತಿದೆ ಎನ್ನುವ ದೂರುಗಳು ಬರುತ್ತಿದ್ದವು. ಈಗ ಸಾಕಷ್ಟು ಸುಧಾರಿಸಿ ದೂರುಗಳು ಕಡಿಮೆಯಾಗಿವೆ’ ಎಂದರು.

ADVERTISEMENT

‘ಗ್ರೇಡ್-1 ಮೈಸೂರು ನಗರಪಾಲಿಕೆಯನ್ನಾಗಿ ಮಾಡಲು ತೀರ್ಮಾನ ಮಾಡಿರುವುದರಿಂದ ಸರ್ಕಾರ ಆದಷ್ಟು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಬಹುದು’ ಎಂದು ಹೇಳಿದರು.

ಸಾಧ್ಯವಾಗುತ್ತದೆ: 

‘ಪಟ್ಟಣ ಪಂಚಾಯಿತಿ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ತಿಗಳು, ಮನೆಗಳು, ಗ್ರಾಮಗಳು, ಬಡಾವಣೆಗಳು, ಶಾಲೆಗಳು, ಅಂಗನವಾಡಿ ಕಟ್ಟಡಗಳು, ಆಸ್ಪತ್ರೆಗಳು ಎಷ್ಟಿವೆ ಎಂಬುದನ್ನು ವರದಿ ಮಾಡಬೇಕು. ಅಂತೆಯೇ ಕುಡಿಯುವ ನೀರು, ಯುಜಿಡಿ, ಬೀದಿ ದೀಪ, ರಸ್ತೆ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿರಬೇಕು. ಈ ಕೆಲಸವಾದರೆ ವಲಯ ಕಚೇರಿ ಸ್ಥಾಪಿಸಿ ಸುಗಮವಾಗಿ ನಿರ್ವಹಣೆ ಮಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಖಾಸಗಿ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಿಕೊಂಡು ಮುಂದಿನ ತಿಂಗಳಿಗೆ ಒಂದು ವರ್ಷವಾಗಲಿದೆ. ಇಲ್ಲಿಯವರೆಗೆ ಏನೇನು ಆಗಿದೆ, ಮುಂದೆ ಏನೇನು ಕೆಲಸಗಳು ಆಗಬೇಕು, ಸಮಸ್ಯೆ ಪರಿಹಾರಕ್ಕೆ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಗಮನಿಸಬೇಕು. ನಿವೇಶನಗಳು, ಮನೆಗಳಲ್ಲಿ ಎಷ್ಟು ಖಾತೆಗಳಾಗಿವೆ, ಎಷ್ಟು ಬಾಕಿ ಇವೆ ಎಂಬುದರ ಬಗ್ಗೆ ಮ್ಯಾಪ್ ಸಮೇತ ಒಂದು ಸಮಗ್ರ ವರದಿ ಸಿದ್ಧಪಡಿಸಿಟ್ಟುಕೊಳ್ಳಬೇಕು’ ಎಂದು ಸೂಚಿಸಿದರು. 

ಸಾಧ್ಯತೆ ಇರುತ್ತದೆ:

‘ನಗರಪಾಲಿಕೆಗೆ ಹಸ್ತಾಂತರವಾದ ಮೇಲೆ ಅಪಾರ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಅದನ್ನು ಸಮರ್ಥವಾಗಿ ನಿರ್ವಹಿಸಬೇಕಾಗುತ್ತದೆ. ಮುಂದೆ ವಲಯ ಕಚೇರಿಗಳನ್ನು ವಿಸ್ತರಿಸಿ ಅಧಿಕಾರಿಗಳನ್ನುನೇಮಕ ಮಾಡಿದ ಮೇಲೆ ಯಥಾಸ್ಥಿತಿಯಲ್ಲಿ ಆಡಳಿತ ಸಾಗಬೇಕು. ಜನರಿಗೆ ಎಂದಿನಂತೆ ಸೌಲಭ್ಯಗಳು ದೊರೆಯುವಂತೆ ಆಗಬೇಕು’ ಎಂದರು.

