ADVERTISEMENT

ವಿರೋಧ ನಾಗರಿಕವಾಗಿರಲಿ: ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 18:25 IST
Last Updated 30 ಆಗಸ್ಟ್ 2025, 18:25 IST

ಮೈಸೂರು:‘ಲೇಖಕಿ ಬಾನು ಮುಷ್ತಾಕ್ ವಿಷಯದಲ್ಲಿ ವಿರೋಧವು ನಾಗರಿಕವಾಗಿರಬೇಕೇ ಹೊರತು ಅಸಹ್ಯಕರವಾಗಿರಬಾರದು. ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಜನಾಂಗೀಯ ದ್ವೇಷ ಹಂಚುವಂಥ ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌ ಪ್ರತಿಪಾದಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅಶೋಕ್‌ ಅವರಿಗೆ ನಾಚಿಕೆಯಾಗಬೇಕು. ದನದ ಮಾಂಸ ತಿಂದು ಬರುತ್ತಾರೆಂದು ದೂರುತ್ತಾರೆ. ಆದರೆ ಗೋವಾ, ಗುಜರಾತ್, ಒರಿಸ್ಸಾದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿರುವವರೇ ಬಿಜೆಪಿಗರು. ಗೋಮಾಂಸ ರಫ್ತಿನಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದೆ. ಬಾಯಿಗೆ ಬಂದಂತೆ ಮಾತನಾಡಬಾರದು. ಸ್ಥಾನಕ್ಕೆ ಗೌರವ ತರುವುದಿಲ್ಲ’ ಎಂದರು.

‘ಬಾನು ಮುಷ್ತಾಕ್ ಚಾಮುಂಡಿ ಬೆಟ್ಟ ಹತ್ತಬಾರದು ಎನ್ನುವ ಅಧಿಕಾರವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ನೀಡಿದವರು ಯಾರು? ಇದು ಪ್ರಜಾಪ್ರಭುತ್ವದ ರಾಷ್ಟ್ರ. ಬೆಟ್ಟವು ಯಾವುದೇ ಜಾತಿ, ಧರ್ಮದ ಆಸ್ತಿಯಲ್ಲ. ಸರ್ಕಾರದ ಆಸ್ತಿ’ ಎಂದರು.

ADVERTISEMENT

‘ಸರ್ಕಾರದ ಅಯ್ಕೆ ಸ್ವಾಗತಾರ್ಹ. ಎರಡು ವರ್ಷ ಹಿಂದೆ ಬಾನು ಮುಷ್ತಾಕ್ ಯಾವ ಸಂದರ್ಭದಲ್ಲಿ, ತಾವು ಯಾವ ಅರ್ಥದಲ್ಲಿ ಕನ್ನಡ ಕುರಿತಂತೆ ಹೇಳಿಕೆ ನೀಡಿದ್ದರು ಎಂಬ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೌನ ಮುರಿದು ವಿವಾದಕ್ಕೆ ಅಂತ್ಯ ಹಾಡಬೇಕು’ ಎಂದು ಒತ್ತಾಯಿಸಿದರು.

‘ಮೈಸೂರು ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರನ್ನು ನಾಲ್ವಡಿ ಕೃಷ್ಣರಾಯ ಒಡೆಯರ್‌ ಎರಡು ಬಾರಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಕರೆದೊಯ್ದಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಬಾನು ಮುಷ್ತಾಕ್‌ ಅವರ ಆಯ್ಕೆ ವಿರೋಧಿಸುವ ಮೊದಲು, ಮಾಜಿ ಸಂಸದ ಪ್ರತಾಪ ಸಿಂಹ ಚರಿತ್ರೆಯನ್ನು ಓದಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.