ADVERTISEMENT

ಗುಜರಾತ್ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ‌ಬೀರುವುದಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 7:24 IST
Last Updated 8 ಡಿಸೆಂಬರ್ 2022, 7:24 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಮೈಸೂರು: ‘ಗುಜರಾತ್‌ ವಿಧಾನಸಭೆ ಚುನಾವಣೆಯ ಫಲಿತಾಂಶ ಕರ್ನಾಟಕದಲ್ಲಿ ಮುಂಬರುವ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ಎಂದು ವಿಧಾನಸಭೆಯ ವಿರೋಧ ‌ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗುಜರಾತ್ ಚುನಾವಣೆ ಫಲಿತಾಂಶದ ಬಗ್ಗೆ ಇಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, 'ಅಲ್ಲಿ ಬಿಜೆಪಿ ಅಧಿಕಾರಕ್ಕೆ
ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆಮ್ ಆದ್ಮಿ ಪಕ್ಷದವರು ಸ್ಪರ್ಧೆ ಮಾಡಿ ಕಾಂಗ್ರೆಸ್ ಮತಗಳನ್ನು ತಿಂದರು. ಆ ಪಕ್ಷದವರು ಪಡೆದ ಮತಗಳೆಲ್ಲ ಕಾಂಗ್ರೆಸ್‌ನದ್ದೇ' ಎಂದು ಹೇಳಿದರು.

'ಒಂದು ರಾಜ್ಯದ ಚುನಾವಣಾ ಫಲಿತಾಂಶದ ಗಾಳಿ ಇನ್ನೊಂದು ರಾಜ್ಯಕ್ಕೆ ಬೀಸುವುದಿಲ್ಲ' ಎಂದರು.

ADVERTISEMENT

'ಇಲ್ಲಿನ ಬಿಜೆಪಿ ಸರ್ಕಾರ ಅತಿ ಭ್ರಷ್ಟ ಸರ್ಕಾರ. ಕಾಂಗ್ರೆಸ್ ಸಂಘಟನೆ ಇಲ್ಲಿ ಶಕ್ತಿಯುತವಾಗಿದೆ. ಗುಜರಾತ್‌ಗೆ ಹೋಲಿಸಬಾರದು. ಕರ್ನಾಟಕದಲ್ಲಿ ಸೋಲುತ್ತೇವೆ ಎಂಬುದು ಬಿಜೆಪಿಯವರಿಗೂ ಗೊತ್ತಿದೆ' ಎಂದರು.

'ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಕಾಂಗ್ರೆಸ್‌ಗೆ ಪ್ಲಸ್ ಆಗಿದೆ' ಎಂದು ಹೇಳಿದರು.

'ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ಬಹಳ ಹಣ ಖರ್ಚು ಮಾಡಿತು. ಬಿಜೆಪಿಯವರೇ ಆ ಪಕ್ಷಕ್ಕೆ ಫಂಡ್ ಮಾಡಿದ್ದಾರೆ (ಹಣ ಒದಗಿಸಿದ್ದಾರೆ). ಕಾಂಗ್ರೆಸ್ ಮತ ವಿಭಜನೆಗಾಗಿ ಆಮ್ ಆದ್ಮಿ ಪಕ್ಷಕ್ಕೆ ಬಿಜೆಪಿ ಫಂಡ್ ಮಾಡಿತು' ಎಂದು ಆರೋಪಿಸಿದರು.

'ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಇಲ್ಲಿ ಬಿಜೆಪಿ ತಂತ್ರಗಾರಿಕೆ ಮಾಡಬಹುದು. ಆದರೆ, ಅದು ನಡೆಯುವುದಿಲ್ಲ. ಕರ್ನಾಟಕದ ಆಡಳಿತ ಪರಿಸ್ಥಿತಿ ಬಹಳ ಕೆಟ್ಟದಾಗಿದೆ' ಎಂದರು.

'ಅಷ್ಟು ದುಡ್ಡು ಖರ್ಚು ಮಾಡಿದರೂ ಆಮ್ ಆದ್ಮಿ ಪಕ್ಷ 6 ಸ್ಥಾನ ಪಡೆದಿದೆ. ಅವರಿಂದ ಮತ ವಿಭಜನೆಯಾಗಿದೆ' ಎಂದು ಆರೋಪಿಸಿದರು.

'ಕರ್ನಾಟಕದಲ್ಲಿ ಕಾಂಗ್ರೆಸ್ ಸುಮ್ಮನೆ ಇದ್ದರೂ ಗೆಲ್ಲುತ್ತದೆ. ನಾವು ಯಾವುದೇ ತಂತ್ರಗಾರಿಕೆ ಮಾಡುವುದೇ ಬೇಡ. ಮೋದಿ ಹವಾ ಎಲ್ಲೂ ಇಲ್ಲ. ಹವಾ ಇದ್ದಿದ್ದರೆ ದೆಹಲಿಯಲ್ಲೇ ಸೋಲುತ್ತಿದ್ದರೇಕೆ. ಎಲ್ಲಿ ಹೋಯಿತು ಮೋದಿ ಹವಾ?' ಎಂದು ವ್ಯಂಗ್ಯವಾಗಿ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.