‘ಮುಡಾ ನಿರ್ಮಿಸಿದವು ಹಾಗೂ ಅನುಮೋದಿಸಿದ ಖಾಸಗಿ ಬಡಾವಣೆಗಳನ್ನು ಹಸ್ತಾಂತರಿಸುವಾಗ ಮೂಲಸೌಕರ್ಯಗಳನ್ನು ಕಲ್ಪಿಸದಿರುವ ಬಗ್ಗೆ ಮುಖ್ಯಮಂತ್ರಿ, ನಗರಾಭಿವೃದ್ದಿ ಸಚಿವರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಸಭೆ ನಡೆಸಿ ಇತ್ಯರ್ಥಪಡಿಸುವ ಭರವಸೆಯನ್ನು ಅವರು ನೀಡಿದ್ದಾರೆ’ ಎಂದು ತಿಳಿಸಿದರು.

ನಗರಪಾಲಿಕೆ ಉಪ ಆಯುಕ್ತರಾದ ಜಿ.ಎಸ್.ಸೋಮಶೇಖರ್, ಎಸ್.ಮಂಜು, ಕಾರ್ಯಪಾಲಕ ಎಂಜಿನಿಯರ್‌ ಆರ್.ಶ್ರೀನಿವಾಸ್, ವಲಯ-3ರ ಸಹಾಯಕ ಆಯುಕ್ತ ಸಂದೀಪ್, ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಎಚ್.ಎಂ.ಸುರೇಶ್, ಎಚ್.ಆರ್.ದೀಪಾ, ರವಿಕೀರ್ತಿ, ಎಸ್.ಎಂ.ಸುಜಯಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಸಿಡಿಪಿಒ ಸುಬ್ಬಯ್ಯ,ನಗರಪಾಲಿಕೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಧನುಷ್, ಮಧುಸೂದನ್, ಮೋಹನಕುಮಾರಿ, ನಾಗರಾಜೇಗೌಡ, ಪಿಆರ್‌ಇಡಿ ಎಇಇ ಮೆಹಬೂಬ್, ನಿರ್ಮಿತಿ ಕೇಂದ್ರದ ಎಇಇ ಶ್ವೇತಾ, ತೋಟಗಾರಿಕೆ ಎಇಇ ಪುನೀತ್‌ಕುಮಾರ್ ಹಾಜರಿದ್ದರು.

ಪಟ್ಟಣ ಪಂಚಾಯಿತಿ ಮತ್ತು ನಗರಸಭೆ ವ್ಯಾಪ್ತಿಯಲ್ಲಿರುವ ಸ್ಮಶಾನಗಳ ಅಭಿವೃದ್ಧಿಗೆ ಕೂಡಲೇ ಟೆಂಡರ್ ಕರೆದು ಕ್ರಮ ವಹಿಸಬೇಕು
ಜಿ.ಟಿ. ದೇವೇಗೌಡ ಶಾಸಕ
‘ತೊಂದರೆ ಆಗದಂತೆ ನೋಡಿಕೊಳ್ಳಿ’
‘ನಗರ ಮತ್ತು ಹೊರವಲಯದ ಬಡಾವಣೆಗಳು ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ದಿನದ 24 ಗಂಟೆಯೂ ಕುಡಿಯುವ ನೀರು ಒದಗಿಸುವ ಹಳೇ ಉಂಡುವಾಡಿ ಯೋಜನೆ ಕಾಮಗಾರಿ ಆರು ತಿಂಗಳಲ್ಲಿ ಮುಗಿಯಲಿದೆ. ಅಲ್ಲಿಯವರೆಗೆ ಕಾವೇರಿ ಕಬಿನಿ ಜಲಮೂಲದಿಂದ ಒದಗಿಸುತ್ತಿರುವ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು’ ಎಂದು ಜಿ.ಟಿ. ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.