
ಹುಣಸೂರು: ‘ದೇವರಾಜ ಅರಸು ರಾಜಕೀಯ ಕರ್ಮ ಭೂಮಿಯನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಆಂದೋಲನ ಪುನಃ ಪ್ರಾರಂಭಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡುವಂತೆ’ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮನವಿ ಮಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಣಸೂರು ಉಪವಿಭಾಗಕ್ಕೆ 6 ತಾಲ್ಲೂಕುಗಳು ಸೇರಿದ್ದು, ಅಪಾರ ಅರಣ್ಯ ಸಂಪತ್ತು ಸೇರಿದಂತೆ ನೀರಾವರಿ ಪ್ರದೇಶವಿದೆ. ಈ 6 ತಾಲ್ಲೂಕುಗಳನ್ನು ಒಳಗೂಡಿ ಜಿಲ್ಲಾ ಕೇಂದ್ರವನ್ನಾಗಿಸುವುದರಿಂದ ಮೈಸೂರು ಜಿಲ್ಲಾ ಕೇಂದ್ರದ ಮೇಲೆ ಆಡಳಿತಾತ್ಮಕ ಹೊರೆ ತಗ್ಗಲಿದೆ’ ಎಂದು ತಿಳಿಸಿದರು.
‘ಜಿಲ್ಲಾಡಳಿತ ಆಂದೋಲನಕ್ಕೆ ಸಂಬಂಧಿಸಿದಂತೆ ಶಾಸಕ ಜಿ.ಡಿ.ಹರೀಶ್ ಗೌಡ ನೇತೃತ್ವದಲ್ಲಿ ಮಾಜಿ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಒಳಗೊಂಡಂತೆ ಸಂಘ ಸಂಸ್ಥೆ ಮತ್ತು ಸಾರ್ವಜನಿಕರೊಂದಿಗೆ ಸರ್ಕಾರದ ಗಮನಕ್ಕೆ ತಂದು ದೇವರಾಜ ಅರಸು ಜಿಲ್ಲೆ ಎಂದು ನಾಮಕರಣ ಮಾಡಲು ಕೈ ಜೋಡಿಸಲು’ ಮನವಿ ಮಾಡಿದರು.
ರಾಜ್ಯ ಸರ್ಕಾರ ಬಜೆಟ್ ಮಂಡನೆ ಬಳಿಕ ಹೊಸ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳ ಬಗ್ಗೆ ಚರ್ಚೆಗೆ ತೆಗೆದುಕೊಳ್ಳಲಿದ್ದು, ಆ ಹಂತದಲ್ಲಿ ಹುಣಸೂರು ಉಪವಿಭಾಗವನ್ನು ಜಿಲ್ಲಾಡಳಿತವನ್ನಾಗಿಸುವ ಬಗ್ಗೆ ಉಪಮುಖ್ಯಮಂತ್ರಿಗಳ ಗಮನ ಸೆಳೆಯಲು ಸೂಕ್ತ ಸಮಯ ಇದಾಗಿದೆ ಎಂದರು.
ವಚನ ಭ್ರಷ್ಟ: ‘ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬರುವ ಮುನ್ನ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರ ನಡುವೆ 30 ತಿಂಗಳ ಅನುಪಾತದ ಆಡಳಿತಕ್ಕೆ ಒಪ್ಪಂದವಾಗಿತ್ತು. ಈಗ ಸಿದ್ದರಾಮಯ್ಯ ವಚನ ಭ್ರಷ್ರರಾಗಿದ್ದು, 5 ವರ್ಷ ಆಡಳಿತ ಮುಗಿಯುವವರೆಗೆ ಸಿದ್ದರಾಮಯ್ಯ ಕಾಂಗ್ರೆಸ್ ಮನೆಗೆ ಶಾಶ್ವತ ಬೀಗ ಹಾಕಿ ಹೊರಡುವುದರಲ್ಲಿ ಅನುಮಾನವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಭಿವೃದ್ಧಿಗೆ ಸಾಥ್: ಹುಣಸೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ತಾವು ಅಧಿಕಾರದಲ್ಲಿದ್ದಾಗ ಮತ್ತು ಇಲ್ಲದಿದ್ದಾಗಲೂ ಸಾಥ್ ನೀಡಿರುವೆ. ಲಕ್ಷ್ಮಣತೀರ್ಥ ನದಿ ಶುದ್ಧಿಕರಣ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಸರ್ಕಾರದಿಂದ ತಂದ ₹ 40ಕೋಟಿ ಯೋಜನೆಗೆ ಅಡ್ಡಿಪಡಿಸಿಲ್ಲ. ಅಭಿವೃದ್ಧಿ ಯೋಜನೆಗಳ ಪರವಾಗಿ ನಿಲ್ಲುವ ವ್ಯಕ್ತಿತ್ವವಿದ್ದು, ದಾಖಲೆ ಸಮೇತ ದೃಢಪಡಿಸಲಿ. ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದು ಖಂಡನೀಯ ಎಂದರು.
ಕ್ಷೇತ್ರದ ಶಾಸಕರಾಗಿ 14 ತಿಂಗಳ ಅವಧಿಯಲ್ಲಿ ಏತ ನೀರಾವರಿ, ಗ್ರಾಮಗಳ ರಸ್ತೆ ಅಭಿವೃದ್ಧಿ ಸೇರಿದಂತೆ ಆಸ್ಪತ್ರೆ, ದೇವರಾಜ ಕಲಾ ಮಂದಿರಗಳಿಗೆ ಒತ್ತು ನೀಡಿ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಈ ಎಲ್ಲಾ ಕೆಲಸಗಳು ಶಾಶ್ವತವಾಗಿದೆ ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಇದ್ದರು.
‘ಕೆಡಿಪಿ ಸಭೆ ನಡೆಸದೆ ಕಾಲ ವ್ಯಯ’
‘ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಒಂದು ಬಾರಿಯೂ ಹುಣಸೂರು ತಾಲ್ಲೂಕಿನಲ್ಲಿ ಕೆಡಿಪಿ ಸಭೆ ನಡೆಸದೆ ಕಾಲ ವ್ಯಯಮಾಡಿದ್ದಾರೆ. ಸರ್ಕಾರ ಕ್ಷೇತ್ರಕ್ಕೆ ನೀಡಿದ ಯೋಜನೆ ಮತ್ತು ಅನುಷ್ಟಾನ ಕುರಿತ ಪರಿಶೀಲನಾ ಸಭೆ ಮಾಡದ ಇವರು ಯಾವ ರೀತಿ ಆಡಳಿತ ನೀಡಬಲ್ಲರು’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.